ಮಂಗಳವಾರ, ಡಿಸೆಂಬರ್ 13, 2011

ಗಣಕಿಂಡಿ - ೧೩೪ (ಡಿಸೆಂಬರ್ ೧೨, ೨೦೧೧)

ಅಂತರಜಾಲಾಡಿ

ಆವರ್ತಕೋಷ್ಟಕ ಜಾಲತಾಣ

ಇದು ಅಂತಾರಾಷ್ಟ್ರೀಯ ರಸಾಯನಶಾಸ್ತ್ರ ವರ್ಷ. ಸ್ವಲ್ಪ ರಾಸಾಯನಿಕ ವಸ್ತುಗಳ ಅದರಲ್ಲೂ ಮೂಲವಸ್ತುಗಳ ಕಡೆಗೆ ಗಮನ ಕೊಡೋಣ. ಎಲ್ಲ ಮೂಲವಸ್ತುಗಳನ್ನು ಕ್ರಮಬದ್ಧವಾಗಿ ಜೋಡಿಸಿದ ಆವರ್ತಕೋಷ್ಟಕ (periodic table) ಎಲ್ಲ ರಸಾಯನಶಾಸ್ತ್ರ ವಿದ್ಯಾರ್ಥಿಗಳಿಗೆ ಅತಿ ಮುಖ್ಯ. ಮೂಲವಸ್ತುಗಳ ವಿವಿಧ ಗುಣವೈಶಿಷ್ಟ್ಯಗಳನ್ನು ಒಂದು ಕ್ರಮದಲ್ಲಿ ಇದರಲ್ಲಿ ಜೋಡಿಸಲಾಗಿದೆ. ಈ ಆವರ್ತಕೋಷ್ಟಕದ ಬಗ್ಗೆ ಹಲವಾರು ಜಾಲತಾಣಗಳಿವೆ. ಡೌನ್‌ಲೋಡ್ ಮಾಡಿಕೊಂಡು ನಿಮ್ಮ ಗಣಕದಲ್ಲಿ ಅನುಸ್ಥಾಪಿಸಬಲ್ಲ ತಂತ್ರಾಂಶಗಳೂ ಇವೆ. ಆವರ್ತಕೋಷ್ಟಕ ಮತ್ತು ಮೂಲವಸ್ತುಗಳ ಬಗ್ಗೆ ಒಂದು ಜನಪ್ರಿಯ ಜಾಲತಾಣ www.webelements.com. ಎಲ್ಲ ಮೂಲವಸ್ತುಗಳ ಗುಣವೈಶಿಷ್ಟ್ಯಗಳ ವಿವರಗಳಲ್ಲದೆ ಹಲವು ಮಾದರಿಗಳು, ವೈಜ್ಞಾನಿಕ ಆಟಿಕೆಗಳೂ ಇಲ್ಲಿ ಮಾರಾಟಕ್ಕಿವೆ.

ಡೌನ್‌ಲೋಡ್

ಮಕ್ಕಳಿಗಾಗಿ ಪ್ರೋಗ್ರಾಮ್ಮಿಂಗ್

ಗಣಕವನ್ನು ಬಳಸುವುದು ಒಂದಾದರೆ ಗಣಕದಲ್ಲಿ ಕ್ರಮವಿಧಿ ರಚಿಸುವುದು (ಪ್ರೋಗ್ರಾಮ್ಮಿಂಗ್) ಇನ್ನೊಂದು. ಇದು ಕೇವಲ ಆಸಕ್ತರಿಗೆ ಹಾಗೂ ಪರಿಣತರಿಗೆ. ಗಣಕದಲ್ಲಿ ಕ್ರಮವಿಧಿ ರಚಿಸಲು ಹಲವು ಭಾಷೆಗಳು (programming languages) ಲಭ್ಯವಿವೆ. ಉದಾ -C, C++, Java, C#, ASP.NET, ಇತ್ಯಾದಿ. ಇವೆಲ್ಲ ದೊಡ್ಡವರಿಗಾಗಿ ಹಾಗೂ ಕಲಿಯಲು ಕ್ಲಿಷ್ಟವಾದ ಭಾಷೆಗಳು. ಮಕ್ಕಳಿಗಾಗಿ ಲೋಗೋ ಎಂಬ ಭಾಷೆ ಸುಮಾರು ವರ್ಷಗಳಿಂದ ಬಳಕೆಯಲ್ಲಿದೆ. ಲೋಗೋ ಮಾದರಿಯಲ್ಲೇ ಮಕ್ಕಳಿಗೆಂದೇ ರಚಿಸಲಾದ ಕ್ರಮವಿಧಿ ರಚನೆಯ ಭಾಷೆ Scratch. ಇದರ ವೈಶಿಷ್ಟ್ಯವೇನೆಂದರೆ ಇದರಲ್ಲಿ ಎಲ್ಲವೂ ಚಿತ್ರಗಳ (ಗ್ರಾಫಿಕ್ಸ್) ಮೂಲಕ ಆಗುತ್ತದೆ. ಈ ಉಚಿತ ತಂತ್ರಾಂಶ ಬೇಕಿದ್ದಲ್ಲಿ ನೀವು ಬೇಟಿ ನೀಡಬೇಕಾದ ಜಾಲತಾಣ scratch.mit.edu. ಇದು ೧೬ ವರ್ಷದ ಒಳಗಿನ ಮಕ್ಕಳನ್ನೇ ಗಮನದಲ್ಲಿಟ್ಟುಕೊಂಡು ತಯಾರಾದ ತಂತ್ರಾಂಶ. ಇದನ್ನು ಅಧ್ಯಾಪಕರೂ ಬಳಸಬಹುದು.

e - ಸುದ್ದಿ

ರಷ್ಯದಲ್ಲೊಂದು ಟ್ವಿಟ್ಟರ್ ಯುದ್ಧ

ಟ್ವಿಟ್ಟರನ್ನು ರಾಜಕೀಯ ಕಾರಣಗಳಿಗೆ, ಜನರನ್ನು ಸೇರಿಸಲು, ಚಳವಳಿಗಳಿಗೆ ಜನರನ್ನು ಪ್ರಚೋದಿಸಲು ಮತ್ತು ಸೇರಿಸಲು ಬಳಸುವುದು ಇತ್ತೀಚೆಗೆ ಹೆಚ್ಚಾಗುತ್ತಿದೆ. ಇಜಿಪ್ಟ್‌ನಲ್ಲಿ ನಡೆದ ಚಳವಳಿಯಲ್ಲಿ ಟ್ವಿಟ್ಟರ್ ಮತ್ತು ಫೇಸ್‌ಬುಕ್ ಪ್ರಮುಖ ಪಾತ್ರವಹಿಸಿವೆ. ರಷ್ಯದಲ್ಲಿ ಇತ್ತೀಚೆಗೆ ಚುನಾವಣೆ ನಡೆಯಿತು. ಅದರಲ್ಲಿ ತುಂಬ ಮೋಸ ನಡೆದಿದೆ ಎಂದು ಜನರೆಲ್ಲ ಕೂಗಾಡಿದರು. ಹಾಗೆ ಅವರು ಕೂಗಾಡಲು ಬಳಸಿದ್ದು ಟ್ವಿಟ್ಟರ್. ಅದಕ್ಕೆಂದೆ ಒಂದು ಹಾಶ್‌ಟ್ಯಾಗ್ ಬಳಸಿ ಅವರು ಸರಕಾರವನ್ನು ದೂಷಿಸುತ್ತಿದ್ದರು. ಆದರೆ ಅದು ಸಾವಿರಾರು ಸರಕಾರಿ ಪರವಾದ ಆದರೆ ಅದೇ ಹಾಶ್‌ಟ್ಯಾಗ್ ಬಳಸಿ ಮಾಡಿದ ಟ್ವೀಟ್‌ಗಳ ರಾಶಿಯಲ್ಲಿ ಎಲ್ಲೋ ಮುಳುಗಿ ಹೋಯಿತು. ಇಲ್ಲಿ ಏನಾಗಿತ್ತೆಂದರೆ ಯಾರೋ, ಬಹುಶಃ ಸರಕಾರೀ ಪೋಷಿತ, ಸಾವಿರಾರು ಬಾಟ್‌ಗಳನ್ನು ಮೊದಲೇ ತಯಾರಿಸಿಟ್ಟಿದ್ದರು. ಈ ಸ್ವಯಂಚಾಲಿತ ಟ್ವಿಟ್ಟರ್ ಖಾತೆಗಳು (ಬಾಟ್‌ಗಳು) ಅದೇ ಹಾಶ್‌ಟ್ಯಾಗ್‌ಗೆ ಸರಕಾರದ ಪರವಾಗಿ ಸ್ವಯಂಚಾಲಿತವಾಗಿ ಟ್ವೀಟ್ ಮಾಡುತ್ತಿದ್ದವು. ಸ್ವಾರಸ್ಯವೆಂದರೆ ಈ ಬಾಟ್‌ಗಳನ್ನು ಚುನಾವಣೆಗೆ ಕೆಲವು ತಿಂಗಳುಗಳ ಮೊದಲೇ ತಯಾರಿಸಲಾಗಿತ್ತು. ಆದರೆ ಅವು ಆಗ ಸುಮ್ಮನೆ ನಿದ್ರಿಸುತ್ತಿದ್ದವು. ಟ್ವಿಟ್ಟರ್ ಮೂಲಕ ಈ ರೀತಿಯ ಧಾಳಿ ನಡೆಯಬಹುದು ಎಂದು ಪೂರ್ವಭಾವಿಯಾಗಿ ಊಹಿಸಿ ಅದಕ್ಕೆ ಪ್ರತಿಧಾಳಿಯನ್ನು ತಯಾರಿಸಿಟ್ಟಿದ್ದು ಇದೇ ಮೊದಲ ಬಾರಿ ಇರಬೇಕು.       

e- ಪದ

ಹಾಶ್‌ಟ್ಯಾಗ್ (hashtag) - ಟ್ವಿಟ್ಟರ್‌ನಲ್ಲಿ ಮಾಡುವ ಪೋಸ್ಟಿಂಗ್‌ಗಳನ್ನು ಸುಲಭವಾಗಿ ವಿಷಯಾಧಾರಿತವಾಗಿ ಹುಡುಕಲು ಸಹಾಯಮಾಡುವಂತೆ ಟ್ವೀಟ್‌ಗಳಿಗೆ ಲಗತ್ತಿಸುವ ಟ್ಯಾಗ್. ಉದಾಹರಣೆಗೆ #kannada. ಇದು ಕನ್ನಡದ ಬಗ್ಗೆ ಮಾಡುವ ಎಲ್ಲ ಟ್ವೀಟ್‌ಗಳನ್ನು ಸುಲಭವಾಗಿ ಹುಡುಕಿ ಕೊಡುತ್ತದೆ.

e - ಸಲಹೆ

ಪ್ರಮೋದ್ ಶೆಟ್ಟಿಯವರ ಪ್ರಶ್ನೆ: ನನಗೆ ಚಿತ್ರದ ಮೇಲೆ ಅಕ್ಷರ ಮೂಡಿಸುವ ತಂತ್ರಾಂಶ ಬೇಕಿತ್ತು, ತುಂಬಾ ಜಾಲಾಡಿದೆ ಸಿಗಲಿಲ್ಲ. ದಯವಿಟ್ಟು ನಿಮಗೆ ಗೊತ್ತಿದ್ದರೆ ನನಗೆ ತಿಳಿಸಿ.
ಉ: ಈ ಹಿಂದೆಯೇ ಗಣಕಿಂಡಿಯಲ್ಲಿ ಪ್ರಸ್ತಾಪಿಸಿದ್ದ FastStone Photo Resizer ತಂತ್ರಾಂಶವನ್ನು www.faststone.org ಜಾಲತಾಣದಿಂದ ಡೌನ್‌ಲೋಡ್ ಮಾಡಿಕೊಂಡು ಬಳಸಿ. ಇದು ಫೋಟೋಗಳ ಮೇಲೆ ನಿಮ್ಮ ಹೆಸರನ್ನು ಮೂಡಿಸಲು ಇರುವ ತಂತ್ರಾಂಶ. ನಿಮ್ಮ ಕೆಲಸಕ್ಕೂ ಆಗುತ್ತದೆ.

ಕಂಪ್ಯೂತರ್ಲೆ

ಮತ್ತೊಂದಿಷ್ಟು (ತ)ಗಾದೆಗಳು:
·    ಸರಿಯಾಗಿ ವೆಬ್‌ಸೈಟ್ ವಿಳಾಸ ಟೈಪ್ ಮಾಡದೆ ಇಂಟರ್‌ನೆಟ್ ಬರುತ್ತಿಲ್ಲ ಎಂದು ದೂರಿದನಂತೆ.
·    ನಿಜವಾದ ಪ್ರಜಾಪ್ರಭುತ್ವವಿರುವುದು ಅಂತರಜಾಲದಲ್ಲಿ ಮಾತ್ರ.

3 ಕಾಮೆಂಟ್‌ಗಳು:

  1. e - ಸಲಹೆ
    ಇಲ್ಲ ಸರ್ ಆಗುತ್ತಿಲ್ಲ
    ನಾನು ಡೌನ್ಲೋಡ್ ಮಾಡಿಕೊಂಡು ನೋಡಿದೆ
    ದೊಡ್ಡದು ಚಿಕ್ಕದು ಮಾಡಬಹುದು ಅಷ್ಟೇ!!
    ಏನಾದರು ಉಪಾಯ ಹೇಳಿ ?

    ಪ್ರತ್ಯುತ್ತರಅಳಿಸಿ
  2. @ಪ್ರಕಾಶ್ ಶ್ರೀನಿವಾಸ್ - ಏನು ಆಗುತ್ತಿಲ್ಲ? ಸ್ವಲ್ಪ ವಿವರಿಸುತ್ತೀರಾ? ನೀವು ಫಾಂಟ್ ಗಾತ್ರವನ್ನು ಆಯ್ಕೆ ಮಾಡಿಕೊಂಡು ಪ್ರಯತ್ನಿಸಿದಿರಾ?

    ಪ್ರತ್ಯುತ್ತರಅಳಿಸಿ
  3. ಸರ್ ನನಗೆ ಚಿತ್ರದ ಮೇಲೆ ಅಕ್ಷರ ಮೂಡಿಸುವ ಸಾಫ್ಟ್ ವೇರ್ ಬೇಕು ಕನ್ನಡ ಅಕ್ಷರಗಳನ್ನು ,
    ನೀವು ತಿಳಿಸಿದ ಸಾಫ್ಟ್ ವೇರ್ ನಲ್ಲಿ ಚಿತ್ರದ ಗಾತ್ರ ವನ್ನು ದೊಡ್ಡದು ಚಿಕ್ಕದು ಮಾಡಬಹುದು
    ಆದರಲ್ಲಿ ಚಿತ್ರದ ಮೇಲೆ ಅಕ್ಷರಗಳನ್ನು ಮೂಡಿಸಲು ಆಗುತ್ತಲ್ಲ ಸರ್ ?
    ಏನು ಮಾಡಬೇಕು ಹೇಳಿ ಸರ್ ?

    ಪ್ರತ್ಯುತ್ತರಅಳಿಸಿ