ಭಾನುವಾರ, ಆಗಸ್ಟ್ 2, 2009

ಗಣಕಿಂಡಿ - ೦೧೧ (ಜುಲೈ ೨೭, ೨೦೦೯)

ಅಂತರಜಾಲಾಡಿ

ಚಲನಚಿತ್ರಪ್ರಿಯರಿಗೆ

ಚಲನಚಿತ್ರ ನೋಡದವರ‍್ಯಾರು? ಚಲನಚಿತ್ರ ನೋಡುವ ಮೊದಲು ಸಾಮಾನ್ಯವಾಗಿ ಆ ಚಲನಚಿತ್ರದ ಬಗ್ಗೆ ವಿಮರ್ಶೆಗಳು ಏನು ಹೇಳುತ್ತಿವೆ ಎಂದು ನೋಡುವ ಪರಿಪಾಠವಿದೆ ತಾನೆ? ಹಾಗೆಯೇ, ಸಿನಿಮಾ ನೋಡಿ ಬಂದವರೊಡನೆ ಆ ಸಿನಿಮಾ ಬಗ್ಗೆ ಅಭಿಪ್ರಾಯವನ್ನೂ ಕೇಳುವುದು ಸಾಮಾನ್ಯ. ಸಿನಿಮಾಗಳ ಬಗ್ಗೆ ಸಮಸ್ತ ವಿವರ ನಿಡುವ ಜಾಲತಾಣ www.imdb.com. ಈ ಜಾಲತಾಣದಲ್ಲಿ ಸಿನಿಮಾಗಳ ಹೆಸರು, ನಿರ್ದೇಶಕ, ನಟ, ನಟಿ, ತಂತ್ರಜ್ಞರು ಎಲ್ಲ ವಿವರಗಳು ಸಿಗುತ್ತವೆ. ಆ ಚಲನಚಿತ್ರ ನೋಡಿದವರ ಅಭಿಪ್ರಾಯಗಳು, ಅದರ ಬಗ್ಗೆ ಅವರು ನೀಡಿದ ರೇಟಿಂಗ್ ಎಲ್ಲ ನೋಡಬಹುದು. ಜಗತ್ತಿನ ಶ್ರೇಷ್ಠ ಸಿನಿಮಾಗಳ ಪಟ್ಟಿಯೂ ಇಲ್ಲಿದೆ. ಇನ್ನು ಮುಂದೆ ಸಿನಿಮಾ ನೋಡುವ ಮೊದಲು ಈ ಜಾಲತಾಣಕ್ಕೆ ಭೇಟಿ ನೀಡುತ್ತೀರಿ ತಾನೆ? ಅಂದ ಹಾಗೆ ಈ ಜಾಲತಾಣದಲ್ಲಿ 436 ಕನ್ನಡ ಚಲನಚಿತ್ರಗಳ ವಿವರ ಇದೆ. ಚಲನಚಿತ್ರ ನೋಡಿದ ನಂತರ ಆ ಸಿನಿಮಾದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ದಾಖಲಿಸಲು ಮರೆಯಬೇಡಿ.

ಡೌನ್‌ಲೋಡ್

ನಿಮ್ಮ ಗಣಕಕ್ಕೊಂದು ಕಾವಲುನಾಯಿ

ಪ್ರತಿ ಮನೆಗೊಂದು ಕಾವಲುನಾಯಿ ಬೇಕು ತಾನೆ? ಅದೇ ರೀತಿ ನಿಮ್ಮ ಗಣಕಕ್ಕೂ ಒಂದು ಕಾವಲುನಾಯಿ ರೀತಿ ಕೆಲಸ ಮಾಡುವ ತಂತ್ರಾಂಶ ಬೇಕು. ಇಂತಹ ಒಂದು ಉಚಿತ ತಂತ್ರಾಂಶ ವಿನ್‌ಪಾಟ್ರೋಲ್. ಇದು ದೊರೆಯುವ ಜಾಲತಾಣ bit.ly/LoCBR. ಇದು ಗಣಕದಲ್ಲಿ ನಡೆಯುತ್ತಿರುವ ಎಲ್ಲ ಕ್ರಿಯೆಗಳ ಮೇಲೆ ಒಂದು ಕಣ್ಣಿಟ್ಟಿರುತ್ತದೆ. ಯಾವುದೇ ತಂತ್ರಾಂಶ ತಾನು ಮಾಡಬೇಕಾದ ಕೆಲಸ ಬಿಟ್ಟು ಇತರೆ ಗೌಪ್ಯ ಕೆಲಸ ಮಾಡಲು ಹೊರಟರೆ ಇದು ಕೂಡಲೆ ಬೊಗಳಿ(!) ಎಚ್ಚರಿಕೆ ನೀಡುತ್ತದೆ. ಅಂತರಜಾಲ ವೀಕ್ಷಣೆ ಮಾಡುವಾಗ ಕೆಲವು ಜಾಲತಾಣಗಳು ನಿಮ್ಮ ಅನುಮತಿಯಿಲ್ಲದೆ ತಂತ್ರಾಂಶಗಳನ್ನು ಇನ್‌ಸ್ಟಾಲ್ ಮಾಡಲು ಹೊರಟರೆ ಅಥವಾ ಬ್ರೌಸರಿನ ಆಯ್ಕೆಗಳನ್ನು ಬದಲಾವಣೆ ಮಾಡಲು ಪ್ರಯತ್ನಿಸಿದರೆ ವಿನ್‌ಪಾಟ್ರೋಲ್ ತಂತ್ರಾಂಶ ಎಚ್ಚರಿಕೆ ನೀಡುತ್ತದೆ.

e - ಸುದ್ದಿ

ಆಪಲ್ ಗೌಪ್ಯತೆ ಒತ್ತಡಕ್ಕೆ ತಂತ್ರಜ್ಞ ಬಲಿ

ಆಪಲ್ ಕಂಪೆನಿಯ ಐಪಾಡ್ ಮತ್ತು ಐಫೋನ್‌ಗಳು ತಮ್ಮ ವಿನ್ಯಾಸಕ್ಕೆ ಜಗತ್ಪ್ರಸಿದ್ಧ. ತಮ್ಮ ಹೊಸ ಮಾದರಿಯ ಉತ್ಪನ್ನ ಮಾರುಕಟ್ಟೆಗೆ ಇನ್ನು ಆರು ತಿಂಗಳ ನಂತರ ಬಿಡುಗಡೆಯಾಗುತ್ತದೆ ಎಂದು ಅವರು ಘೋಷಿಸಿದೊಡನೆ ಅದು ಹೇಗಿರಬಹುದೆಂಬ ಊಹಾಪೋಹನೆಯ ವಿನ್ಯಾಸಗಳು ನೂರಾರು ಬ್ಲಾಗುತಾಣಗಳಲ್ಲಿ ರಾರಾಜಿಸತೊಡಗುತ್ತವೆ. ಉತ್ಪನ್ನ ಮಾರುಕಟ್ಟೆಗೆ ಬರುವ ತನಕ ಅದು ಹೇಗಿರುತ್ತದೆ ಎಂಬುದನ್ನು ತುಂಬ ಗೌಪ್ಯವಾಗಿ ಇಡಲಾಗುತ್ತದೆ. ಈ ಗೋಪ್ಯತೆಯನ್ನು ಕಾಪಾಡಲಿಕ್ಕಾಗಿ ಆಪಲ್ ಕಂಪೆನಿ ತನ್ನ ಹೊರಗುತ್ತಿಗೆಯ ಕಂಪೆನಿಗಳಿಗೆ ತುಂಬ ಒತ್ತಡ ಹೇರುತ್ತದೆ. ಚೀನಾ ದೇಶದಲ್ಲಿ ಆಪಲ್ ಕಂಪೆನಿಯ ಉತ್ಪನ್ನಗಳ ವಿನ್ಯಾಸದ ಹೊರಗುತ್ತಿಗೆ ಪಡೆದಿದ್ದ ಕಂಪೆನಿ ತಂತ್ರಜ್ಞನೊಬ್ಬ ಈ ಒತ್ತಡದಿಂದಾಗಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ವರದಿಯಾಗಿದೆ. ಆತನ ಕಂಪೆನಿಯಲ್ಲಿ ಆಪಲ್‌ನ ೪ನೆ ಆವೃತ್ತಿಯ ಫೋನುಗಳ ವಿನ್ಯಾಸ ನಡೆಯುತ್ತಿತ್ತು. ಒಂದು ಫೋನು ಕಾಣೆಯಾದುದು ಆತನ ಗಮನಕ್ಕೆ ಬಂತು. ಅದನ್ನು ಆತ ವರದಿ ಮಾಡಿದ. ಕಂಪೆನಿಯವರು ಆತನ ಮನೆ ತನಿಖೆ ಮಾಡಿ ಆತನನ್ನು ಕೆಟ್ಟದಾಗಿ ನಡೆಸಿಕೊಂಡರು. ಇದರಿಂದ ನೊಂದ ಆತ ಆತ್ಮಹತ್ಯೆಗೆ ಶರಣಾದ.

e- ಪದ

ಬ್ರೌಸರ್ (browser) -ಜಾಲತಾಣ ವೀಕ್ಷಕ ತಂತ್ರಾಂಶ. ವಿಶ್ವವ್ಯಾಪಿಜಾಲದಲ್ಲಿ (world wide web) ಕೋಟಿಗಟ್ಟಲೆ ಜಾಲತಾಣಗಳಿವೆ (web-sites). ಈ ಜಾಲತಾಣಗಳನ್ನು ವೀಕ್ಷಿಸಲು ಬಳಸುವ ತಂತ್ರಾಂಶವೇ ಬ್ರೌಸರ್. ಹಲವಾರು ಬ್ರೌಸರ್ ತಂತ್ರಾಂಶಗಳಿವೆ. ಮೈಕ್ರೋಸಾಫ್ಟ್ ಕಂಪೆನಿಯ ಇಂಟರ್‌ನೆಟ್ ಎಕ್ಸ್‌ಪ್ಲೋರರ್, ಮೊಝಿಲ್ಲಾ ಫೈರ್‌ಪಾಕ್ಸ್, ಆಪಲ್ ಸಫಾರಿ, ಒಪೆರಾ, ಗೂಗ್ಲ್ ಕ್ರೋಮ್ -ಇವು ಕೆಲವು ಉದಾಹರಣೆಗಳು. ಇವುಗಳಲ್ಲಿ ಇಂಟರ್‌ನೆಟ್ ಎಕ್ಸ್‌ಪ್ಲೋರರ್ ಸದ್ಯಕ್ಕೆ ಜನಪ್ರಿಯತೆಯಲ್ಲಿ ಮೊದಲನೆಯ ಸ್ಥಾನದಲ್ಲಿದೆ.

e - ಸಲಹೆ

ಗಣಕ ನಿಧಾನವಾಗಿ ಕೆಲಸ ಮಾಡುತ್ತಿದ್ದರೆ ಅದಕ್ಕೆ ಹಲವು ಕಾರಣಗಳಿರಬಹುದು. ಅವುಗಳಲ್ಲಿ ಒಂದು ಪ್ರಮುಖ ಕಾರಣ ಹಾರ್ಡ್‌ಡಿಸ್ಕ್‌ನಲ್ಲಿರುವ ಫೈಲುಗಳು ಚಲ್ಲಾಪಿಲ್ಲಿಯಾಗಿರುವುದು. ಈ ಫೈಲುಗಳನ್ನು ಒಂದು ಕ್ರಮದಲ್ಲಿ ಜೋಡಿಸಿ ಖಾಲಿ ಜಾಗವನ್ನು ಕೂಡ ಕ್ರಮವಾಗಿ ಜೋಡಿಸಿದರೆ ಗಣಕ ವೇಗವಾಗಿ ಕೆಲಸ ಮಾಡುತ್ತದೆ. ಇದಕ್ಕೆ ಗಣಕ ಪರಿಭಾಷೆಯಲ್ಲಿ ಡಿಸ್ಕ್ ಡಿಫ್ರಾಗ್ಮೆಂಟೇಶನ್ ಎನ್ನುತ್ತಾರೆ. ಇದಕ್ಕಾಗಿ ಹಾರ್ಡ್‌ಡಿಸ್ಕ್‌ನ ಐಕಾನ್ ಮೇಲೆ ಬಲ ಮೌಸ್ ಗುಂಡಿ ಅದುಮಿ Properties ಆಯ್ಕೆ ಮಾಡಿ. ನಂತರ Tools ಟ್ಯಾಬ್ ಮೇಲೆ ಕ್ಲಿಕ್ ಮಾಡಿ, ನಂತರ Defragment now ಎಂಬ ಬಟನ್ ಮೇಲೆ ಒತ್ತಿ.

ಕಂಪ್ಯೂತರ್ಲೆ

ಕೋಲ್ಯ “ನನ್ನ ಮನೆಯಲ್ಲಿರುವ ಬೆಕ್ಕು ನಿನಗೆ ಬೇಕಾ?”
ಸಂತಾ “ಯಾಕೆ? ನಿನಗೆ ಬೇಡವಾ?”
ಕೋಲ್ಯ “ನಾನು ನಾಳೆ ಒಂದು ಹೊಸ ಕಂಪ್ಯೂಟರ್ ಕೊಂಡು ತರುವವನಿದ್ದೇನೆ”
ಸಂತಾ “ಅದಕ್ಕೂ ಬೆಕ್ಕನ್ನು ನನಗೆ ನೀಡುವುದಕ್ಕೂ ಏನು ಸಂಬಂಧ?”
ಕೋಲ್ಯ “ಕಂಪ್ಯೂಟರಿನ ಜೊತೆ ಮೌಸ್ ಇರುತ್ತಲ್ಲ. ಅದಕ್ಕೆ ಬೆಕ್ಕು ಮನೆಯಲ್ಲಿ ಬೇಡ ಎಂದು”

3 ಕಾಮೆಂಟ್‌ಗಳು:

 1. WinPatrolಅನ್ನು USB Flash driveಗೆ download ಮಾಡಿಕೊಳ್ಳಬೇಕೆಂದು ತಿಳಿಸಿದ್ದಾರಲ್ಲ? ಹಾಗಂದರೇನು? ದಯವಿಟ್ಟು ತಿಳಿಸುವಿರಾ?

  ಪ್ರತ್ಯುತ್ತರಅಳಿಸಿ
 2. ವಿನ್‌ಪಾಟ್ರೋಲ್ ಅನ್ನು USB Flash drive ಗೆ ಕೂಡ ಡೌನ್‌ಲೋಡ್ ಮಾಡಿಕೊಳ್ಳಬಹುದು. ಅಷ್ಟೆ. ಅದಕ್ಕೇ ಡೌನ್‌ಲೋಡ್ ಮಾಡಿಕೊಳ್ಳಬೇಕೆಂದೇನೂ ಇಲ್ಲ.

  -ಪವನಜ

  ಪ್ರತ್ಯುತ್ತರಅಳಿಸಿ
 3. ಸರ್,
  ಕಂಪ್ಯೂತರ್ಲೆಯಿಂದಾಗಿ ಕನ್ನಡಕ್ಕೆ ಹೊಸ ಹೊಸ ಜೋಕುಗಳು ಸಿಗುತ್ತಿವೆ ನೋಡಿ..
  ಥ್ಯಾಂಕ್ಯೂ..
  -ಸು

  ಪ್ರತ್ಯುತ್ತರಅಳಿಸಿ