ಮಂಗಳವಾರ, ಜುಲೈ 21, 2009

ಗಣಕಿಂಡಿ - ೦೧೦ (ಜುಲೈ ೨೦, ೨೦೦೯)

ಅಂತರಜಾಲಾಡಿ

ಉಚಿತ ಫಾಂಟ್‌ಗಳು

ಗಣಕದಲ್ಲಿ ಊಡಿಸಿದ ಮಾಹಿತಿಯನ್ನು ಪರದೆಯ ಮೇಲೆ ಮೂಡಿಸಲು ಅಥವಾ ಮುದ್ರಿಸಲು ಬಳಸುವ ಅಕ್ಷರಶೈಲಿಗಳಿಗೆ ಗಣಕ ಪರಿಭಾಷೆಯಲ್ಲಿ ಫಾಂಟ್ ಎನ್ನುತ್ತಾರೆ. ಹಲವು ವಿನ್ಯಾಸಗಳ ಫಾಂಟ್‌ಗಳಿರುವುದು ಗಣಕ ಬಳಸುವ ಎಲ್ಲರಿಗೂ ತಿಳಿದಿರುವ ವಿಷಯ. ಪುಸ್ತಕ ವಿನ್ಯಾಸ ಮಾಡುವವರು ಅಥವಾ ಆಹ್ವಾನ ಪತ್ರಿಕೆ ತಯಾರಿಸುವವರು ಹಲವು ನಮೂನೆಯ ಫಾಂಟ್‌ಗಳನ್ನು ತಮ್ಮ ಗಣಕದಲ್ಲಿ ಇಟ್ಟುಕೊಂಡಿರುತ್ತಾರೆ. ಸಾಮಾನ್ಯವಾಗಿ ಈ ರೀತಿಯ ವಿವಿಧ ವಿನ್ಯಾಸದ ಫಾಂಟ್‌ಗಳನ್ನು ದುಡ್ಡು ಕೊಟ್ಟು ಕೊಂಡುಕೊಳ್ಳಬೇಕು. ಸಾವಿರಾರು ಉಚಿತ ಫಾಂಟ್‌ಗಳು ದೊರಕುವ ಜಾಲತಾಣ www.dafont.com. ಆದರೆ ಇಲ್ಲಿ ಭಾರತೀಯ ಭಾಷೆಯ ಫಾಂಟ್‌ಗಳು ಇಲ್ಲ.

ಡೌನ್‌ಲೋಡ್

ಗಣಕಕ್ಕೊಂದು ಪೊರಕೆ

ಗಣಕ ಬಳಸುತ್ತಿದ್ದಂತೆ ಅದರಲ್ಲಿ ಬೇಡವಾದ ಮಾಹಿತಿಗಳು ಶೇಖರವಾಗುತ್ತ ಹೋಗುತ್ತವೆ. ಇವು ಕುಲಗೆಟ್ಟ ಫೈಲುಗಳು, ಅಂತರಜಾಲತಾಣ ವೀಕ್ಷಣೆ ಮಾಡುವಾಗ ಶೇಖರಗೊಂಡ ಫೈಲುಗಳು, ತಂತ್ರಾಂಶಗಳನ್ನು ತೆಗೆದುಹಾಕುವಾಗ ಅರೆಬರೆಯಾಗಿ ಉಳಿದ ಫೈಲುಗಳು -ಹೀಗೆ ಹಲವು ರೀತಿಯ ಕಚಡಗಳಿರಬಹುದು. ಇವು ಗಣಕದ ಹಾರ್ಡ್‌ಡಿಸ್ಕ್‌ನಲ್ಲಿ ಜಾಗವನ್ನು ಸುಮ್ಮನೆ ಹಾಳು ಮಾಡುತ್ತಿರುತ್ತವೆ. ಇವುಗಳನ್ನು ಆಗಾಗ ಸ್ವಚ್ಛ ಮಾಡಿದರೆ ಒಳ್ಳೆಯದು. ಇದಕ್ಕಾಗಿ ಸಿಕ್ಲೀನರ್ ಎನ್ನುವ ತಂತ್ರಾಂಶವನ್ನು ಬಳಸಬಹುದು. ಇದು ದೊರೆಯುವ ಜಾಲತಾಣ - www.ccleaner.com. ಇದು ಹಾರ್ಡ್‌ಡಿಸ್ಕ್‌ನಲ್ಲಿರುವ ಕಚಡ ಮಾತ್ರವಲ್ಲ, ಬ್ರೌಸರ್‌ನಲ್ಲಿ ನೀವು ವೀಕ್ಷಿಸಿದ ಜಾಲತಾಣಗಳ ಪಟ್ಟಿ, ತಾತ್ಕಾಲಿಕ ಫೈಲುಗಳು, ಕುಕಿ, ರಿಸೈಕ್ಲ್ ಬಿನ್ ಎಲ್ಲ ಗುಡಿಸಿಹಾಕುತ್ತದೆ. ಆಗಾಗ ಇದನ್ನು ಚಾಲನೆ ಮಾಡಿದರೆ ನಿಮ್ಮ ತಂತ್ರಾಂಶಗಳಿಗೆ ಹೆಚ್ಚು ಜಾಗ ದೊರೆಯುವಂತಾಗುತ್ತದೆ.

e - ಸುದ್ದಿ

ಯುವಕ ಯುವತಿಯರು ಯಾವಾಗ ನೋಡಿದರೂ ಮೊಬೈಲ್ ಫೋನು ಹಿಡಿದುಕೊಂಡು ಕಿರು ಸಂದೇಶ ಕಳುಹಿಸುತ್ತಲೇ ಇರುವುದನ್ನು ಗಮನಿಸಿರಬಹುದು. ಈಗಂತೂ ಮೈಕ್ರೋಬ್ಲಾಗಿಂಗ್ ಮತ್ತು ಟ್ವಿಟ್ಟರ್ ಬಂದ ಮೇಲೆ ಕೇಳುವುದೇ ಬೇಡ. ಫೋನಿನಲ್ಲಿ ಸಂದೇಶ ಕುಟ್ಟುತ್ತ ಸುತ್ತ ಮುತ್ತ ಏನು ನಡೆಯುತ್ತಿದೆ ಎಂಬ ಪರಿವೆಯೇ ಇರುವುದಿಲ್ಲ. ಅಮೆರಿಕ ದೇಶದಲ್ಲಿ ೧೫ ವರ್ಷದ ಹುಡುಗಿಯೊಬ್ಬಳು ರಸ್ತೆ ಪಕ್ಕ ನಡೆಯುತ್ತ ಮೊಬೈಲ್ ಫೋನಿನಲ್ಲಿ ಸಂದೇಶ ಕುಟ್ಟುತ್ತ ತೆರೆದಿದ್ದ ಮ್ಯಾನ್‌ಹೋಲ್ ಮೂಲಕ ಚರಂಡಿಯೊಳಗೆ ಬಿದ್ದಳು. ಚರಂಡಿ ಮುಚ್ಚಳ ತೆರೆದಿದ್ದದ್ದು ಅವಳಿಗೆ ಗೊತ್ತಾಗಲಿಲ್ಲ. ಜನರೆಲ್ಲ ಸೇರಿ ಅವಳನ್ನು ಸುರಕ್ಷಿತವಾಗಿ ಮೇಲೆ ಎಳೆದರೆನ್ನಿ. ಆದರೆ ಅವಳ ತಂದೆ ಮಾತ್ರ ಚರಂಡಿ ಮುಚ್ಚದೆ ಬಿಟ್ಟದ್ದಕ್ಕಾಗಿ ಮುನಿಸಿಪಾಲಿಟಿಯ ಮೇಲೆ ಕೋರ್ಟಿನಲ್ಲಿ ಕೇಸು ದಾಖಲಿಸಿರುವುದು ವರದಿಯಾಗಿದೆ. ಭಾರತದಲ್ಲಿ ಹೀಗೆ ಆಗುವುದು ಕಡಿಮೆ, ಯಾಕೆಂದರೆ ಯಾರೂ ರಸ್ತೆ ಪಕ್ಕದ ಪಾದಚಾರಿ ದಾರಿಯಲ್ಲಿ ನಡೆಯುವುದೇ ಇಲ್ಲ; ಎಲ್ಲರೂ ರಸ್ತೆಯಲ್ಲೇ ನಡೆಯುತ್ತಾರೆ ಎನ್ನುತ್ತೀರಾ?

e- ಪದ

ಸಿಲ್ವರ್‌ಲೈಟ್ (Silverlight) - ಚಿತ್ರಸಂಚಲನೆ (ಅನಿಮೇಶನ್) ಮತ್ತು ವಿಡಿಯೋಗಳನ್ನು ಅಂತರಜಾಲ ಮೂಲಕ ತೋರಿಸಲು ಮತ್ತು ಪ್ರತಿಸ್ಪಂದನಾತ್ಮಕವಾಗಿ ಕೆಲಸ ಮಾಡಲು ಮೈಕ್ರೋಸಾಫ್ಟ್‌ನವರು ಹೊರತಂದಿರುವ ಒಂದು ತಂತ್ರಾಂಶ ಸವಲತ್ತು. ಇದು ಮೈಕ್ರೋಸಾಫ್ಟ್‌ನವರ ತಂತ್ರಾಂಶಗಳಾದ ವಿಂಡೋಸ್, ಇಂಟರ್‌ನೆಟ್ ಎಕ್ಸ್‌ಪ್ಲೋರರ್ ಮಾತ್ರವಲ್ಲದೆ ಫೈರ್‌ಪಾಕ್ಸ್ ಮತ್ತು ಸಫಾರಿ ಬ್ರೌಸರ್‌ಗಳಲ್ಲೂ ಕೆಲಸ ಮಾಡುತ್ತದೆ. ಇದು ಅಡೋಬ್ ಕಂಪೆನಿಯರ ಫ್ಲಾಶ್ ಮತ್ತು ಆಪಲ್ ಕಂಪೆನಿಯವರ ಕ್ವಿಕ್‌ಟೈಮ್ ತಂತ್ರಾಂಶಗಳಿಗೆ ಪ್ರತಿಸ್ಪರ್ಧಿಯಾಗಿದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿಗೆ silverlight.net ಜಾಲತಾಣ ನೋಡಬಹುದು.

e - ಸಲಹೆ

ಗಣಕದಲ್ಲಿ ಸಿ.ಡಿ. ಅಥವಾ ಯುಎಸ್‌ಬಿ ಡ್ರೈವ್ ತೂರಿಸಿದೊಡನೆ ಆಟೋಪ್ಲೇ ಚಾಲೂ ಆಗುತ್ತದೆ. ಸಾಮಾನ್ಯವಾಗಿ ಸಿ.ಡಿ. ಆದರೆ ಸಿ.ಡಿ.ಯಲ್ಲಿರುವ ಪ್ರಾರಂಭದ ತಂತ್ರಾಂಶ ತಂತಾನೇ ಚಾಲೂ ಆಗುತ್ತದೆ. ಯುಎಸ್‌ಬಿಯಲ್ಲಾದರೆ ಡ್ರೈವ್‌ನ ಫೈಲುಗಳ ಪಟ್ಟಿ ತೆರೆಯುತ್ತದೆ. ಯುಎಸ್‌ಬಿ ಡ್ರೈವ್‌ನಲ್ಲಿ ಕೂಡ ಆಟೋಪ್ಲೇ ತಂತ್ರಾಂಶ ಇದ್ದರೆ ಅದು ಚಾಲನೆಗೊಳ್ಳುತ್ತದೆ. ಈ ಆಟೋಪ್ಲೇ ಆಗಬಾರದೆಂದಿದ್ದರೆ ಮಾಡಬೇಕಾದದ್ದು ಇಷ್ಟೆ -ಸಿ.ಡಿ. ಹಾಕುವಾಗ ಅಥವಾ ಯುಎಸ್‌ಬಿ ಡ್ರೈವ್ ತೂರಿಸುವಾಗ ಶಿಫ್ಟ್ ಕೀಯನ್ನು ಒತ್ತಿ ಹಿಡಿದುಕೊಳ್ಳಬೇಕು. ಇತ್ತೀಚೆಗೆ ವೈರಸ್‌ಗಳು ಆಟೋಪ್ಲೇ ಮೂಲಕ ಚಾಲನೆಗೊಳ್ಳುತ್ತಿವೆ. ಆದುದರಿಂದ ಈ ಬಗ್ಗೆ ಸ್ವಲ್ಪ ಜಾಗರೂಕರಾಗಿದ್ದರೆ ಒಳ್ಳೆಯದು.


(ನಿಮ್ಮಲ್ಲಿ ಗಣಕ, ಅಂತರಜಾಲ ಸಂಬಂಧಿ ಸಮಸ್ಯೆಗಳೇನಾದರೂ ಇದ್ದಲ್ಲಿ ganakindi AT gmail DOT com ಗೆ ಇಮೈಲ್ ಕಳುಹಿಸಬಹುದು)

ಕಂಪ್ಯೂತರ್ಲೆ

ಕೋಲ್ಯ ಹೊಸ ಗಣಕ ಕೊಂಡುಕೊಂಡ. ರಾತ್ರಿಯೆಲ್ಲ ಕೆಲಸ ಮಾಡುತ್ತಲೇ ಇದ್ದ. ಬೆಳಗ್ಗೆ ಬಂದ ಬಾಸ್‌ಗೆ ಖುಷಿಯಾಗಿ ಕೇಳಿದ “ರಾತ್ರಿಯೆಲ್ಲ ಕಂಪ್ಯೂಟರಿನಲ್ಲಿ ಏನು ಕೆಲಸ ಮಾಡುತ್ತಿದ್ದೆ?”. ಕೋಲ್ಯ ಹೇಳಿದ “ಸಾರ್, ಈ ಕಂಪ್ಯೂಟರಿನ ಕೀಬೋರ್ಡಿನಲ್ಲಿ ಅಕ್ಷರಗಳು ಒಂದು ಕ್ರಮದಲ್ಲಿ ಇಲ್ಲ. ಅವುಗಳನ್ನೆಲ್ಲ ಕಿತ್ತು ಕ್ರಮಬದ್ಧವಾಗಿ ಜೋಡಿಸಿದೆ”

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ