ಮಂಗಳವಾರ, ಜುಲೈ 7, 2009

ಗಣಕಿಂಡಿ - ೦೦೮ (ಜುಲೈ ೦೬, ೨೦೦೯)

ಅಂತರಜಾಲಾಡಿ

ವೈಚಿತ್ರ್ಯಗಳಿಗೊಂದು ತಾಣ

ಯಾವುದಾದರೊಂದು ಹೋಟೆಲಿನ ಹೆಸರಿನ ಕೆಳಗೆ “ಸಾಸ್ಯಹರಿ” ಎಂದು ಕಂಡುಬಂದರೆ ಹುಬ್ಬೇರಿಸುತ್ತೀರಿ ತಾನೆ? ಇಂತಹ ವಿಚಿತ್ರ ಹೆಸರುಗಳು, ಪ್ರಾಕೃತಿಕ ಘಟನೆಗಳು, ಅತಿ ಉದ್ದ, ಎತ್ತರ, ಚಿಕ್ಕ ವಸ್ತು, ಮನುಷ್ಯ, ಇತ್ಯಾದಿ ಎಲ್ಲ ಪಟ್ಟಿ ಮಾಡುವ ಒಂದು ಜಾಲತಾಣ oddee.com. ಈ ಜಾಲತಾಣವನ್ನು ೨೦೦೮ನೆಯ ಇಸವಿಯ ಅತಿ ಜನಪ್ರಿಯ ೧೦೦ ಜಾಲತಾಣಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ನಿಮಗೆ ತುಂಬ ಬೇಜಾರಾಗಿದೆ, ಹೇಗೋ ಹೊತ್ತು ಕಳೆಯಬೇಕಾಗಿದೆ ಎಂದಾದಲ್ಲಿ ಈ ಜಾಲತಾಣಕ್ಕೆ ಭೇಟಿ ನೀಡಬಹುದು. ಹಾಗೆಂದುಕೊಂಡು ಇಲ್ಲಿರುವುದೆಲ್ಲವೂ ಸಮಯ ಹಾಳು ಮಾಡುವ ವಿಷಯಗಳೇ ಎಂದುಕೊಳ್ಳಬೇಕಾಗಿಲ್ಲ. ವಿಜ್ಞಾನದ ವಿಶೇಷಗಳೂ ಇಲ್ಲಿವೆ.

ಡೌನ್‌ಲೋಡ್

ಸೌಂಡ್ ಇಂಜಿನಿಯರ್ ಆಗಿ

ಗಣಕದಲ್ಲಿ ಧ್ವನಿ, ಸಂಗೀತ, ಧ್ವನಿಮುದ್ರಣ ಮಾಡಿಕೊಳ್ಳಲು ಮತ್ತು ಧ್ವನಿಮುದ್ರಿತ ಸಂಗೀತವನ್ನು ಸಂಪಾದಿಸಲು ಬಳಕೆಯಾಗುವ ತಂತ್ರಾಂಶ ಅಡಾಸಿಟಿ. ಇದು ದೊರಕುವ ಜಾಲತಾಣ audacity.sourceforge.net. ಇದು ಸಂಪೂರ್ಣ ಮುಕ್ತ ಮತ್ತು ಉಚಿತ ತಂತ್ರಾಂಶ. ಇದನ್ನು ಇನ್‌ಸ್ಟಾಲ್ ಮಾಡಿಕೊಂಡು ನಿಮ್ಮ, ನಿಮ್ಮ ಮಕ್ಕಳ, ಕುಟುಂಬದ ಮಂದಿಯ ಅಥವಾ ಇತರೆ ಸಂಗೀತಗಾರರ ಧ್ವನಿ, ಹಾಡುಗಾರಿಕೆ, ಸಂಗೀತ ಕಾರ್ಯಕ್ರಮ -ಇತ್ಯಾದಿಗಳನ್ನು ಮನೆಯಲ್ಲೆ ಧ್ವನಿಮುದ್ರಣ ಮಾಡಿಕೊಳ್ಳಬಹುದು. ಹೀಗೆ ಧ್ವನಿಮುದ್ರಣ ಮಾಡಿಕೊಂಡದ್ದನ್ನು ನಿಮಗೆ ಇಷ್ಟವಾದ ವಿಧಾನದಲ್ಲಿ (ಉದಾ. ಎಂಪಿ-೩) ಸಂಗ್ರಹಿಸಿಡಬಹುದು. ಸಿ.ಡಿ. (ಅಥವಾ ಡಿ.ವಿ.ಡಿ.) ರೆಕಾರ್ಡರ್ ಇದ್ದರೆ ಮನೆಯಲ್ಲೇ ಸಂಗೀತ ಸಿ.ಡಿ. (ಅಥವಾ ಡಿ.ವಿ.ಡಿ.) ತಯಾರಿಸಲೂಬಹುದು. ನಿಮ್ಮಲ್ಲಿ ಹಳೆಯ ಕ್ಯಾಸೆಟ್ಟುಗಳಿದ್ದಲ್ಲಿ, ಉತ್ತಮ ಗುಣಮಟ್ಟದ ಕ್ಯಾಸೆಟ್ ಪ್ಲೇಯರ್ ಇದ್ದಲ್ಲಿ, ಅವುಗಳನ್ನೆಲ್ಲ ಎಂಪಿ-೩ ಸಿ.ಡಿ. ಮಾಡಲೂ ಈ ತಂತ್ರಾಂಶವನ್ನು ಬಳಸಬಹುದು.

e - ಸುದ್ದಿ

ಖ್ಯಾತ ಪಾಪ್ ಗಾಯಕ ಮೈಕೆಲ್ ಜಾಕ್ಸನ್ ಸತ್ತಾಗ ಸ್ವಲ್ಪ ಸಮಯ ಹಲವು ಜನಪ್ರಿಯ ಜಾಲತಾಣಗಳೂ ತಾತ್ಕಾಲಿಕವಾಗಿ ಸತ್ತವು. ಜಾಲತಾಣಗಳು ಸಾಯುವುದೆಂದರೇನು? ಅವೇನೂ ಸತ್ತಿರಲಿಲ್ಲ. ಕೋಟಿಗಟ್ಟಳೆ ಮಂದಿ ಏಕಕಾಲದಲ್ಲಿ ಒಂದೇ ಜಾಲತಾಣಕ್ಕೆ ಭೇಟಿ ನೀಡಿದರೆ ಆ ಜಾಲತಾಣ ಎಲ್ಲರಿಗೂ ಉತ್ತರ ನೀಡಲಾರದೆ ಸ್ಥಬ್ಧವಾತ್ತದೆ. ತುಂಬ ಜನಪ್ರಿಯವಾಗಿರುವ ಮೈಕ್ರೋಬ್ಲಾಗಿಂಗ್ ಜಾಲತಾಣ ಟ್ವಿಟ್ಟರ್‌ಗೆ ಇದೇ ಗತಿ ಆಯಿತು. ಗೂಗ್ಲ್‌ನಲ್ಲಂತೂ ಪ್ರತಿಯಬ್ಬರೂ ಮೈಕೆಲ್ ಜಾಕ್ಸನ್ ಎಂಬ ಪದಪುಂಜವನ್ನೇ ಹುಡುಕತೊಡಗಿದರು. ಕೋಟಿಗಟ್ಟಳೆ ಗಣಕಗಳಿಂದ ಏಕಕಾಲದಲ್ಲಿ ಮೈಕೆಲ್ ಜಾಕ್ಸನ್ ಎಂಬ ಪದಪುಂಜದ ಬಗ್ಗೆ ಹುಡುಕಾಟ ನಡೆಯುವುದನ್ನು ಗೂಗ್ಲ್‌ನ ತಂತ್ರಾಂಶವು ಗಮನಿಸಿ ಇದೊಂದು ವೈರಸ್ ಮಾದರಿಯ ಧಾಳಿ ಎಂದು ಪರಿಗಣಿಸಿ ಈ ಪದಪುಂಜವನ್ನು ತಡೆಹಿಡಿಯಿತು. ಮೈಕೆಲ್ ಜಾಕ್ಸನ್ ಎಂದು ಹಡುಕಿದವರಿಗೆ Error ಎಂಬ ಸಂದೇಶ ಬರುತ್ತಿತ್ತು. ಕೊನೆಗೆ ಎಲ್ಲ ಸರಿಯಾಯಿತು.

e- ಪದ

ಇವಿಡಿಒ (EV-DO - Evolution-Data Optimized) -ನಿಸ್ತಂತು (ವಯರ್‌ಲೆಸ್) ತಂತ್ರಜ್ಞಾನ ಮೂಲಕ ತಂತಿ ಇಲ್ಲದೆ ಅಂತರಜಾಲಕ್ಕೆ ಗಣಕವನ್ನು ಸಂಪರ್ಕಗೊಳಿಸುವ ಇನ್ನೊಂದು ವಿಧಾನ. ಇದನ್ನು ವಯರ್‌ಲೆಸ್ ಬ್ರಾಡ್‌ಬಾಂಡ್ ಎಂದೂ ಕರೆಯುತ್ತಾರೆ. ಇದು ವೈ-ಫೈ ಮತ್ತು ವೈ ಮಾಕ್ಸ್‌ಗಿಂತ ತುಂಬ ಹೆಚ್ಚಿನ ಮಾಹಿತಿ ಸಾಗಾಣಿಕೆಯ ಸಾಮರ್ಥ್ಯ ಹೊಂದಿದೆ. ಇದನ್ನು ಬಳಸಲು ಇವಿಡಿಒ ಕಾರ್ಡ್ ಅಥವಾ ಯುಎಸ್‌ಬಿ ಸಾಧನ ಬೇಕಾಗುತ್ತದೆ. ಇದು ಯಾವಾಗಲೂ ಸಂಪರ್ಕದಲ್ಲಿರುವ ವ್ಯವಸ್ಥೆ. ಇತ್ತೀಚೆಗೆ ಬಿಎಸ್‌ಎನ್‌ಎಲ್ ಮತ್ತು ರಿಲಯನ್ಸ್‌ನವರು ಈ ವಿಧಾನದಲ್ಲಿ ಅಂತರಜಾಲ ಸಂಪರ್ಕ ಸೇವೆ ನೀಡಲು ಪ್ರಾರಂಭಿಸಿದ್ದಾರೆ.

e - ಸಲಹೆ

ಹಲವಾರು ತಂತ್ರಾಂಶಗಳನ್ನು ವಿಂಡೋಸ್ ಎಕ್ಸ್‌ಪಿಯಲ್ಲಿ ಇನ್‌ಸ್ಟಾಲ್ ಮಾಡಿದಾಗ ಬೇಕಾದ ತಂತ್ರಾಂಶವನ್ನು ಪ್ರಾರಂಭಿಸಲು ಕ್ಲಿಕ್ ಮಾಡಬೇಕಾದ ಆದೇಶ ಎಲ್ಲಿದೆ ಎಂದು ಹುಡುಕುವುದು ಕೆಲವೊಮ್ಮೆ ಕಷ್ಟವಾಗುತ್ತದೆ. ಇದಕ್ಕೆ ಕಾರಣ ಹಲವಾರು ತಂತ್ರಾಂಶಗಳ ಆದೇಶಗಳು ಒಂದು ಕ್ರಮದಲ್ಲಿ ಇಲ್ಲದಿರುವುದು. ಇವನ್ನೆಲ್ಲ ಒಂದು ಕ್ರಮದಲ್ಲಿ ಅಂದರೆ ಇಂಗ್ಲಿಶ್ ಭಾಷೆಯ ಅಕ್ಷರ ಪ್ರಕಾರ ವಿಂಗಡಿಸಿದರೆ ಹಡುಕುವುದು ಸುಲಭವಾಗುತ್ತದೆ. ಹೀಗೆ ಮಾಡುವುದು ಬಲು ಸುಲಭ. Start ಮೆನುವಿನ All Programs ಮೆನುವಿನಲ್ಲಿ ಎಲ್ಲಿಯಾದರೊಂದು ಕಡೆ ಮೌಸ್ ಇಟ್ಟು ಬಲಗುಂಡಿಯನ್ನು ಅದುಮಿ Sort by Name ಎಂದು ಆಯ್ಕೆ ಮಾಡಿ.

ಕಂಪ್ಯೂತರ್ಲೆ

ಕೋಲ್ಯ “ನನಗೆ ಒಂದು ಸುತ್ತಿಗೆ ಮತ್ತು ಕೆಲವು ಮೊಳೆಗಳು ಬೇಕು”
ಅಂಗಡಿಯಾತ “ಯಾಕೆ?”
ಕೋಲ್ಯ “ನನ್ನ ಕಂಪ್ಯೂಟರಿಗೆ ವಿಂಡೋಸ್ ಫಿಟ್ ಮಾಡಬೇಕಿತ್ತು”

5 ಕಾಮೆಂಟ್‌ಗಳು:

  1. oddee ಮತ್ತು audacity ಮಾಹಿತಿಗಾಗಿ ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
  2. ಹಾಯ್ ಸರ್?
    ನಾವು ನಿಮ್ಮ ಗಣಕಿಂಡಿಯನ್ನು ಪ್ರತಿ ಸೋಮವಾರವೂ ನೋಡುತ್ತೇವೆ.
    ನಾವೂ ಕೂಡ ನಿಮ್ಮ ತರಹ ಬ್ಲಾಗನ್ನ ರೆಡಿ ಮಾಡಬೇಕು.
    ನಾವು ಆಗಲೆ ಬ್ಲಾಗನ್ನ ರೆಡಿ ಮಾಡಿದ್ದೇವೆ.
    ಆದರೆ ನಿಮ್ಮ ತರಹ ಸ್ವಂತ ಟೆಂಪ್ಲೇಟ್ ಅನ್ನ ನಾವೂ ಕೂಡ ರೆಡಿ ಮಾಡಬೇಕು.
    ಅದಕ್ಕೆ ಸಲಹೆ ಕೊಡಿ.
    ನಿಮ್ಮ ಸಲಹೆಗೆ ಕಾಯುತ್ತಿರುವ


    ಇಂತಿ ಗೆಳೆಯ
    vinod

    ಪ್ರತ್ಯುತ್ತರಅಳಿಸಿ
  3. @sunaath ರಿಗೆ ಧನ್ಯವಾದಗಳು

    @prasad ನೀವು www.blogger.com ನಲ್ಲಿ ನೋಂದಾಯಿಸಿ ಒಂದು ಉಚಿತ ಖಾತೆ ಪಡೆದುಕೊಳ್ಳಿ. ನಂತರ ನಿಮ್ಮ ಬ್ಲಾಗನ್ನು ಅಲ್ಲಿ ಪ್ರಾರಂಭಿಸಿ. ನಾನು ಯಾವುದೇ ಟೆಂಪ್ಲೇಟ್ ಮಾಡಿಲ್ಲ. blogger ನವರು ನೀಡಿದ ಟೆಂಪ್ಲೇಟ್‌ಗಳಲ್ಲಿ ಒಂದನ್ನು ಬಳಸುತ್ತಿದ್ದೇನೆ, ಅಷ್ಟೆ. ಟೆಂಪ್ಲೇಟ್ ಮಾಡಲು ಸ್ವಲ್ಪ css ಕಲಿತರೆ ಒಳ್ಳೆಯದು.

    ಪ್ರತ್ಯುತ್ತರಅಳಿಸಿ
  4. ಉತ್ತಮವಾದ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು

    ಪ್ರತ್ಯುತ್ತರಅಳಿಸಿ
  5. ನಾನು ಕನ್ನಡ ಪ್ರಭ ಚಂದಾದಾರನಾದ ಕೆಲವೇ ತಿಂಗಳುಗಳಲ್ಲಿ ಗಣಕಿಂಡಿ ಮುಗಿದು ಹೋಯಿತು. ಈಗ ಸಮಯ ಸಿಕ್ಕಾಗಲೆಲ್ಲ ಹಳೆಯದನ್ನು ಓದುತ್ತಿದ್ದೇನೆ. ತುಂಬಾ ಧನ್ಯವಾದಗಳು

    ಪ್ರತ್ಯುತ್ತರಅಳಿಸಿ