ಬುಧವಾರ, ಆಗಸ್ಟ್ 26, 2009

ಗಣಕಿಂಡಿ - ೦೧೫ (ಆಗಸ್ಟ್ ೨೫, ೨೦೦೯)

ಅಂತರಜಾಲಾಡಿ

ಯಾರು ಏನು ಹೇಳಿದರು?

ಭಾಷಣ ಮಾಡುವಾಗ, ತರಗತಿಯಲ್ಲಿ ಪಾಠ ಮಾಡುವಾಗ, ಲೇಖನ ಬರೆಯುವಾಗ ಆಗಾಗ ಅಲ್ಲಲ್ಲಿ ಖ್ಯಾತನಾಮರ ಮಾತುಗಳನ್ನು ಉದಾಹರಿಸುವ ಅಭ್ಯಾಸ ಇದೆ ತಾನೆ? ಹೀಗೆ ಉದಾಹರಿಸಲು ಪ್ರಸಿದ್ಧ ಮಾತುಗಳನ್ನು ಬರೆದಿಟ್ಟುಕೊಳ್ಳುವ ಅಭ್ಯಾಸವೂ ಕೆಲವರಿಗಿದೆ. ಕೆಲವೊಮ್ಮೆ ಇಂತಹ ಮಾತುಗಳು ಜೀವನಕ್ಕೆ ದಾರಿದೀಪವಾಗಿಯೂ ಬೇಕಾಗುತ್ತವೆ. ಇಂತಹ ಜಗತ್ಪ್ರಸಿದ್ಧ ಮಾತುಗಳ ಜಾಲತಾಣ www.brainyquote.com. ನೀವು ಆಗಾಗ ಇಲ್ಲಿಗೆ ಭೇಟಿ ನೀಡಿ ಕೊಟೇಶನ್‌ಗಳನ್ನು ಓದಬಹುದು, ಅವುಗಳಿಗೆ ಚಂದಾದಾರರಾಗಬಹುದು, ನಿಮ್ಮ ಗಣಕದ ಪರದೆಯಲ್ಲಿ ಒಂದು ಬದಿಯಲ್ಲಿ ಈ ಮಾತುಗಳು ಬರುತ್ತಾ ಇರುವಂತೆ ಮಾಡಬಹುದು, ನಿಮ್ಮ ಬ್ಲಾಗ್‌ತಾಣದಲ್ಲಿ ಅವು ಮೂಡುವಂತೆ ಮಾಡಬಹುದು -ಇತ್ಯಾದಿ ಸವಲತ್ತುಗಳಿವೆ.

ಡೌನ್‌ಲೋಡ್Link
ಪಿಡಿಎಫ್ ಕಡತ ತಯಾರಿಸಿ

ಅಡೋಬ್‌ನವರ ಪಿಡಿಎಫ್ ಮಾದರಿಯ ಕಡತಗಳನ್ನು ನೀವೆಲ್ಲ ಗಮನಿಸಿರಬಹುದು ಹಾಗೂ ಓದಿರಬಹುದು. ಕನ್ನಡಪ್ರಭ ಪತ್ರಿಕೆಯೂ ಅಂತರಜಾಲದಲ್ಲಿ ಪಿಡಿಎಫ್ ಮಾದರಿಯಲ್ಲಿ ಓದಲು ಲಭ್ಯವಿದೆ. ನೀವು ತಯಾರಿಸಿದ ಪತ್ರ, ಕಡತ ಅಥವಾ ಪುಸ್ತಕವನ್ನು ಪಿಡಿಎಫ್ ಆಗಿ ಬದಲಾಯಿಸಬೇಕೆ? ಹಾಗೆ ಮಾಡಲು ಅಡೋಬ್‌ನವರದೇ ಆಕ್ರೋಬಾಟ್ ತಂತ್ರಾಂಶ ಲಭ್ಯವಿದೆ. ಆದರೆ ಅದು ಬಲು ದುಬಾರಿ. ಇದೇ ಕೆಲಸ ಮಾಡಲು ನೆರವಾಗುವ ಉಚಿತ ತಂತ್ರಾಂಶ ಪಿಡಿಎಫ್ ಕ್ರಿಯೇಟರ್. ಇದು ದೊರೆಯುವ ಜಾಲತಾಣ http://bit.ly/i1OXM. ಈ ತಂತ್ರಾಂಶವನ್ನು ಇನ್‌ಸ್ಟಾಲ್ ಮಾಡಿಕೊಂಡರೆ ಇದು ಒಂದು ಮುದ್ರಕ (ಪ್ರಿಂಟರ್) ಆಗಿ ಕಂಡುಬರುತ್ತದೆ. ಯಾವುದೇ ತಂತ್ರಾಂಶದಿಂದ (ಉದಾ -ಮೈಕ್ರೋಸಾಫ್ಟ್ ವರ್ಡ್, ಪೇಜ್‌ಮೇಕರ್, ಇಂಟರ್‌ನೆಟ್ ಎಕ್ಸ್‌ಪ್ಲೋರರ್, ಇತ್ಯಾದಿ) ಮುದ್ರಿಸು (ಪ್ರಿಂಟ್) ಎಂದು ಆಯ್ಕೆ ಮಾಡಿ ಮುದ್ರಕವಾಗಿ PDFCreator ಅನ್ನು ಆಯ್ಕೆ ಮಾಡಿಕೊಂಡರೆ ಆಯಿತು.

e - ಸುದ್ದಿ

ಅನಾಮಧೇಯ ಬ್ಲಾಗಿಗಳೇ, ಎಚ್ಚರಿಕೆ!

ಇತ್ತೀಚೆಗೆ ಅನಾಮಧೇಯ ಬ್ಲಾಗರುಗಳ ಸಂಖ್ಯೆ ಹೆಚ್ಚಾಗುತ್ತಿದೆ. ತಮಗೆ ಆಗದವರ ಬಗ್ಗೆ ಹೀನಾಯವಾಗಿ ಬರೆಯಲು ಜನರು ಈಗ ಬ್ಲಾಗಿಂಗ್‌ನ ಮರೆ ಹೋಗುತ್ತಿದ್ದಾರೆ. ಹಾಗಂತ ಹೇಳಿ ಎಲ್ಲ ಅನಾಮಧೇಯ ಬ್ಲಾಗ್‌ಗಳೂ ಬೈಗುಳವೇ ಎಂದು ತೀರ್ಮಾನಿಸಬೇಕಾಗಿಲ್ಲ. ಸಮಾಜೋಪಯೋಗಿ ಅನಾಮಧೇಯ ಬ್ಲಾಗ್‌ಗಳೂ ಇವೆ. ಇರಲಿ. ಅಮೇರಿಕದಲ್ಲಿ ಖ್ಯಾತ ಮಾಡೆಲ್ ಒಬ್ಬಳ ಬಗ್ಗೆ ಕೆಟ್ಟಕೆಟ್ಟದಾಗಿ ಬರೆಯಲೆಂದೇ ಒಬ್ಬಾತ ಒಂದು ಅನಾಮಧೇಯ ಬ್ಲಾಗ್ ಒಂದನ್ನು ಪ್ರಾರಂಬಿಸಿದ್ದ. ಅದರಲ್ಲಿ ಆಕೆಯ ಚಾರಿತ್ರ್ಯವಧೆ ಮಾಡುತ್ತಲೇ ಇದ್ದ. ಆಕೆ ನ್ಯಾಯಾಲಯದ ಮೊರೆಹೋದಳು. ಬ್ಲಾಗ್ ಹೋಸ್ಟ್ ಆಗಿರುವ ಗೂಗ್ಲ್ ಕಂಪೆನಿ ಆ ಬ್ಲಾಗ್ ನಡೆಸುತ್ತಿರುವವನ ಇಮೈಲ್ ಮತ್ತು ಇತರೆ ವಿವರಗಳನ್ನು ನ್ಯಾಯಾಲಯದ ಆದೇಶದಂತೆ ನೀಡಿದೆ. ಆಕೆ ಆತನ ಮೇಲೆ ದಾವೆ ಹೂಡಿದ್ದಾಳೆ. ಮುಂದೆ ಏನು ನಡೆಯುತ್ತದೆಯೋ ಕಾದು ನೋಡಬೇಕು. ಅನಾಮಧೇಯ ಬ್ಲಾಗ್ ಮೂಲಕ ಅಂತರಜಾಲ ಪುಂಡಾಟಿಕೆ ನಡೆಸುವವರು ತಾವು ಸಿಕ್ಕಿ ಬೀಳುವುದಿಲ್ಲ ಎಂಬ ಭಾವನೆಯಿಂದ ಹೊರಬರುವುದು ಒಳಿತು.

e- ಪದ

ಅಂತರಜಾಲ ಪುಂಡಾಟಿಕೆ (cyberbullying) - ಅಂತರಜಾಲ ಮೂಲಕ ಬಿಡದೆ ಬೆಂಬತ್ತಿ ಯಾರನ್ನಾದರೂ ಪೀಡಿಸುವುದು. ಇದರಲ್ಲಿ ಹಲವು ವಿಧಾನಗಳಿವೆ. ಬ್ಲಾಗ್ ಮೂಲಕ, ದ್ವೇಷದ ಇಮೈಲ್ ಕಳಿಸುವುದು, ಚರ್ಚಾವೇದಿಕೆಗಳಲ್ಲಿ ಸೇಡಿನ ಮಾತುಗಳನ್ನು ಬರೆಯುವುದು, ಆರ್ಕುಟ್ ಮಾದರಿಯ ಜಾಲತಾಣಗಳಲ್ಲಿ ದ್ವೇಷದ ಮಾತುಗಳನ್ನು ಬರೆಯುವುದು -ಹೀಗೆ ಹಲವಾರು ರೀತಿಯಲ್ಲಿ ಬೆಂಬಿಡದೆ ಪೀಡಿಸುವುದು. ಈ ರೀತಿ ಮಾಡುವುದು ಅಂತರಜಾಲದ ಮೂಲಕ ಬಹಳ ಸರಳ ಹಾಗೂ ಸುಲಭ. ಯಾಕೆಂದರೆ ಯಾರು ಬೇಕಾದರೂ ಅನಾಮಧೇಯವಾಗಿ ಇಮೈಲ್ ವಿಳಾಸ, ಬ್ಲಾಗ್ ವಿಳಾಸ ಹಾಗೂ ಇತರೆ ಗುರುತುಗಳನ್ನು ಆರಾಮವಾಗಿ ಪಡೆಯಬಹುದು. ಹೀಗೆ ಪಡೆದ ಗುರುತನ್ನು ಬಳಸಿ ತಮಗಾಗದವರನ್ನು ಅಂತರಜಾಲದ ಮೂಲಕ ಪೀಡಿಸುವುದು ಬಹು ಸುಲಭ. ಆದರೆ ಸೈಬರ್ ಕಾನೂನು ಪ್ರಕಾರ ಹೀಗೆ ಮಾಡುವುದು ಶಿಕ್ಷಾರ್ಹ ಅಪರಾಧ.

e - ಸಲಹೆ

ಒಂದು ಗಣಕದಲ್ಲಿ ಒಂದಕ್ಕಿಂತ ಹೆಚ್ಚು ಕಾರ್ಯಾಚರಣೆಯ ವ್ಯವಸ್ಥೆಗಳನ್ನು (ಆಪರೇಟಿಂಗ್ ಸಿಸ್ಟಮ್) ಹಾಕಬೇಕೆ? ಹಾಗಿದ್ದರೆ ಪ್ರತಿಯೊಂದಕ್ಕೂ ತನ್ನದೇ ಆದ ಹಾರ್ಡ್‌ಡಿಸ್ಕ್ ವಿಭಾಗ (ಪಾರ್ಟಿಶನ್) ಅಗತ್ಯ. ಹಳೆಯ ಆವೃತ್ತಿಯ ಕಾರ್ಯಾಚರಣೆಯ ವ್ಯವಸ್ಥೆಯನ್ನು ಮೊದಲು ಇನ್‌ಸ್ಟಾಲ್ ಮಾಡಿ ನಂತರದ ಆವೃತ್ತಿ ಅಂದರೆ ಹೊಸತನ್ನು ಇನ್ನೊಂದು ಪಾರ್ಟಿಶನ್‌ನಲ್ಲಿ ಇನ್‌ಸ್ಟಾಲ್ ಮಾಡತಕ್ಕದ್ದು. ಉದಾಹರಣೆಗೆ ವಿಂಡೋಸ್ ಎಕ್ಸ್‌ಪಿ ಮೊದಲು, ಆನಂತರ ವಿಸ್ಟ. ಲಿನಕ್ಸ್ ಕೂಡ ಬೇಕಿದ್ದಲ್ಲಿ ಅದನ್ನು ಕೊನೆಯದಾಗಿ ಇನ್‌ಸ್ಟಾಲ್ ಮಾಡತಕ್ಕದ್ದು.

ಕಂಪ್ಯೂತರ್ಲೆ

ಗ್ರಾಹಕ: “ಹಲೋ, ನಾನು ನಿಮ್ಮ ಬ್ಯಾಂಕಿನ ಆನ್‌ಲೈನ್ ಹಣಕಾಸು ವ್ಯವಹಾರ ಪ್ರಾರಂಭಿಸಬೇಕೆಂದುಕೊಂಡಿದ್ದೇನೆ. ಅದಕ್ಕೆ ಏನೇನು ಬೇಕು?”
ಬ್ಯಾಂಕಿನ ಸಿಬ್ಬಂದಿ: “ಖಂಡಿತ. ಬಹಳ ಸುಲಭ. ನಿಮ್ಮಲ್ಲಿ ಕಂಪ್ಯೂಟರ್, ಮೋಡೆಮ್ ಮತ್ತು ಇಂಟರ್‌ನೆಟ್ ಸಂಪರ್ಕ ಇದ್ದರೆ ಸಾಕು”
ಗ್ರಾಹಕ: “ಹೌದಾ! ಹಣ ಎಲ್ಲಿಂದ ಹೊರಗೆ ಬರುತ್ತದೆ?”
ಸಿಬ್ಬಂದಿ: “ನನಗೆ ಅರ್ಥವಾಗಲಿಲ್ಲ”
ಗ್ರಾಹಕ: “ಅಂದರೆ, ನಾನು ಕೇಳಿದ್ದು, ಕಂಪ್ಯೂಟರಿನಲ್ಲಿ ಒಂದು ಕಿಂಡಿಯ ರೀತಿ ಇದೆಯಲ್ಲವಾ, ಅದರಿಂದ ಹಣ ಹೊರಗೆ ಬರುತ್ತದೋ ಎಂದು”
ಸಿಬ್ಬಂದಿ ಮೂರ್ಛೆ ಹೋದ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ