ಸೋಮವಾರ, ನವೆಂಬರ್ 16, 2009

ಗಣಕಿಂಡಿ - ೦೨೬ (ನವಂಬರ್ ೧೬, ೨೦೦೯)

ಅಂತರಜಾಲಾಡಿ
ಕನ್ನಡದ ಬ್ಲಾಗಿಗಳೆಲ್ಲಾ ಒಂದಾಗಿ ಬನ್ನಿ
ಕನ್ನಡದ ಬ್ಲಾಗೋತ್ತಮರ ಸಂಖ್ಯೆ ೨೦೦೦ವನ್ನು ತಲುಪುತ್ತಿದೆ. ಈ ಮಾಹಿತಿ ನಿಮಗೆ ಆಶ್ಚರ್ಯ ತರಬಹುದು. ಕನ್ನಡದಲ್ಲಿ ವಿಶ್ವಮಟ್ಟದ ಬ್ಲಾಗ್ ಬರೆಯುವವರಿದ್ದಾರೆ. ಪತ್ರಿಕೆ, ಮ್ಯಾಗಝಿನ್‌ಗಳಲ್ಲಿ ಪ್ರಕಟಗೊಳ್ಳದ ಹಲವು ವಿಷಯಗಳು ಬ್ಲಾಗ್‌ಗಳಲ್ಲಿ ಪ್ರಕಟಗೊಂಡಿವೆ. ಈ ಬ್ಲಾಗಿಗಳ ಲೋಕ ಬೇರೆಯೇ ಇದೆ. ಈ ಬ್ಲಾಗಿಗಳು ಎಲ್ಲ ಒಂದೆಡೆ ಕಲೆತು ವಿಚಾರವಿನಿಮಯ ಮಾಡಲು ಒಕ್ಕೂಟವನ್ನು ಮಾಡಿಕೊಂಡಿದ್ದಾರೆ. ಆರ್ಕುಟ್ ಮಾದರಿಯಲ್ಲಿ ನಮಗೆ ಬೇಕಾದ ಸಮೂಹವನ್ನು ನಾವೆ ಸೃಷ್ಟಿಸಿ ನಡೆಸಲು ಅನುವು ಮಾಡಿಕೊಡುವ ning.com ಜಾಲತಾಣದಲ್ಲಿ ಇದನ್ನು ಸೃಷ್ಟಿ ಮಾಡಲಾಗಿದೆ. ಅದರ ವಿಳಾಸ kannadablogs.ning.com. ಸದ್ಯ ಇದರ ಸದಸ್ಯರ ಸಂಖ್ಯೆ ೨೦೦೦ಕ್ಕೆ ಹತ್ತಿರ ಇದೆ. ಇದೇ ರೀತಿಯ ಮತ್ತೊಂದು ಒಕ್ಕೂಟದ ವಿಳಾಸ kannadabloggers.ning.com. ಈ ರೀತಿಯ ಗುಂಪೊಂದು ಆರ್ಕುಟ್‌ನಲ್ಲು ಇದೆ. ಅದು ಹೆಚ್ಚು ಜನಪ್ರಿಯವಾಗಿಲ್ಲ.

ಡೌನ್‌ಲೋಡ್
ಕನ್ನಡ ನಿಘಂಟು
ಕನ್ನಡದಲ್ಲಿ ಲೇಖನ ಬರೆಯುವಾಗ ನಿಘಂಟು ಪಕ್ಕ ಇದ್ದರೆ ಒಳ್ಳೆಯದಲ್ಲವೇ? ಅಂತರಜಾಲದಲ್ಲಿ ಒಂದು ಕನ್ನಡ ನಿಘಂಟು ಇದೆ. ಇದರ ವಿಳಾಸ www.kannadakasturi.com. ಇದನ್ನು ಅಂತರಜಾಲ ಸಂಪರ್ಕ ಇದ್ದಾಗ ಮಾತ್ರ ಬಳಸಬಹುದು. ನಿಮ್ಮ ಗಣಕದಲ್ಲೇ ಒಂದು ನಿಘಂಟು ಇದ್ದರೆ ಒಳ್ಳೆಯದಲ್ಲವೇ? ಹೌದು. ಅದೂ ಇದೇ ಜಾಲತಾಣದಲ್ಲಿ ಲಭ್ಯವಿದೆ. ಅದನ್ನು ಡೌನ್‌ಲೋಡ್ ಮಾಡಿಕೊಳ್ಳಲು http://bit.ly/3vJH1L ಜಾಲತಾಣಕ್ಕೆ ಭೇಟಿ ನೀಡಿ. ಜಾಲತಾಣದಲ್ಲಿ ಒಟ್ಟು ಸುಮಾರು ೧೩೫೦೦೦ ಪದಗಳಿವೆ. ಆದರೆ ಡೌನ್‌ಲೋಡ್ ಮಾಡಬಲ್ಲ ನಿಘಂಟುವಿನಲ್ಲಿ ಸುಮಾರು ೫೦೦೦೦ ಪದಗಳು ಮಾತ್ರವಿವೆ. ಆದರೆ ಇವೆರಡೂ ಇನ್ನೂ ಯುನಿಕೋಡ್‌ನಲ್ಲಿ ಲಭ್ಯವಿಲ್ಲ.

e - ಸುದ್ದಿ
ಕೊಲೆಗಾರನ ಹೆಸರ ಹೇಳುವಂತಿಲ್ಲ
ಜರ್ಮನಿಯಲ್ಲಿ ೧೯೯೦ರಲ್ಲಿ ಒಬ್ಬ ನಟನ ಕೊಲೆ ಮಾಡಿ ೧೯ ವರ್ಷ ಜೈಲುವಾಸ ಅನುಭವಿಸಿ ಹೊರಬಂದ ವ್ಯಕ್ತಿ ಈಗ ಸುದ್ದಿಯಲ್ಲಿದ್ದಾನೆ. ಕೊಲೆ ಮಾಡಲ್ಪಟ್ಟ ನಟನ ಬಗ್ಗೆ ಮುಕ್ತ ವಿಶ್ವಕೋಶ ವಿಕಿಪೀಡಿಯಾದಲ್ಲಿ ಇರುವ ಮಾಹಿತಿಯಲ್ಲಿ ಕೊನೆಗೆ ಕೊಲೆಗಾರನ ಹೆಸರೂ ಇದೆ.  ಈತನಿಗೆ ಅದನ್ನು ಅಲ್ಲಿಂದ ತೆಗೆಸಬೇಕಾಗಿದೆ. ಇದಕ್ಕಾಗಿ ಆತ ಮೊರೆಹೋಗಿದ್ದು ಜರ್ಮನಿಯ ಕಾನೂನನ್ನು. ಶಿಕ್ಷೆ ಮುಗಿದು ಹೊರಬಂದ ಅಪರಾಧಿಗಳಿಗೆ ನಂತರ ಅವರು ಎಲ್ಲರಂತೆ ಜೀವನ ಮಾಡಲು ಅವಕಾಶ ಮಾಡಿಕೊಡಲು ಅವರು ಅಪರಾಧ ಮಾಡಿ ಶಿಕ್ಷೆ ಅನುಭವಿಸಿದ್ದರ ಬಗ್ಗೆ ಪ್ರಚಾರ ಮಾಡುವಂತಿಲ್ಲ ಎಂದು ಜರ್ಮನಿಯಲ್ಲಿ ಕಾನೂನಿದೆ. ಈ ಕಾನೂನಿಂತೆ ಅಪರಾಧಿಯ ಹೆಸರನ್ನು ವಿಕಿಪೀಡಿಯಾದಿಂದ ತೆಗೆದು ಹಾಕಬೇಕು ಮತ್ತು ತನಗೆ ಪರಿಹಾರ ನೀಡಬೇಕು ಎಂದು ಆತ ಕೋರ್ಟಿನಲ್ಲಿ ವ್ಯಾಜ್ಯ ಹೂಡಿದ್ದಾನೆ. ಇನ್ನೂ ಅಪರಾಧಿ ಎಂದು ತೀರ್ಮಾನ ಆಗುವ ಮೊದಲೇ, ಕೆಲವೊಮ್ಮೆ ಸಂಪೂರ್ಣ ನಿರಪರಾಧಿ, ವ್ಯಕ್ತಿಗಳ ಮಾನಹರಣ ಮಾಡಿ ಹೀನಾಯವಾಗಿ ಪ್ರಚಾರ ಮಾಡುವ ನಮ್ಮ ಮಾಧ್ಯಮಗಳು ಜರ್ಮನಿಯಲ್ಲಿದ್ದರೆ ಏನಾಗುತ್ತಿತ್ತೋ? ಈಗಿನ ಸುದ್ದಿಯಂತೆ ಇಂಗ್ಲಿಶ್ ಆವೃತ್ತಿಯಲ್ಲಿ ಕೊಲೆಗಾರನ ಹೆಸರಿದೆ. ಆದರೆ ಜರ್ಮನ್ ಆವೃತ್ತಿಯಿಂದ ಆತನ ಹೆರನ್ನು ತೆಗೆದುಹಾಕಲಾಗಿದೆ.

e- ಪದ

ಸಿಸ್ಟಮ್ ಟ್ರೇ (system tray) - ಗಣಕದ ಪರದೆಯ ಬಲಬದಿಯ ಮೂಲೆಯಲ್ಲಿ ಗಡಿಯಾರ, ಪ್ರಿಂಟರ್, ಮೋಡೆಮ್, ವೈರಸ್‌ನಿರೋಧಕ, ಇತ್ಯಾದಿ ಮೆಮೊರಿಯಲ್ಲಿ ಸಕ್ರಿಯವಾಗಿರುವ ತಂತ್ರಾಂಶಗಳ ಚಿತ್ರಿಕೆಗಳನ್ನು (ಐಕಾನ್) ಇದು ತೋರಿಸುತ್ತಿರುತ್ತದೆ. ಈ ಚಿತ್ರಿಕೆಗಳ ಮೇಲೆ ಎರಡು ಸಲ ಕ್ಲಿಕ್ ಮಾಡುವ ಮೂಲಕ ಈ ತಂತ್ರಾಂಶಗಳ ವಿಂಡೋವನ್ನು ತೆರೆದು ಆಯ್ಕೆಗಳನ್ನು ನಿಗದಿ ಮಾಡಬಹುದು. ಇದನ್ನು ವಿಂಡೋಸ್ ೯೫ರಲ್ಲಿ ಪ್ರಥಮ ಬಾರಿಗೆ ನೀಡಲಾಗಿತ್ತು. ವಿಂಡೋಸ್ ೭ ರಲ್ಲಿ ಇದು ಒಂದು ಚಿಕ್ಕ ತ್ರಿಕೋಣಾಕಾರದಲ್ಲಿದ್ದು ಅದರ ಮೇಲೆ ಕ್ಲಿಕ್ ಮಾಡಿದಾಗ ಇನ್ನೊಂದು ಚಿಕ್ಕ ಕಿಟಿಕಿ ತೆರೆದುಕೊಂಡು ಎಲ್ಲ ಚಿತ್ರಿಕೆಗಳು ಕಂಡುಬರುತ್ತವೆ.

e - ಸಲಹೆ

ಕಿರಿಕಿರಿ ಪದಪರೀಕ್ಷಕ

ಖ್ಯಾತ ವಿಜ್ಞಾನ ಲೇಖಕ ನಾಗೇಶ ಹೆಗಡೆಯವರ ಪ್ರಶ್ನೆ: ಮೈಕ್ರೋಸಾಫ್ಟ್ ವರ್ಡ್‌ನಲ್ಲಿ ನುಡಿ ಅಥವಾ ಬರಹವನ್ನು ಬಳಸಿ ಬೆರಳಚ್ಚು ಮಾಡುವಾಗ ಅದು ತನ್ನ ಸ್ವಯಂಚಾಲಿತ ಪದಪರೀಕ್ಷಕವನ್ನು ಚಾಲೂಗೊಳಿಸಿ ಕನ್ನಡದ ಅಕ್ಷರಗಳನ್ನು ಏನೇನೋ ಆಗಿ ಬದಲಿಸಿ ಉಪದ್ರವ ನೀಡುತ್ತಿರುತ್ತದೆ. ಇದನ್ನು ನಿಲ್ಲಿಸುವುದು ಹೇಗೆ?
ಉ: ಕನ್ನಡದಲ್ಲಿ ಯುನಿಕೋಡ್ ವಿಧಾನವನ್ನು ಬಳಸದೆ ಹಳೆಯ ವಿಧಾನದಲ್ಲಿ ಬೆರಳಚ್ಚು ಮಾಡುವ ಎಲ್ಲರಿಗೆ ಈ ಸಮಸ್ಯೆ ಇದೆ. ಮೂಲಭೂತವಾಗಿ ಇಲ್ಲಿ ಏನು ಆಗುತ್ತಿದೆಯೆಂದರೆ ವರ್ಡ್ ತಂತ್ರಾಂಶವು ನಿಮಗೆ ಉಪಕಾರ ಮಾಡಲು ಹೋಗಿ ಅದು ನಿಮಗೆ ಉಪದ್ರ ಆಗುತ್ತಿದೆ. ನುಡಿ, ಬರಹ, ಇತ್ಯಾದಿ ತಂತ್ರಾಂಶಗಳು ಬಳಸುವ ಫಾಂಟ್ ಇಂಗ್ಲಿಶ್‌ನ ಅಕ್ಷರಭಾಗಗಳ ಜಾಗದಲ್ಲಿ ಕನ್ನಡದ ಅಕ್ಷರ ಭಾಗಗಳನ್ನು ಕೂರಿಸಿದಂತವುಗಳು. ವರ್ಡ್ ತನ್ನ ಸ್ವಯಂಚಾಲಿತ ಪದಪರೀಕ್ಷಕವನ್ನು ಬಳಸಿದಾಗ ಅದಕ್ಕೆ ಈ ಪದಗಳು ಅರ್ಥವಾಗದೆ, ಏನೇನೋ ಆಗಿ ಬದಲಿಸಿ ಅದು ಕನ್ನಡದ ಫಾಂಟ್‌ನಲ್ಲಿ ನೋಡಿದಾಗ ಅರ್ಥವಿಲ್ಲದ ಪದಗಳಾಗಿರುತ್ತವೆ. ಇದಕ್ಕೆ ವರ್ಡ್‌ನಲ್ಲಿರುವ auto format ಸವಲತ್ತನ್ನು ನಿಷ್ಕ್ರಿಯಗೊಳಿಸುವುದೊಂದೇ ಪರಿಹಾರ. ಇದಕ್ಕಾಗಿ ಪದಪರೀಕ್ಷಕವು ತಾನೇ ಬದಲಸಿದ ಪದದ ಪಕ್ಕ ಮೂಡಿಬಂದಿರುವ ಚಿತ್ರಿಕೆಯಲ್ಲಿರುವ ಕೆಳತ್ರಿಕೋಣದ ಮೇಲೆ ಕ್ಲಿಕ್ ಮಾಡಿ auto correct options ಎಂಬದನ್ನು ಆಯ್ಕೆ ಮಾಡಿ ಅಲ್ಲಿರುವ ಎಲ್ಲ ಆಯ್ಕೆಗಳನ್ನು ಕಿತ್ತುಹಾಕಿ. ಎಲ್ಲರೂ ಕನ್ನಡ ಬೆರಳಚ್ಚು ಮಾಡಲು ಯುನಿಕೋಡ್ ಬಳಸಿದಾಗ ಈ ಸಮಸ್ಯೆ ಮಾಯವಾಗುತ್ತದೆ.

ಕಂಪ್ಯೂತರ್ಲೆ

ಬ್ಲಾಗ್‌ಸುಂಕ

ಗಣಿದೊರೆಗಳ ಒತ್ತಡಕ್ಕೆ ಮಣಿದು ಅದಿರು ಸಾಗಣೆ ಲಾರಿಗಳ ಮೇಲೆ ವಿಧಿಸಿದ ಸುಂಕವನ್ನು ರದ್ದು ಮಾಡಿದ ಯಡ್ಯೂರಪ್ಪನವರು ನೆರೆಸಂತ್ರಸ್ತರಿಗೆ ಪರಿಹಾರಕ್ಕೆ ಹಣ ಸಂಗ್ರಹಿಸಲು ಹೊಸ ವಿಧಾನವೊಂದನ್ನು ಅನ್ವೇಷಿಸಿದ್ದಾರೆ. ಅದೆಂದರೆ ಬ್ಲಾಗಿಂಗ್‌ಗೆ ಸುಂಕ ವಿಧಿಸುವುದು. ಇತ್ತೀಚೆಗೆ ಬ್ಲಾಗಿಂಗ್, ಅದರಲ್ಲೂ ಟ್ವಿಟ್ಟರ್ ತುಂಬ ಜನಪ್ರಿಯವಾಗುತ್ತಿದೆ. ಒಂದು ಬ್ಲಾಗ್‌ಗೆ ಇಂತಿಷ್ಟು ಎಂದು ಬ್ಲಾಗ್‌ಸುಂಕ ವಿಧಿಸಲಾಗುವುದು ಎಂದು ನಿಧಾನಸೌಧದಿಂದ ಹೊರಟ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಪೂರ್ತಿಪ್ರಮಾಣದ ಬ್ಲಾಗಿಗೆ ಹೆಚ್ಚು ಮತ್ತು ಕಿರುಬ್ಲಾಗ್ ಟ್ವಿಟ್ಟರಿಗೆ ಕಡಿಮೆ ಸುಂಕ ನಿಗದಿ ಮಾಡಲಾಗಿದೆ. ತೆರಿಗೆಯ ಮೆಲೆ ಸರ್‌ಚಾರ್ಜ್ ವಿಧಿಸುವ ಪರಿಪಾಠದಂತೆ ಬ್ಲಾಗಿಗೆ ಸುಂಕ ವಿಧಿಸಲಾಗಿದ್ದರೆ ಬ್ಲಾಗಿನ ಕೆಳಗೆ ಓದುಗರು ಬರೆಯುವ ಕಮೆಂಟು(ಟಿಪ್ಪಣಿ)ಗಳಿಗೆ ಸರ್‌ಚಾರ್ಜ್ ವಿಧಿಸಲಾಗಿದೆ. ಟ್ವಿಟ್ಟರಿನಲ್ಲಿ ೪ ಲಕ್ಷ ಹಿಂಬಾಲಕರನ್ನು ಹೊಂದಿರುವ ಶಶಿತರೂರ್ ಇದನ್ನು ಪ್ರತಿಭಟಿಸಿದ ಸುದ್ದಿ ಇನ್ನೂ ಬಂದಿಲ್ಲ.

1 ಕಾಮೆಂಟ್‌: