ಈ ಸಂಚಿಕೆಯೊಂದಿಗೆ ಗಣಕಿಂಡಿ ಅಂಕಣಕ್ಕೆ ನೂರು ತುಂಬುತ್ತಿದೆ. ಈ ಅಂಕಣವನ್ನು ಮೆಚ್ಚಿ ಪ್ರೋತ್ಸಾಹಿಸಿದ ಎಲ್ಲ ಓದುಗರಿಗೆ ಧನ್ಯವಾದಗಳು. ಈ ಸಂಚಿಕೆಯನ್ನು "ನೂರು" ಎಂಬ ವಿಷಯದ ಸುತ್ತ ರಚಿಸಲಾಗಿದೆ. |
ಅಂತರಜಾಲಾಡಿ
ಉತ್ತಮ ೧೦೦
ಪ್ರತಿಯೊಂದು ಕ್ಷೇತ್ರದಲ್ಲೂ ಟಾಪ್-೧೦, ಟಾಪ್-೧೦೦ ಪಟ್ಟಿ ಮಾಡುವ ಅಭ್ಯಾಸವಿದೆ. ಅದೇ ರೀತಿ ಅಂತರಜಾಲದಲ್ಲಿರುವ ಲಕ್ಷಗಟ್ಟಳೆ ಜಾಲತಾಣಗಳಲ್ಲಿರುವ ಅತ್ಯುತ್ತಮ ೧೦೦ ಜಾಲತಾಣಗಳ ಪಟ್ಟಿಗಳೂ ಇವೆ. ಹೌದು, ಪಟ್ಟಿ ಅಲ್ಲ, ಪಟ್ಟಿಗಳು. ಅಂದರೆ ಈ ರೀತಿಯ ಪಟ್ಟಿಗಳನ್ನು ಹಲವಾರು ಮಂದಿ ಮಾಡಿದ್ದಾರೆ. ಪ್ರತಿಯೊಬ್ಬರೂ ತಮಗೆ ಸರಿ ಎಂದು ತೋರಿದ ಕೆಲವು ಗುಣಲಕ್ಷಣಗಳನ್ನು ಈ ಪಟ್ಟಿ ತಯಾರಿಸಲು ಆಯ್ಕೆಯ ಮಾನದಂಡವಾಗಿ ಇಟ್ಟುಕೊಂಡಿದ್ದಾರೆ. ಇಂತಹ ಒಂದು ಪಟ್ಟಿಯ ಜಾಲತಾಣ www.100bestwebsites.org. ಈ ಪಟ್ಟಿಯನ್ನು ಜಾಲತಾಣಗಳ ಜನಪ್ರಿಯತೆಯ ಮೇಲಿಂದ ತಯಾರಿಸಿಲ್ಲ. ಆಯ್ಕೆಗೆ ಅನುಸರಿಸಿದ ಮಾನದಂಡ ಏನು ಎಂಬುದನ್ನು ಜಾಲತಾಣದಲ್ಲೇ ನೀಡಿದ್ದಾರೆ. ಪ್ರತಿ ಜಾಲತಾಣದ ಕೊಂಡಿಯ ಜೊತೆ ಚಿಕ್ಕ ವಿವರಣೆ ಇಲ್ಲಿದೆ. ಇದೇ ಮಾದರಿಯ ಇನ್ನೊಂದು ಪಟ್ಟಿ ಇಲ್ಲಿದೆ - www.web100.com/web-100. ಉತ್ತಮ ಭಾರತೀಯ ಜಾಲತಾಣಗಳ ಪಟ್ಟಿ ಇನ್ನೂ ಪರಿಪೂರ್ಣವಾಗಿ ತಯಾರಾಗಿಲ್ಲ.
ಡೌನ್‌ಲೋಡ್
ನೂರು ಡೌನ್‌ಲೋಡ್‌ಗಳು
ಗಣಕ ಬಳಸಲು ಹಲವಾರು ತಂತ್ರಾಂಶಗಳು ಬೇಕು. ಅಂತರಜಾಲದಲ್ಲಿ ಬೇಕಾದಷ್ಟು ತಂತ್ರಾಂಶಗಳು ಲಭ್ಯ. ಇಂತಹ ತಂತ್ರಾಂಶಗಳಲ್ಲಿ ವಾಣಿಜ್ಯಕ, ಉಚಿತ, ಮುಕ್ತ ಎಂದು ಹಲವು ಬಗೆ. ಹಲವಾರು ತಂತ್ರಾಂಶ ತಯಾರಕರು ತಮ್ಮ ಉತ್ಪನ್ನಗಳನ್ನು ತಮ್ಮ ತಮ್ಮ ಜಾಲತಾಣಗಳಲ್ಲಿ ನೀಡುತ್ತಾರೆ. ಕೆಲವು ಜಾಲತಾಣಗಳಲ್ಲಿ ಸಾವಿರಾರು ತಂತ್ರಾಂಶಗಳು ಡೌನ್‌ಲೋಡ್ ಮಾಡಿಕೊಳ್ಳಲು ಲಭ್ಯ. ಇಂತಹ ಜಾಲತಾಣಗಳಲ್ಲಿ ಹಲವು ಅತೀ ಅಗತ್ಯ ತಂತ್ರಾಂಶಗಳು ಎಂಬ ಪಟ್ಟಿ ನೀಡಿ ಅವನ್ನು ಪ್ರತ್ಯೇಕವಾಗಿ ನೀಡುತ್ತವೆ. ಇದೇ ಮಾದರಿಯಲ್ಲಿ ಅತೀ ಅಗತ್ಯ ಮತ್ತು ಉಪಯುಕ್ತ ೧೦೦ ಉಚಿತ ತಂತ್ರಾಂಶಗಳು ದೊರೆಯುವ ಜಾಲತಾಣ 100-downloads.com. ನಿಮ್ಮ ಗಣಕವನ್ನು ಸುಸ್ಥಿತಿಯಲ್ಲಿಡಲು, ದಿನನಿತ್ಯದ ಕೆಲಸಗಳನ್ನು ಮಾಡಲು, ಕೆಲವು ಉಪಯುಕ್ತ ಆನ್ವಯಿಕ ತಂತ್ರಾಂಶಗಳು -ಹೀಗೆ ಹಲವು ವಿಭಾಗಗಳಲ್ಲಿ ೧೦೦ ಉತ್ತಮ ತಂತ್ರಾಂಶಗಳು ಇಲ್ಲಿ ಡೌನ್‌ಲೋಡ್ ಮಾಡಿಕೊಳ್ಳಲು ಲಭ್ಯ.
e - ಸುದ್ದಿ
ನೂರು ವರ್ಷ. ಕೈಕೊಟ್ಟ ಭಾರಿ ಭರವಸೆಗಳು
ಕೈಕೊಟ್ಟ ನೂರಾರು ಭರವಸೆಗಳು ನಮಗೆಲ್ಲ ಅಭ್ಯಾಸವಾಗಿ ಹೋಗಿವೆ. ಇಲ್ಲಿ ಹೇಳಹೊರಟಿದ್ದು ರಾಜಕಾರಣಿಗಳು ನೀಡಿದ ಭರವಸೆಗಳನ್ನಲ್ಲ. ಬದಲಿಗೆ ತಂತ್ರಜ್ಞರು ನೀಡಿದ್ದು. ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಸಂಶೋಧನೆ ಮತ್ತು ಉತ್ಪನ್ನಗಳು ಬರುತ್ತಲೇ ಇರುತ್ತವೆ. ಕೆಲವೊಮ್ಮೆ ತುಂಬ ಕ್ರಾಂತಿಕಾರಿ ಸಂಶೋಧನೆಗಳು ನಡೆದು ಜೀವನವನ್ನೇ ಸಂಪೂರ್ಣವಾಗಿ ಬದಲಿಸಬಲ್ಲ ಸಂಶೋಧನೆ ಎಂಬ ಹೆಸರು ಪಡೆಯುತ್ತವೆ. ಆದರೆ ಈ ರೀತಿ ಭರವಸೆ ನೀಡಿ ನಂತರ ಹೇಳಹೆಸರಿಲ್ಲದೆ ನಾಪತ್ತೆಯಾದವೂ ಹಲವಾರಿವೆ. ನೂರು ವರ್ಷಗಳಲ್ಲಿ ಈ ರೀತಿ ತುಂಬ ಭರವಸೆ ನೀಡಿ ನಂತರ ಬಳಕೆಗೆ ಬಾರದ ಸಂಶೋಧನೆಗಳ ಪಟ್ಟಿಯೂ ಅಂತರಜಾಲದಲ್ಲಿದೆ. ಇದರಲ್ಲಿರುವ ಕೆಲವು ಪ್ರಮುಖವಾದವುಗಳು - ಗಾಜಿನ ಗುಮ್ಮಟದೊಳಗೆ ಇಡೀ ನಗರ, ಹಾರುವ ಕಾರು, ಜ್ಞಾನದ ಗುಳಿಗೆ, ಹೊಂಡ ತೆಗೆಯಲು ಪರಮಾಣು ಬಾಂಬ್ ಬಳಕೆ, ಇತ್ಯಾದಿ. ಈ ಪಟ್ಟಿಯನ್ನು ಓದಬೇಕಿದ್ದಲ್ಲಿ gizmo.do/hY8mZJ ಜಾಲತಾಣಕ್ಕೆ ಭೇಟಿ ನೀಡಿ.
e- ಪದ
ನೂರು ಡಾಲರ್ ಲ್ಯಾಪ್‌ಟಾಪ್ ($100 laptop - XO) -ಪ್ರಪಂಚದ ಪ್ರತಿ ಮಗುವಿಗೂ ಒಂದು ಲ್ಯಾಪ್‌ಟಾಪ್ ನೀಡಬೇಕು ಎಂಬ ಕಳಕಳಿಯಿಂದ ಪ್ರಾರಂಭವಾದ ಯೋಜನೆ. ನಿಕೊಲಾಸ್ ನೆಗ್ರೊಪೊಂಟೆಯವರ ಕನಸಿನ ಕೂಸು ಇದು. ೨೦೦೭ರಲ್ಲಿ ಇದರ ಘೋಷಣೆ ಆಯಿತು. ಇನ್ನೂ ಈ ಕನಸು ಪೂರ್ತಿಯಾಗಿ ನನಸಾಗಿಲ್ಲ. ಇತ್ತೀಚೆಗಂತೂ "೧೦೦ ಡಾಲರ್‌ಗೆ ಲ್ಯಾಪ್‌ಟಾಪ್ ನೀಡಲು ಸಾಧ್ಯವಿಲ್ಲ, ಅದುದರಿಂದ ಅದನ್ನು ೨೦೦ ಡಾಲರ್‌ಗೆ ಏರಿಸಬೇಕು" ಎಂಬ ಮಾತು ಕೇಳಿಬರುತ್ತಿದೆ.
e - ಸಲಹೆ
ಪ್ರ: ಘಂಟೆಗೆ ನೂರು ಡಾಲರು ಹಣ ಸಂಪಾದಿಸಿ ಎಂದು ಜಾಲತಾಣವೊಂದರಲ್ಲಿ ಜಾಹೀರಾತು ನೋಡಿದೆ. ಇದು ನಿಜವೇ ಅಥವಾ ಒಂದು ವಂಚನೆಯ ಜಾಲವೇ?
ಉ: ಘಂಟೆಗೆ ನೂರು ಡಾಲರು ಗಳಿಸಿ ಅಲ್ಲ ಕಳೆದುಕೊಳ್ಳಿ! ಅಂತರಜಾಲದ ಮೂಲಕ ನಡೆಯುವ ಹಲವಾರು ವಂಚನೆಗಳಲ್ಲಿ ಒಂದು ಎಂದರೆ ಅಂತರಜಾಲದ ಮೂಲಕ ಹಣ ಸಂಪಾದಿಸಿ ಎಂಬುದು. ನಿಮ್ಮಲ್ಲಿ ಗಣಕ ಮತ್ತು ಅಂತರಜಾಲ ಸಂಪರ್ಕವಿದ್ದರೆ ಸಾಕು, ಅಂತರಜಾಲದ ಮೂಲಕ ಹಣ ಸಂಪಾದಿಸುವುದು ಹೇಗೆ ಎಂದು ನಾವು ಹೇಳಿಕೊಡುತ್ತೇವೆ ಎಂದು ಜಾಹೀರಾತು ಹೇಳುತ್ತದೆ. ಅದರಲ್ಲಿ ತುಂಬ ಕುಖ್ಯಾತವಾದುದು ಘಂಟೆಗೆ ನೂರು ಡಾಲರು ಸಂಪಾದಿಸಿ ಎಂಬುದು. ಅವರ ಯೋಜನೆಗೆ ಸೇರಲು ಪ್ರಾರಂಭದಲ್ಲಿ ನೀವು ನೂರು ಡಾಲರು ಹಣ ನೀಡಬೇಕಾಗುತ್ತದೆ. ನಂತರ ನಿಮಗೆ ಒಂದು ತಂತ್ರಾಂಶವನ್ನು ಅಂತರಜಾಲದಿಂದ ಡೌನ್‌ಲೋಡ್ ಮಾಡಿಕೊಳ್ಳಲು ಸೂಚಿಸುತ್ತಾರೆ. ನಂತರ ಯಾವು ಯಾವುದೋ ಜಾಲತಾಣಗಳಲ್ಲಿ ಕ್ಲಿಕ್ ಮಾಡುವುದು, ಅಥವಾ ಅರ್ಜಿ ತುಂಬುವುದು, ಅಥವಾ ಇನ್ನೇನೋ ಮಾಡಲು ಹೇಳುತ್ತಾರೆ. ತಿಂಗಳ ಕೊನೆಗೆ ನಿಮಗೆ ಹಣವಂತೂ ಬರುವುದಿಲ್ಲ! ಈ ರೀತಿಯ ವಂಚನೆಗೆ ನೂರು ಡಾಲರು ವಂಚನೆ ಎಂಬ ಹೆಸರೇ ಇದೆ!
ಕಂಪ್ಯೂತರ್ಲೆ
ಕೌರವರು ಎಷ್ಟು ಮಂದಿ?
ಇದಕ್ಕೂ ಗಣಕಕ್ಕೂ ಏನು ಸಂಬಂಧ, ಇಮಾಂ ಸಾಬಿಗೂ ಗೋಕುಲಾಷ್ಟಮಿಗೂ ಇದ್ದಂತೆ, ಎಂದು ಕೇಳುತ್ತಿದ್ದೀರಾ? ಸ್ವಲ್ಪ ತಾಳಿ, ವಿವರಿಸುತ್ತೇನೆ. ಧೃತರಾಷ್ಟ್ರ ಚಕ್ರವರ್ತಿಗೆ ೧೦೧ ಮಕ್ಕಳು ಎಂಬ ವಿಷಯ ಎಲ್ಲರಿಗೂ ಗೊತ್ತು ಎಂದು ಹೇಳಬಹುದು. ಆ ನೂರ ಒಂದು ಹೆಸರುಗಳನ್ನು ಸ್ವಲ್ಪ ಹೇಳಿ ನೋಡೋಣ. ಧುರ್ಯೋಧನ, ದುಶ್ಶಾಸನ, ವಿಕರ್ಣ, ಯುಯುತ್ಸು (ದಾಸಿಪುತ್ರ), ದುಶ್ಶಳೆ (ಮಗಳು, ಜಯದ್ರಥನ ಹೆಂಡತಿ) ಇಷ್ಟು ಹೆಸರುಗಳು ಮಾತ್ರ ಕೂಡಲೆ ಎಲ್ಲರಿಗೂ ಬಾಯಿಗೆ ಬರುತ್ತವೆ. ಮುಂದಿನ ಹೆಸರುಗಳು ಮಹಾಭಾರತದ ಒಂದು ಲಕ್ಷ ಶ್ಲೋಕಗಳಲ್ಲಿ ಎಲ್ಲೋ ಹುದುಗಿವೆ. ಅದುದರಿಂದ ಧೃತರಾಷ್ಟ್ರನಿಗೂ ಕೇವಲ ಐದೇ ಮಕ್ಕಳು ಇದ್ದದ್ದು ಎಂದು ನಾವು ತೀರ್ಮಾನಿಸಬಹುದು. ಹಾಗಾದರೆ ಕೌರವರು ೧೦೧ ಆದದ್ದು ಹೇಗೆ? ಅದು ಹೀಗೆ: ಧೃತರಾಷ್ಟ್ರ ಹುಟ್ಟು ಕುರುಡ. ಅವನಿಗೆ ಹತ್ತು ಅಂಕೆಗಳನ್ನು ನೆನಪಿಟ್ಟುಕೊಳ್ಳಲು ಆಗುತ್ತಿರಲಿಲ್ಲ. ಅವನಿಗೆ ಗೊತ್ತಿದ್ದದ್ದು ಎರಡೇ ಅಂಕೆಗಳು -ಸೊನ್ನೆ ಮತ್ತು ಒಂದು. ಅವನು ಲೆಕ್ಕ ಮಾಡುತ್ತಿದ್ದದ್ದು (ಗಣಕಗಳಲ್ಲಿ ಚಾಲ್ತಿಯಲ್ಲಿರುವ) ದ್ವಿಮಾನ ಪದ್ಧತಿಯಲ್ಲಿ. ದಶಮಾನ ಪದ್ಧತಿಯ ೫ ದ್ವಿಮಾನ ಪದ್ಧತಿಯಲ್ಲಿ ೧೦೧ ಆಗುತ್ತದೆ!
ಓದುಗರಿಗೆ ಪ್ರಶ್ನೆ:
ಗಣಕಿಂಡಿ ಅಂಕಣದ ಎಲ್ಲ ಹಳೆಯ ಸಂಚಿಕೆಗಳನ್ನು ganakindi.blogspot.com ಜಾಲತಾಣದಲ್ಲಿ ಓದಬಹುದು. ಇದುವರೆಗಿನ ಎಲ್ಲ ಸಂಚಿಕೆಗಳಲ್ಲಿ ನಿಮಗೆ ಇಷ್ಟವಾದ ಅಂತರಜಾಲಾಡಿ, ಡೌನ್‌ಲೋಡ್, e - ಸುದ್ದಿ, e- ಪದ, e - ಸಲಹೆ, ಕಂಪ್ಯೂತರ್ಲೆ ಯಾವುದು ಮತ್ತು ಯಾಕೆ ಎಂದು ganakindi AT gmail DOT com ವಿಳಾಸಕ್ಕೆ ಇಮೈಲ್ ಮೂಲಕ ತಿಳಿಸಬೇಕು. ಪ್ರತಿಯೊಂದು ವಿಭಾಗಕ್ಕೂ ಸಕಾರಣ ಉತ್ತಮ ಆಯ್ಕೆಗೆ ಒಂದು ಪುಸ್ತಕ ಬಹುಮಾನ ನೀಡಲಾಗುವುದು. ಪುಸ್ತಕಗಳನ್ನು ಕನ್ನಡದ ಖ್ಯಾತ ವಿಜ್ಞಾನ ಲೇಖಕರುಗಳಾದ ನಾಗೇಶ ಹೆಗಡೆ, ಡಾ| ಪಿ. ಎಸ್. ಶಂಕರ, ಟಿ. ಆರ್. ಅನಂತರಾಮು, ಕೊಳ್ಳೆಗಾಲ ಶರ್ಮ, ಬೇಳೂರು ಸುದರ್ಶನ, ಟಿ. ಜಿ. ಶ್ರೀನಿಧಿ ಅವರು ಪ್ರಾಯೋಜಿಸುತ್ತಿದ್ದಾರೆ. ನಿಮ್ಮ ಉತ್ತರಗಳನ್ನು ಮೆ ೨ರ ಒಳಗೆ ತಿಳಿಸತಕ್ಕದ್ದು.
ಅಭಿನಂದನೆಗಳು. ಕೌರವರ ಜೋಕು ಚೆನ್ನಾಗಿದೆ.
ಪ್ರತ್ಯುತ್ತರಅಳಿಸಿ- ಕೇಶವ
''ಗಣಕಿಂಡಿ - ೧೦೦''ತುಂಬಾ ಚೆನ್ನಾಗಿದೆ.ಅಭಿನಂದನೆಗಳು.
ಪ್ರತ್ಯುತ್ತರಅಳಿಸಿನಮಸ್ತೆ,
ಪ್ರತ್ಯುತ್ತರಅಳಿಸಿಗಣಕಿಂಡಿಗೆ ನೂರರ ಅಭಿನಂದನೆಗಳು.
ಉಪಯುಕ್ತವಾದ ಅಂಕಣ ಇದು. short and sweet ಆಗಿ ಮಾಹಿತಿಗಳನ್ನು ತಿಳಿಸಿಕೊಡುತ್ತೀರಿ.
ಅನೇಕ ವಿಷಯಗಳನ್ನು ಇದರಿಂದ ತಿಳಿದುಕೊಂಡಿದ್ದೇನೆ. ಸಹಾಯವಾಗಿದೆ. ಧನ್ಯವಾದಗಳು. ಬರೆಯುತ್ತಿರಿ.
ಗಣಕಿಂಡಿ ಯ ನೂರರ ಸಂಭ್ರಮಕ್ಕೆ ಅಭಿನಂದನೆಗಳು. ಉತ್ತಮ ಮಾಹಿತಿಗಳನ್ನು ತಿಳಿಸುತ್ತೀರಿ. ಧನ್ಯವಾದಗಳು.
ಪ್ರತ್ಯುತ್ತರಅಳಿಸಿ