ಸೋಮವಾರ, ನವೆಂಬರ್ 23, 2009

ಗಣಕಿಂಡಿ - ೦೨೭ (ನವಂಬರ್ ೨೩, ೨೦೦೯)

ಅಂತರಜಾಲಾಡಿ

ಕನ್ನಡ ರೇಡಿಯೋ ಕೇಳಿ

ಅಂತರಜಾಲದಲ್ಲಿ ಸಾವಿರಾರು ರೇಡಿಯೋ ಕೇಂದ್ರಗಳಿವೆ. ಆಕಾಶವಾಣಿ ಕೂಡ ಇದೆ. ಆದರೆ ಈಗ ಪ್ರಸಾರ ಮಾಡುತ್ತಿಲ್ಲ. ಅದೇನೋ ಸರಿ. ಕನ್ನಡ ರೇಡಿಯೋ ಇಲ್ಲವೇ ಎಂದು ಕೇಳುತ್ತೀರಾ? ಹೌದು. ಇದೆ. ಅದನ್ನು ಆಲಿಸಲು ನೀವು ಭೇಟಿ ಮಾಡಬೇಕಾದ ಜಾಲತಾಣದ ವಿಳಾಸ http://bit.ly/4BxX1v. ರೇಡಿಯೋ ಕೇಂದ್ರ ಎಂದರೆ ನೇರಪ್ರಸಾರ. ಅರ್ಥಾತ್ ನೀವು ಭೇಟಿ ನೀಡಿದಾಗ ಯಾವ ಸಂಗೀತ ಪ್ರಸಾರ ಆಗುತ್ತಿದೆಯೋ ಅದನ್ನು ಆಲಿಸಬೇಕು. ನಿಮಗೆ ಇಷ್ಟವಾದ ಹಾಡನ್ನು ಬೇಕಾದಾಗ ಆಲಿಸಬೇಕಾದರೆ www.kannadaaudio.com ಜಾಲತಾಣಕ್ಕೆ ಭೇಟಿ ನೀಡಿ. ಆದರೆ ನಿಮಗೆ ಇಷ್ಟವಾದ ಹಾಡು ಅಲ್ಲಿರಬೇಕು, ಅಷ್ಟೆ. www.raaga.com ಜಾಲತಾಣದಲ್ಲೂ ಕನ್ನಡ ಹಾಡುಗಳಿವೆ.

ಡೌನ್‌ಲೋಡ್

ಉಚಿತ ಕನ್ನಡ ತಂತ್ರಾಂಶಗಳು

ಕೇಂದ್ರ ಸರಕಾರದ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಇಲಾಖೆಯವರು ಎಲ್ಲ ಭಾರತೀಯ ಭಾಷೆಗಳಿಗೆ ಅವಶ್ಯ ತಂತ್ರಜ್ಞಾನಗಳ ತಯಾರಿಕೆಗಾಗಿ ಒಂದು ಇಲಾಖೆಯನ್ನು ನಿರ್ಮಿಸಿದ್ದಾರೆ. ಅವರು ತಯಾರಿಸಿದ ಮತ್ತು ಇತರೆ ಹಲವಾರು ಸಂಘ ಸಂಸ್ಥೆಗಳು ತಯಾರಿಸಿದ ಹಲವಾರು ಉಪಯುಕ್ತ ತಂತ್ರಾಂಶಗಳು, ಫಾಂಟ್‌ಗಳು, ಪರಿವರ್ತಕ ತಂತ್ರಾಂಶಗಳು, ಕನ್ನಡ ಕಲಿಯಲು ಉಪಯುಕ್ತ ತಂತ್ರಾಂಶ ಮತ್ತು ಆಟಗಳನ್ನು ಡೌನ್‌ಲೋಡ್ ಮಾಡಿಕೊಳ್ಳಲು ಭೇಟಿ ನೀಡಬೇಕಾದ ಜಾಲತಾಣದ ವಿಳಾಸ http://bit.ly/7NEZrF

e - ಸುದ್ದಿ

ಜಾಲಿಗನಾಗಿರುವುದು ಒಳಿತು

ಒಬ್ಬರಿಗೊಬ್ಬರು ಸದಾ ಸಂಪರ್ಕದಲ್ಲಿರಲು ಅನುವು ಮಾಡಿಕೊಡುವ ಜಾಲತಾಣಗಳಿಗೆ ಸೋಶಿಯಲ್ ನೆಟ್‌ವರ್ಕಿಂಗ್ ಜಾಲತಾಣಗಳೆನ್ನುತ್ತಾರೆ. ಆರ್ಕುಟ್ ಮತ್ತು ಫೇಸ್‌ಬುಕ್ ಇದಕ್ಕೆ ಉತ್ತಮ ಉದಾಹರಣೆಗಳು. ಈ ಜಾಲತಾಣಗಳಲ್ಲಿ ತಮ್ಮ ಸದ್ಯದ ಜಾಗ, ತಾವು ಏನು ಮಾಡುತ್ತಿದ್ದೇವೆ, ಇತ್ಯಾದಿಗಳನ್ನು ಸೇರಿಸುತ್ತಲೇ ಇರಬಹುದು. ಕೆಲವರು ತಾವು ಎಲ್ಲಿಗೆ ಹೊರಟಿದ್ದೇವೆ, ಎಲ್ಲಿ ಊಟ ಮಾಡುತ್ತಿದ್ದೇವೆ, ಯಾವ ಚಲನಚಿತ್ರ ನೋಡುತ್ತಿದ್ದೇವೆ, ಹೀಗೆ ತಮ್ಮ ಬಗ್ಗೆ ಪ್ರತಿಯೊಂದು ವಿವರ ದಾಖಲಿಸುತ್ತಾರೆ. ಹಿಗೆ ಜಗಜ್ಜಾಹೀರು ಮಾಡುವುದರಿಂದ ಕಳ್ಳರಿಗೂ ಉಪಯೋಗವಾಗುವ ಸಾಧ್ಯತೆಯಿದೆ ಎಂದು ಪೋಲೀಸರು ಎಚ್ಚರಿಸುತ್ತಾರೆ. ಆದರೆ ಒಬ್ಬಾತ ಹೀಗೆ ತನ್ನ ಪ್ರತಿಯೊಂದು ಚಟುವಟಿಕೆಯನ್ನು ದಾಖಲಿಸಿದುದರಿಂದ ಕಾರಾಗೃಹವಾಸವನ್ನು ತಪ್ಪಿಸಿಕೊಂಡಿದ್ದಾನೆ. ತಾನು ಇರುವ ಸ್ಥಳದಿಂದ ಸುಮಾರು ಇಪ್ಪತ್ತು ಕಿ.ಮೀ. ದೂರದ ಒಂದು ಮನೆಯಲ್ಲಿ ನಡೆದ ದರೋಡೆಯ ಅಪರಾಧಿ ಎಂದು ಆತನನ್ನು ಪೋಲೀಸರು ಬಂಧಿಸಿದ್ದರು. ಆದರೆ ದರೋಡೆ ನಡೆದ ಸಮಯದಿಂದ ಕೇವಲ ಒಂದು ನಿಮಿಷ ಮೊದಲು ಆತ ತನ್ನ ಫೇಸ್‌ಬುಕ್ ಪುಟದಲ್ಲಿ ಸಂದೇಶ ಸೇರಿಸಿದ್ದ. ಅದರ ಸಹಾಯದಿಂದ ತಾನು ದರೋಡೆ ನಡೆದ ಸ್ಥಳದಲ್ಲಿ ಆ ಸಮಯದಲ್ಲಿ ತಾನು ಇರಲು ಸಾಧ್ಯವಿಲ್ಲ ಎಂದು ಆತ ಸಾಧಿಸಿದ. ಪೋಲೀಸರು ಆತನನ್ನು ಬಿಡುಗಡೆ ಮಾಡಿದರು.

e- ಪದ

ಅನ್‌ಫ್ರೆಂಡ್ (unfriend) -ಸೋಶಿಯಲ್ ನೆಟ್‌ವರ್ಕಿಂಗ್ ಜಾಲತಾಣಗಳಲ್ಲಿ ಒಬ್ಬ ವ್ಯಕ್ತಿ ತನ್ನ ಸ್ನೇಹಿತ ಆಗಿದ್ದವನನ್ನು ಸ್ನೇಹಿತ ಅಲ್ಲ ಎಂದು ದಾಖಲಿಸುವುದು. ಹೀಗೆ ಮಾಡುವುದರಿಂದ ಆತ ನಿಮ್ಮ ಸಂಪರ್ಕಪಟ್ಟಿಯಿಂದ ಹೊರಗಾಗುತ್ತಾನೆ. ಆ ನಂತರ ಆತ ನಿಮ್ಮ ಸಂದೇಶ, ಚಿತ್ರ, ಇತ್ಯಾದಿಗಳನ್ನು ನೋಡುವಂತಿಲ್ಲ. ಅಂದರೆ ಆತ ನಿಮ್ಮ ಜಾಲದಿಂದ ಹೊರಗಾಗುತ್ತಾನೆ. ಈ ಪದವನನ್ನು ಬಳಸಿದ್ದು ಫೇಸ್‌ಬುಕ್. ಈ ಪದವನ್ನು ಆಕ್ಸ್‌ಫರ್ಡ್ ಅಮೆರಿಕನ್ ನಿಘಂಟು ೨೦೦೯ನೆಯ ಇಸವಿಯ ಪದ ಎಂದು ಆಯ್ಕೆ ಮಾಡಿದೆ.

e - ಸಲಹೆ

ಬಾಗಲಕೋಟೆಯ ದೀಪಕ್ ಅವರ ಪ್ರಶ್ನೆ: ಬಯೋಸ್‌ಗೆ ಪಾಸ್‌ವರ್ಡ್ ನಿಗದಿ ಮಾಡುವುದು ಹೇಗೆ?
ಉ: ಸಾಮಾನ್ಯವಾಗಿ ಗಣಕ ಪ್ರಾರಂಭ ಆಗುವಾಗ, ಕಾರ್ಯಾಚರಣೆಯ ವ್ಯವಸ್ಥೆ (ಹೆಚ್ಚಿನವರಲ್ಲಿ ಇದು ವಿಂಡೋಸ್ ಆಗಿರುತ್ತದೆ) ಪ್ರಾರಂಭ ಆಗುವ ಮೊದಲು ಬಯೋಸ್ ಸಂದೇಶಗಳು ಬರುತ್ತವೆ. ಆ ಸಮಯದಲ್ಲಿ F10 ಕೀಲಿಯನ್ನು ಒತ್ತುವ ಮೂಲಕ ಬಯೋಸ್‌ನ ಆಯ್ಕೆಗಳನ್ನು ನಿಗದಿ ಮಾಡಬಹುದು. ಅದರಲ್ಲಿ ಕಂಡುಬರುವ ಬೂಟ್ ಮೆನುವಿನಲ್ಲಿ ಅಧಿಕಾರಿ (admin ಅಥವಾ supervisor) ಮತ್ತು ಬಳಕೆದಾರ (user) ಎಂದು ಎರಡು ರೀತಿಯ ಪಾಸ್‌ವರ್ಡ್‌ಗಳನ್ನು ನಿಗದಿ ಮಾಡಬಹುದು.

ಕಂಪ್ಯೂತರ್ಲೆ

ಗೀಕಾಸನ

ಯಾವಾಗಲೂ ತಂತ್ರಜ್ಞಾನಕ್ಕೆ ಅದರಲ್ಲು ಗಣಕಕ್ಕೆ ಅಂಟಿಕೊಂಡಿರುವವರಿಗೆ ಮತ್ತು ಅದರಲ್ಲಿ ಪರಿಣತರಾಗಿರುವವರಿಗೆ ಗೀಕ್ ಎನ್ನುತ್ತಾರೆ. ಇವರು ಒಂದು ಕಡೆ ಒಂದೇ ರಿತಿಯಲ್ಲಿ ಕುಳಿತುಕೊಂಡು ಗಣಕ ಅಥವಾ ಲ್ಯಾಪ್‌ಟಾಪ್ ಬಳಸುತ್ತಿರಬೇಕಾಗಿಲ್ಲ. ಮಲಗಿಕೊಂಡು, ತಲೆಕೆಳಗಾಗಿ ನಿಂತುಕೊಂಡು ಅಂದರೆ ಶೀರ್ಶಾಸನ ಮಾಡಿಕೊಂಡು, ಅರ್ಧ ಮಲಗಿ ಕಾಲುಗಳ ಮಧ್ಯೆ ಲ್ಯಾಪ್‌ಟಾಪ್ ಇಟ್ಟುಕೊಂಡು, ಹೀಗೆ ಹಲವು ರೀತಿಯಲ್ಲಿ ಆಸನ ಮಾಡುತ್ತ ಲ್ಯಾಪ್‌ಟಾಪ್ ಬಳಸಬಹುದು. ಈ ರೀತಿಯ ಆಸನಗಳಿಗೆ ಗೀಕಾಸನ ಎನ್ನುತ್ತಾರೆ. ಗೀಕಾಸನಗಳನ್ನು ಮುದ್ರಿಸಿದ ಟೀ-ಶರ್ಟ್ ಬೇಕಿದ್ದಲ್ಲಿ http://bit.ly/64y3JL ಜಾಲತಾಣಕ್ಕೆ ಭೇಟಿ ನೀಡಿ.

3 ಕಾಮೆಂಟ್‌ಗಳು:

  1. ಸರ್, ನೀವು ಕೊಡುವ URL ಗಳಲ್ಲಿ ನೇರವಾಗಿ ವೆಬ್ ವಿಳಾಸವಿರದೇ ಬರೀ ನಂಬರ್ ಮತ್ತು ಆಲ್ಭಾಬೆಟ್ ಗಳ ಕಾಂಬಿನೇಷನ್ ಇರುತ್ತದಲ್ಲ. ಏಕೆ ಹಾಗೆ?

    ಪ್ರತ್ಯುತ್ತರಅಳಿಸಿ
  2. ಬಹುಪಾಲು URLಗಳು ತುಂಬ ಉದ್ದ ಇರುತ್ತವೆ. ಅದನ್ನು ಹೃಸ್ವ ಮಾಡಲು http://bit.ly ಜಾಲತಾಣದ ಸಹಾಯ ಪಡೆಯುತ್ತೇನೆ. ಅಷ್ಟೆ. ಇದರಿಂದ ಒಂದು ಪರೋಕ್ಷ ಉಪಕಾರವೂ ಆಗುತ್ತದೆ. bit.ly ಜಾಲತಾಣದಲ್ಲಿ ಈ ಹೃಸ್ವ URL ಅನ್ನು ಎಷ್ಟು ಜನ ಕ್ಲಿಕ್ ಮಾಡಿದ್ದಾರೆ ಎಂದು ದಾಖಲಾಗಿರುತ್ತದೆ. ನನ್ನ ಅಂಕಣವನ್ನು ಎಷ್ಟು ಜನ ಓದಿ ಅದರ ಪ್ರಯೋಜನ ಪಡೆಯುತ್ತಿದ್ದಾರೆ ಎಂದೂ ಇದರಿಂದ ತಿಳಿಯಬಹುದು.

    ಪ್ರತ್ಯುತ್ತರಅಳಿಸಿ