ಸೋಮವಾರ, ಡಿಸೆಂಬರ್ 26, 2011

ಗಣಕಿಂಡಿ - ೧೩೬ (ಡಿಸೆಂಬರ್ ೨೬, ೨೦೧೧)

ಅಂತರಜಾಲಾಡಿ

ಟೆಲಿಮಾತು

ನಮ್ಮ ದೇಶದ ಶೇಕಡ ೭೦ರಷ್ಟು ಜನರಲ್ಲಿ ಈಗ ಮೊಬೈಲ್ ಮತ್ತು ಸ್ಥಿರ ದೂರವಾಣಿ ಸಂಪರ್ಕ ಇದೆ. ಸರಕಾರದ ಬಿಎಸ್‌ಎನ್‌ಎಲ್ ಜೊತೆ ಹಲವಾರು ಖಾಸಗಿ ಕಂಪೆನಿಗಳು ಕೂಡ ಸೇವೆ ನೀಡುತ್ತಿವೆ. ಒಬ್ಬರಿಂದೊಬ್ಬರು ಜಿದ್ದಿಗೆ ಇಳಿದವರಂತೆ ನೂರಾರು ನಮೂನೆಯ ಮತ್ತು ಬೆಲೆಯ ಸೇವೆಗಳನ್ನು ನೀಡುತ್ತಿವೆ. ಹಾಗೂ ಪ್ರ್ರತಿದಿನ ಹೊಸಹೊಸ ಸ್ಕೀಮ್‌ಗಳ ಘೋಷಣೆ ಮಾಡುತ್ತಿರುತ್ತವೆ. ಯಾವ ಕಂಪೆನಿಯ ಯಾವ ಸ್ಕೀಮ್ ಕೊಂಡರೆ ನಿಮ್ಮ ಅಗತ್ಯಕ್ಕೆ ಸರಿಹೊಂದುತ್ತದೆ ಮತ್ತು ನಿಮಗೆ ಅತ್ಯಧಿಕ ಉಪಯೋಗ ಆಗುತ್ತದೆ ಎಂದು ತಿಳಿಯುವುದು ಹೇಗೆ? ಈ ಸಮಸ್ಯೆಗೆ ಪರಿಹಾರವೆಂಬಂತೆ telecomtalk.info ಜಾಲತಾಣವಿದೆ.

ಡೌನ್‌ಲೋಡ್

ಮತ್ತೊಂದು ಎಕ್ಸ್‌ಪ್ಲೋರರ್

ಮೈಕ್ರೋಸಾಫ್ಟ್ ವಿಂಡೋಸ್ ಬಳಸುತ್ತಿರುವವರಿಗೆ ಅದರಲ್ಲಿ ಅಡಕವಾಗಿರುವ ಎಕ್ಸ್‌ಪ್ಲೋರರ್ ಗೊತ್ತಿರುತ್ತದೆ. ಅದನ್ನು ಬಳಸಿ ಫೈಲ್‌ಗಳ ಬಗ್ಗೆ ವಿವರ ತಿಳಿಯುವುದು, ಫೋಲ್ಡರ್ ಒಳಗೆ ಏನೇನು ಫೈಲ್‌ಗಳಿವೆ, ಒಂದು ಫೋಲ್ಡರಿನಿಂದ ಇನ್ನೊಂದು ಫೋಲ್ಡರಿಗೆ ಫೈಲ್ ಪ್ರತಿ ಮಾಡುವುದು -ಇತ್ಯಾದಿ ಎಲ್ಲ ಕೆಲಸಗಳನ್ನು ಮಾಡಬಹುದು. ಈಗ ಬೆಟರ್ ಎಕ್ಸ್‌ಪ್ಲೋರರ್ ಎಂಬ ಹೆಸರಿನ ಇನ್ನೊಂದು ಉಚಿತ ಹಾಗೂ ಮುಕ್ತ ಎಕ್ಸ್‌ಪ್ಲೋರರ್ ಲಭ್ಯವಿದೆ. ವಿಂಡೋಸ್ ಎಕ್ಸ್‌ಪ್ಲೋರರ್‌ನ ಎಲ್ಲ ಗುಣಗಳು ಇದರಲ್ಲಿವೆ. ಜೊತೆಗೆ ಇನ್ನೂ ಕೆಲವು ಹೆಚ್ಚಿನ ಸೌಲಭ್ಯಗಳಿವೆ. ಒಂದು ಪ್ರಮುಖವಾದುದೆಂದರೆ ಆಫಿಸ್ ೨೦೦೭ ಮತ್ತು ೨೦೧೦ರಲ್ಲಿ ಕಂಡುಬರುವ ಮಾದರಿಯ ರಿಬ್ಬನ್. ಇದು ತುಂಬ ಉಪಯುಕ್ತ. ನಿಮಗೆ ಈ ತಂತ್ರಾಂಶ ಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣ bexplorer.codeplex.com.  

e - ಸುದ್ದಿ

ಕಡತ ಹಂಚಲನುವುಮಾಡುವುದು ತಪ್ಪಲ್ಲ

ವ್ಯಕ್ತಿಯಿಂದ ವ್ಯಕ್ತಿಗೆ ಅಂತರಜಾಲದ ಮೂಲಕ ಕಡತಗಳನ್ನು ಹಂಚುವುದಕ್ಕೆ person to person ಆರ್ಥಾತ್ P2P ಎಂಬ ಹೆಸರಿದೆ. ಈ ತಂತ್ರಜ್ಞಾನದಲ್ಲಿ ಒಂದು ಪ್ರಮುಖವಾದ ತಂತ್ರಾಂಶ ಬಿಟ್‌ಟೊರೆಂಟ್ ಪ್ರೊಟೊಕಾಲ್. ಇದೇ ಮಾದರಿಯ ಇನ್ನೊಂದು ತಂತ್ರಾಂಶವನ್ನು ಸ್ಪೈನ್ ದೇಶದಲ್ಲೊಬ್ಬ ತಯಾರಿಸಿದ್ದ. ಸಂಗೀತ ಮತ್ತು ವೀಡಿಯೊಗಳನ್ನು ತಯಾರಿಸುವ ಕಂಪೆನಿಗಳು ಆತನ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡಿದ್ದವು. ಈಗ ನ್ಯಾಯಾಲಯದಿಂದ ತೀರ್ಪು ಹೊರಬಂದಿದೆ. ಆತ ತಪ್ಪಿತಸ್ಥನಲ್ಲ. ಆತ ಕೇವಲ ತಂತ್ರಾಂಶ ಮಾತ್ರ ತಯಾರಿಸಿದ್ದ. ಅದನ್ನು ಬಳಸಿ ಸಂಗೀತ ಹಂಚಿಕೊ೦ಡು ಕೃತಿಚೌರ್ಯ ಮಾಡಿದ್ದರೆ ಅದು ಹಾಗೆ ಮಾಡಿದವರ ತಪ್ಪೇ ಹೊರತು ತಂತ್ರಾಂಶ ತಯಾರಕನದಲ್ಲ ಎಂದು ತೀರ್ಮಾನ ಬಂದಿದೆ.       

e- ಪದ

ಕ್ರಮವಿಧಿ (program) - ಗಣಕಕ್ಕೆ ಕೆಲಸ ಮಾಡಲು ನೀಡುವ ತರ್ಕಬದ್ಧವಾದ ಹಾಗೂ ಕ್ರಮಬದ್ಧವಾದ ಆದೇಶಗಳ ಗುಚ್ಛ. ಗಣಕಕ್ಕೆ ಸ್ವಂತ ಮೆದುಳಿಲ್ಲ. ನಾವು ನೀಡಿದ ಆದೇಶಗಳಂತೆ ಅದು ಕೆಲಸ ಮಾಡುತ್ತದೆ. ಒಂದು ವೃತ್ತದ ತ್ರಿಜ್ಯವನ್ನು ನೀಡಿ ಅದರ ವಿಸ್ತೀರ್ಣವನ್ನು ಲೆಕ್ಕ ಹಾಕಿ ಕೊಡು ಎಂದು ಅದಕ್ಕೆ ಸುಮ್ಮನೆ ಆದೇಶ ನೀಡುವಂತಿಲ್ಲ. ತ್ರಿಜ್ಯ ಗೊತ್ತಿದ್ದರೆ ವಿಸ್ತೀರ್ಣ ಲೆಕ್ಕ ಹಾಕುವ ಸೂತ್ರವನ್ನೂ ನೀಡಬೇಕಾಗುತ್ತದೆ. ತಪ್ಪು ಸೂತ್ರ ನೀಡದರೆ ಅದಕ್ಕೆ ಗೊತ್ತಾಗುವುದಿಲ್ಲ. ಎಲ್ಲರಿಗೂ ಪರಿಚಿತವಿರುವ ಇದೇ ಕ್ರಿಯೆಗೆ ಕ್ರಮವಿಧಿ ರಚನೆ ಅರ್ಥಾತ್ programming ಎನ್ನುತ್ತಾರೆ.

e - ಸಲಹೆ

ಗುಲ್ಬರ್ಗದ ಬಿರಾದಾರ ಅವರ ಪ್ರಶ್ನೆ: ಕಳೆದ ವಾರದ ಸಂಚಿಕೆಯಲ್ಲಿ ಕನ್ನಡಕ್ಕೆ ಯುನಿಕೋಡ್ ಫಾಂಟ್‌ಗಳು ಸಾಕಷ್ಟಿಲ್ಲ. ಆದುದರಿಂದ ಯುನಿಕೋಡ್ ಬಳಕೆ ಕಡಿಮೆ ಎಂದು ಬರೆದಿದ್ದೀರಿ. ಹಾಗಿದ್ದರೆ ಯುನಿಕೋಡ್ ಬಳಸಲು ಸಾಧ್ಯವಿಲ್ಲವೇ?
ಉ: ಯುನಿಕೋಡ್ ಒಂದು ಜಾಗತಿಕ ಶಿಷ್ಟತೆ. ಪ್ರಪಂಚದ ಎಲ್ಲ ತಂತ್ರಾಂಶ ಮತ್ತು ಜಾಲತಾಣಗಳು ಅದನ್ನು ಬಳಸುತ್ತಿವೆ. ಕನ್ನಡ ಯುನಿಕೋಡ್ ಬಳಸಲು ಯಾವ ಅಡ್ಡಿ ಆತಂಕಗಳೂ ಇಲ್ಲ. ನಾನು ಹೇಳಿದ್ದು ಉತ್ತಮ ಮುದ್ರಣ ಗುಣಮಟ್ಟದ ಫಾಂಟ್‌ಗಳ ಕೊರತೆ ಇದೆ ಎಂದು ಮಾತ್ರ. ಕ್ರಮವಿಧಿ ರಚನೆಗೆ ಯುನಿಕೋಡನ್ನೇ ಬಳಸಬೇಕು. ಕನ್ನಡಕ್ಕೆ ಈಗಾಗಲೇ ಹಲವಾರು ಯುನಿಕೋಡ್ ಬೆಂಬಲಿತ ಓಪನ್‌ಟೈಪ್ ಫಾಂಟ್‌ಗಳು ಲಭ್ಯವಿವೆ. ಅವುಗಳಲ್ಲಿ ಕೆಲವು - ತುಂಗ, ಏರಿಯಲ್ ಯುನಿಕೋಡ್ ಎಂಎಸ್ (ಇವೆರಡು ಮೈಕ್ರೋಸಾಫ್ಟ್ ಕಂಪೆನಿಗೆ ಸೇರಿದ್ದು), ಸಂಪಿಗೆ, ಮಲ್ಲಿಗೆ, ಕೇದಗೆ, ಸಕಲಭಾರತಿ, ಸರಸ್ವತಿ, ಜನಕನ್ನಡ, ಪೂರ್ಣಚಂದ್ರಜೇಜಸ್ವಿ, ಇತ್ಯಾದಿ.

ಕಂಪ್ಯೂತರ್ಲೆ

ಅಂತರಜಾಲದ ಕೊನೆ

ಅಂತರಜಾಲದಲ್ಲಿ ಸುತ್ತಾಡಿ ಸುತ್ತಾಡಿ ಬೋರ್ ಆಯಿತೇ? ಈ ಅನಂತಜಾಲಕ್ಕೆ ಕೊನೆಯೇ ಇಲ್ಲವೇ ಎಂದು ಆಶ್ಚರ್ಯಪಡುತ್ತಿದ್ದೀರಾ? ಇದೆ. ಎಲ್ಲದರಂತೆ ಅಂತರಜಾಲಕ್ಕೂ ಒಂದು ಕೊನೆ ಇದೆ. ಅದನ್ನು ನೋಡಬೇಕಾದರೆ ನೀವು ಮಾಡಬೇಕಾದ್ದು ಇಷ್ಟೆ. www.internet-end.com ಜಾಲತಾಣಕ್ಕೆ ಭೇಟಿ ನೀಡಬೇಕು. ಅಷ್ಟೆ.

2 ಕಾಮೆಂಟ್‌ಗಳು:

  1. ತಾಳಗಳ ಅಭ್ಯಾಕ್ಕಾಗಿ ನನಗೆ ತಾಳವನ್ನು ಕಂಪೋಸ್ ಮಾಡುವ ಉಚಿತ ತಂತ್ರಾಶ ಹಾಗೂ ಭಾರತೀಯ ಸಂಗೀತಕ್ಕೆ ಒದಗುವಂಥಹ ಶೃತಿ ಯನ್ನು ಒದಗಿಸುವ ಉಚಿತ ತಂತ್ರಾಶಗಳು ಎಲ್ಲಿ ಸಿಗುತ್ತವೆ.?

    ಪ್ರತ್ಯುತ್ತರಅಳಿಸಿ