ಸೋಮವಾರ, ಜುಲೈ 13, 2009

ಗಣಕಿಂಡಿ - ೦೦೯ (ಜುಲೈ ೧೩, ೨೦೦೯)

ಅಂತರಜಾಲಾಡಿ

ದೂರು ನೀಡಬೇಕೆ?

ಕೇಂದ್ರ ಅಥವಾ ರಾಜ್ಯ ಸರಕಾರದ ಯಾವುದಾದರೂ ವಿಭಾಗಕ್ಕೆ ದೂರು ಸಲ್ಲಿಸಬೇಕಾದರೆ ಏನು ಮಾಡಬೇಕು ಎಂಬ ಚಿಂತೆ ಎಲ್ಲರಿಗೂ ಕನಿಷ್ಠ ಒಮ್ಮೆಯಾದರೂ ಬಂದಿರುತ್ತದೆ. ದೂರು ಸಲ್ಲಿಸಲೆಂದೇ ಕೇಂದ್ರ ಸರಕಾರದ ಜಾಲತಾಣವೊಂದಿದೆ. ಅದರ ವಿಳಾಸ - www.pgportal.gov.in. ತಾಣದಲ್ಲಿ ದೂರು ಸಲ್ಲಿಸಿದರೆ ನಿಮ್ಮ ದೂರಿಗೆ ಒಂದು ನೋಂದಣಿ ಸಂಖ್ಯೆ ದೊರೆಯುತ್ತದೆ. ನಂತರ ನಿಮ್ಮ ದೂರು ಎಲ್ಲಿಗೆ ತಲುಪಿದೆ, ಅದರ ಬಗ್ಗೆ ಏನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕಾಲಕಾಲಕ್ಕೆ ಪರಿಶೀಲಿಸುತ್ತಿರಬಹುದು. ವೈಯಕ್ತಿಕವಾಗಿ ಹೇಳುವುದಾದರೆ, ಖಾಸಗಿ ಡಿಟಿಎಚ್ ಸೇವೆ ನೀಡುವವರು ದೂರದರ್ಶನಗಳ ಉಚಿತ ಚಾನೆಲುಗಳನ್ನು ನೀಡುವುದನ್ನು ನಿಲ್ಲಿಸಿದಾಗ ನಾನು ಜಾಲತಾಣದಲ್ಲಿ ದೂರು ನೀಡಿ ಅದನ್ನು ಸರಿಪಡಿಸಿಕೊಂಡಿದ್ದೇನೆ.

ಡೌನ್ಲೋಡ್

ಎಲ್ಲ ಬಹುಮಾಧ್ಯಮಗಳಿಗೆ ಒಂದೇ ಪ್ಲೇಯರ್

ಚಲನಚಿತ್ರ, ವೀಡಿಯೋಗಳನ್ನು ಗಣಕದಲ್ಲಿ ವೀಕ್ಷಿಸದವರು ಯಾರು? ಇವುಗಳನ್ನು ಸಾಮಾನ್ಯವಾಗಿ ವಿಂಡೋಸ್ ಬಳಸುವವರು ತಮ್ಮ ಗಣಕದಲ್ಲೇ ಇರುವ ವಿಂಡೋಸ್ ಮೀಡಿಯಾ ಪ್ಲೇಯರ್ ಬಳಸಿ ವೀಕ್ಷಿಸುತ್ತಾರೆ. ಆದರೆ ಇದರಲ್ಲಿರುವ ಸಮಸ್ಯೆಯೆಂದರೆ ಕೆಲವು ನಮೂನೆಯ ಫೈಲುಗಳನ್ನು ಇದನ್ನು ಬಳಸಿ ವೀಕ್ಷಿಸಲು ಆಗುವುದಿಲ್ಲ. ಉದಾಹರಣೆಗೆ ಯುಟ್ಯೂಬ್ ತಾಣದಿಂದ ಡೌನ್ಲೋಡ್ ಮಾಡಿದ ಫ್ಲಾಶ್ ವೀಡಿಯೋ ಫೈಲುಗಳು. ಇಂತಹ ಫೈಲುಗಳನ್ನು ವೀಕ್ಷಿಸಲು ವಿಎಲ್ಸಿ ಪ್ಲೇಯರ್ ಬಳಸಬಹುದು. ಇದು ದೊರೆಯುವ ಜಾಲತಾಣ - www.videolan.org/vlc ಜಾಲತಾಣದಲ್ಲಿ ವಿಂಡೋಸ್ ಮಾತ್ರವಲ್ಲದೆ ಲೈನಕ್ಸ್ ಮತ್ತು ಮ್ಯಾಕ್ಗಳಿಗೂ ಪ್ಲೇಯರ್ ಲಭ್ಯವಿದೆ. ಇದು ಸಂಪೂರ್ಣ ಉಚಿತ ಮತ್ತು ಮುಕ್ತ ತಂತ್ರಾಂಶ.

e - ಸುದ್ದಿ

ದೊಡ್ಡ ಗಾತ್ರದ ಫೋನು ಜೀವ ಉಳಿಸಿತು

ಇತ್ತೀಚೆಗೆ ಮಾರುಕಟ್ಟೆಗೆ ಬರುತ್ತಿರುವ ಸ್ಮಾರ್ಟ್ಫೋನುಗಳು ಅಂದರೆ ಕಿಸೆ ಗಣಕ ಎಂದೇ ಕರೆಯಬಹುದಾದ ಗ್ಯಾಜೆಟ್ಗಳು ಎಷ್ಟು ದೊಡ್ಡದಾಗಿವೆಯೆಂದರೆ ಅದರಿಂದಾಗಿ ಒಬ್ಬನ ಜೀವ ಉಳಿದ ಘಟನೆ ವರದಿಯಾಗಿದೆ. ಡೇವಿಡ್ ಎಂಬಾತ ಸ್ಕೀಯಿಂಗ್ ಮಾಡುತ್ತಾ ಹಿಮದಲ್ಲಿ ಜಾರಿ ಬಿದ್ದು ನಿಯಂತ್ರಣ ತಪ್ಪಿ ಪ್ರಪಾತದೆಡೆಗೆ ಜಾರತೊಡಗಿದ. ಹಿಮದಲ್ಲಿ ಒಬ್ಬ ವ್ಯಕ್ತಿ ತೂರಬಹುದಾದಷ್ಟು ಅಗಲವಾದ ಕಂದರವೊಂದಿತ್ತು. ಅದರಡಿಯಲ್ಲಿ ಆಳವಾದ ಪ್ರಪಾತವಿತ್ತು. ಈತನ ಅಂಗಿ ಕಿಸೆಯಲ್ಲಿ ದೊಡ್ಡದಾದ ಬ್ಲಾಕ್ಬೆರಿ ಫೋನು ಇತ್ತು. ಅದರಿಂದಾಗಿ ಆತ ಕಂದರದಲ್ಲಿ ಕೆಳಗೆ ಬೀಳದೆ ಸಿಕ್ಕಿಹಾಕಿಕೊಂಡು ಬದುಕಿ ಉಳಿದ.

e- ಪದ

ಅಂತರಜಾಲ ಮತ್ತು ಅಂತರ್ಜಾಲ - ಪದಗಳ ಬಳಕೆಯಲ್ಲಿ ಗೊಂದಲ ಆಗುತ್ತಿದೆ. ಬಹುಪಾಲು ಜನರು ಇಂಟರ್ನೆಟ್ ಎಂಬುದಕ್ಕೆ ಪರ್ಯಾಯವಾಗಿ ಅಂತರ್ಜಾಲ ಎಂದು ಬಳಸುತ್ತಿದ್ದಾರೆ. ಇದು ತಪ್ಪು. Intranet ಎಂಬುದಕ್ಕೆ ಪಾರಿಭಾಷಿಕ ಪದ ಅಂತರ್ಜಾಲ. ಹಾಗೆಯೇ Internet ಎಂಬುದಕ್ಕೆ ಪಾರಿಭಾಷಿಕ ಪದ ಅಂತರಜಾಲ. ಒಂದು ಕಚೇರಿಯಲ್ಲಿರುವ ಹಲವಾರು ಗಣಕಗಳನ್ನು ಒಂದಕ್ಕೊಂದು ಬೆಸೆದಾಗ ಆಗುವ ಜಾಲ ಅಂತರ್ಜಾಲ (ಇಂಟ್ರಾನೆಟ್). ಜಗತ್ತಿನಲ್ಲಿರುವ ಎಲ್ಲ ಗಣಕಗಳನ್ನು ತಂತಿ, ನಿಸ್ತಂತು, ಉಪಗ್ರಹ, ಇತ್ಯಾದಿಗಳ ಮೂಲಕ ಒಂದಕ್ಕೊಂದು ಬೆಸೆದಾಗ ದೊರೆಯುವ ಜಾಲ ಅಂತರಜಾಲ (ಇಂಟರ್ನೆಟ್). ಇತರೆ ಉದಾಹರಣೆಗಳನ್ನೂ ಗಮನಿಸಬಹುದು. ದೇಶದೊಳಗೆ ಕಳುಹಿಸಲು ಅಂತರ್ದೇಶೀಯ ಪತ್ರ. ಭೂಮಿಯೊಳಗೆ ಇರುವ ನೀರು ಅಂತರ್ಜಲ. ಇಂಟರ್ನ್ಯಾಶನಲ್ ಎಂಬುದಕ್ಕೆ ಪಾರಿಭಾಷಿಕ ಪದ ಅಂತರರಾಷ್ಟ್ರೀಯ ಅಥವಾ ಅಂತಾರಾಷ್ಟ್ರೀಯ. ಹಾಗೆ ನೋಡ ಹೊರಟರೆ ಬೇರೆ ಜಾತಿಯ ಹುಡುಗ ಹುಡುಗಿ ಮದುವೆಯಾಗುವುದಕ್ಕೆ ಅಂತರ್ಜಾತೀಯ ವಿವಾಹ ಎಂದು ಬರೆಯುವುದೂ ತಪ್ಪು. ಅದು ಅಂತರಜಾತೀಯ ವಿವಾಹ ಎಂದಾಗಬೇಕು.

e - ಸಲಹೆ

ಕನ್ನಡದಲ್ಲಿ ಬ್ಲಾಗಿಸುವವರ ಸಂಖ್ಯೆ ಸಾವಿರ ದಾಟಿದೆ. ಯಾರು ಯಾವಾಗ ತಮ್ಮ ಬ್ಲಾಗಿಗೆ ಹೊಸ ಲೇಖನ ಸೇರಿಸಿದ್ದಾರೆ ಎಂದು ತಿಳಿಯುವುದು ಹೇಗೆ? ಪ್ರತಿಯೊಂದು ಬ್ಲಾಗಿನ ಜಾಲತಾಣವನ್ನೂ ತೆರೆದು ನೋಡುತ್ತಾ ಕುಳಿತರೆ ಸಮಯ ಎಷ್ಟು ಬೇಕು? ಇದಕ್ಕೊಂದು ಸುಲಭ ಪರಿಹಾರ ಇದೆ. ಅದುವೇ ಗೂಗ್ಲ್ ರೀಡರ್. ಇದರ ವಿಳಾಸ www.google.com/reader. ನಿಮಗೆ ಗೂಗ್ಲ್ (ಜಿಮೈಲ್) ಖಾತೆ ಇದ್ದಲ್ಲಿ ಇಲ್ಲೂ ಅದನ್ನೇ ಬಳಸಬಹುದು. ಇದಕ್ಕೆ ಲಾಗಿನ್ ಆಗಿ ನಿಮಗೆ ಓದಬೇಕಾಗಿರುವ ಬ್ಲಾಗಿನ ವಿಳಾಸವನ್ನು ನೀಡಿ ಅದಕ್ಕೆ ಚಂದಾದಾರರಾಗಿ. ಹಾಗೆ ಎಲ್ಲ ಬ್ಲಾಗುಗಳಿಗೆ ಮಾಡಿ. ನಂತರ ಜಾಲತಾಣಕ್ಕೆ ಭೇಟಿ ನೀಡಿದರೆ ಸಾಕು. ಬ್ಲಾಗಿಸುವವರೂ ಅಷ್ಟೆ. ನನ್ನ ಬ್ಲಾಗಿನಲ್ಲಿ ಹೊಸ ಲೇಖನ ಇದೆ. ಓದಿ ಸಲಹೆ ನೀಡಿ ಎಂದು ಹೊಸ ಲೇಖನ ಸೇರಿಸಿದಾಗೆಲ್ಲ ಒಂದು ಇಮೈಲ್ ಕಳುಹಿಸುವ ಅಗತ್ಯ ಇಲ್ಲ.

ಕಂಪ್ಯೂತರ್ಲೆ

ಇನ್ಕಂ ಟ್ಯಾಕ್ಸ್ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಕೋಲ್ಯ ಮದುವೆಗೆ ಹುಡುಗಿ ನೋಡಲು ಹೋದ. ಹುಡುಗಿ ಐಟಿ, ಅಂದರೆ ಮಾಹಿತಿ ತಂತ್ರಜ್ಞಾನದಲ್ಲಿ, ಕೆಲಸ ಮಾಡುತ್ತಿರುವ ಹುಡುಗಿ. ಕೋಲ್ಯ ತಾನೂ ಐಟಿಯಲ್ಲೇ ಕೆಲಸ ಮಾಡುತ್ತಿರುವುದು ಎಂದೊಡನೆ ಹುಡುಗಿ ಕೇಳಿದಳು ಯಾವ ಪ್ಲಾಟ್ಫಾರಂನಲ್ಲಿ ಕೆಲಸ ಮಾಡುತ್ತಿದ್ದೀರಾ?”. ಕೋಲ್ಯನಿಗೆ ವಿಪರೀತ ಸಿಟ್ಟು ಬಂತು. ನಾನು ರೈಲ್ವೆ ನಿಲ್ದಾಣದಲ್ಲಿ ಸಾಮಾನು ಹೊರುವ ಕೂಲಿಯಾಗಿ ಕೆಲಸ ಮಾಡುತ್ತಿದ್ದೇನೆ ಎಂದುಕೊಡಿದ್ದೀಯಾ? ಎಂದು ಗುರ್ರಾಯಿಸಿದ. ಮದುವೆ ಮುರಿದು ಬಿತ್ತು ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ ತಾನೆ?

1 ಕಾಮೆಂಟ್‌: