ಬುಧವಾರ, ಜನವರಿ 6, 2010

ಗಣಕಿಂಡಿ - ೦೩೩ (ಜನವರಿ ೦೪, ೨೦೧೦)

ಅಂತರಜಾಲಾಡಿ

ಅಂತಾರಾಷ್ಟ್ರೀಯ ಜೀವ ವೈವಿಧ್ಯ ವರ್ಷ
 
೨೦೧೦ನೆಯ ಇಸವಿಯನ್ನು ಅಂತಾರಾಷ್ಟ್ರೀಯ ಜೀವ ವೈವಿಧ್ಯ ವರ್ಷ ಎಂದು ವಿಶ್ವಸಂಸ್ಥೆ ಘೋಷಣೆ ಮಾಡಿದೆ. ಜೀವ ವೈವಿಧ್ಯವೆಂದರೆ ಭೂಮಿಯ ಮೇಲೆ ಇದ್ದ, ಇರುವ ಮತ್ತು ಮುಂದೆಯೂ ಇರಬೇಕಾದ ಎಲ್ಲ ಜಾತಿಯ ಜೀವಿಗಳಲ್ಲಿರುವ ವೈವಿಧ್ಯ. ಪರಿಸರ ನಾಶದ ಜೊತೆಗೆ ಸಾವಿರಾರು ಜೀವಜಾತಿಗಳೂ ನಾಶವಾಗುತ್ತಿವೆ. ಬೆಂಗಳೂರಿನಿಂದ ಗುಬ್ಬಚ್ಚಿಗಳು ನಾಪತ್ತೆಯಾಗಿರುವುದು ಇದಕ್ಕೆ ಒಂದು ಉದಾಹರಣೆ. ಜೀವವೈವಿಧ್ಯ ಕಡಿಮೆಯಾಗದಂತೆ ಎಲ್ಲರೂ ಸೇರಿ ಕೆಲಸ ಮಾಡಬೇಕಾಗಿದೆ. ಹೀಗೆ ಎಲ್ಲರೂ ಒಟ್ಟುಗೂಡಿ ಕೆಲಸ ಮಾಡಲಿಕ್ಕೆಂದೇ ಇರುವ ಜಾಲತಾಣ www.countdown2010.net. ೨೦೧೦ರ ಜೀವವೈವಿಧ್ಯದ ಗುರಿ, ಜೀವವೈವಿಧ್ಯ ಉಳಿಸಬೇಕಾದರೆ ಮಾಡಬೇಕಾದ ಕೆಲಸಗಳು, ಇತ್ಯಾದಿ ಎಲ್ಲ ವಿವರಗಳು ಈ ಜಾಲತಾಣದಲ್ಲಿದೆ.

ಡೌನ್‌ಲೋಡ್
ನೆಕ್ಸುಯಿಝ್ ಆಟ
ಆಟ ಯಾರಿಗೆ ಇಷ್ಟವಿಲ್ಲ? ಗಣಕದಲ್ಲಿ ಆಟ ಆಡುವುದರ ಬಗ್ಗೆ ಪರ ಮತ್ತು ವಿರೋಧ ಅಭಿಪ್ರಾಯಗಳಿವೆ. ಅಭಿಪ್ರಾಯಗಳು ಏನೇ ಇರಲಿ. ನಮಗೆ ಆಟಗಳ ಜಾಲತಾಣಗಳ ವಿಳಾಸ ಕೊಡಿ ಎಂದು ಕೇಳುವವರಿದ್ದಾರೆ. ಬಹುಪಾಲು ಆಟಗಳು ದುಬಾರಿ ಬೆಲೆಬಾಳುವವು. ತುಂಬ ಜನಪ್ರಿಯವಾಗಿರುವ ಉಚಿತ ಮತ್ತು ಮುಕ್ತ ಆಟ ನೆಕ್ಸುಯಿಝ್. ಇದು ದೊರಕುವ ಜಾಲತಾಣದ ವಿಳಾಸ http://bit.ly/6ajDsz. ಹೆಚ್ಚಿನ ಮುಕ್ತ ತಂತ್ರಾಂಶಗಳಂತೆ ಇದು ಕೂಡ ವಿಂಡೋಸ್ ಮಾತ್ರವಲ್ಲ ಮ್ಯಾಕ್ ಮತ್ತು ಲೈನಕ್ಸ್‌ಗೂ ಲಭ್ಯವಿದೆ. ಇದು ಮೂರು ಆಯಾಮಗಳ ಶೂಟಿಂಗ್ ಗೇಮ್. ಹೆಚ್ಚಿನ ಮಾತೇಕೆ? ನೀವೇ ಡೌನ್‌ಲೋಡ್ ಮಾಡಿ ಆಡಿ ನೋಡಿ.

e - ಸುದ್ದಿ
ನಗುವಿಗೂ ಪೇಟೆಂಟ್!  
ಏನಿದುಅಸಂಬದ್ಧ ಅಂದುಕೊಂಡಿರಾ? ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕಸದ ಬುಟ್ಟಿಯಿಂದ ಹಿಡಿದು ಮೌಸ್‌ಅನ್ನು ಮೂರು ಸಲ ಕ್ಲಿಕ್ ಮಾಡುವುದಕ್ಕೂ ಪೇಟೆಂಟ್ ಪಡೆಯಲಾಗಿದೆ. ಕಸದ ಬುಟ್ಟಿ ಎಂದರೆ ಗಣಕ ಪರದೆಯ ಮೇಲೆ ಕಾಣಿಸುವ ಕಸದ ಬುಟ್ಟಿಯ ಚಿತ್ರಿಕೆ (ಐಕಾನ್). ಈ ಪೇಟೆಂಟ್ ಪಡೆದಿದ್ದು ಆಪಲ್ ಕಂಪೆನಿ, ತುಂಬ ಹಿಂದೆ. ಈಗಿನ ಸುದ್ದಿ ಐಬಿಎಂ ಕಂಪೆನಿ ಪಡೆದುಕೊಂಡ ಪೇಟೆಂಟಿನದ್ದು. ಗಣಕ, ಅಂತರಜಾಲ ಮಾತುಕತೆ, ಇಮೈಲ್, ಚಾಟ್, ಟ್ವಿಟ್ಟರ್, ಬ್ಲಾಗ್ -ಇತ್ಯಾದಿಗಳಲ್ಲಿ ಪುದಗುಚ್ಛಗಳನ್ನು ಸೂಚಿಸಲು ಆ ಪದಗಳ ಮೊದಲ ಅಕ್ಷರಗಳನ್ನು ಜೋಡಿಸಿ ಬಳಸಲಾಗುತ್ತದೆ. ಉದಾಹರಣೆಗೆ LOL ಅಂದರೆ laughing out loud. ಈ ರೀತಿ ಕಿರುಪಠ್ಯ ಬಳಸುವ ವಿಧಾನಕ್ಕೆ ಐಬಿಎಂ ಕಂಪೆನಿಗೆ ಪೇಟೆಂಟ್ ನೀಡಲಾಗಿದೆ. ಜನಬಳಕೆಯಲ್ಲಿ ಈಗಾಗಲೇ ಇರುವ ರೀತಿನೀತಿಗಳಿಗೆ ಪೇಟೆಂಟ್ ಪಡೆಯುವುದನ್ನು ಹಿಂದೊಮ್ಮೆ ಇದೇ ಐಬಿಎಂ ಕಂಪೆನಿ ಗೇಲಿ ಮಾಡಿತ್ತು. ಈಗ? ಓದುವುದು ಶಾಸ್ತ್ರ, ಇಕ್ಕುವುದು ಗಾಳ ಅಂತೀರಾ? 

e- ಪದ

ಸಂಕೇತೀಕರಣ (encoding) -ಗಣಕದಲ್ಲಿ ಸಂಗ್ರಸಿಡಲು ಮತ್ತು ಮಾಹಿತಿಯ ವಿನಿಮಯಕ್ಕಾಗಿ ಅಕ್ಷರಗಳನ್ನು ಡಿಜಿಟಲ್ ವಿಧಾನಕ್ಕೆ ಪರಿವರ್ತಿಸುವ ವಿಧಾನ. ಇದರಲ್ಲಿ ಹಲವು ಬಗೆ ಇವೆ. ಉದಾಹರಣೆಗೆ ಆಸ್ಕಿ (ASCII) ಮತ್ತು ಯುನಿಕೋಡ್ (Unicode). ಒಂದು ವಿಧಾನದಲ್ಲಿ ಮಾಹಿತಿಯನ್ನು ಸಂಗ್ರಹಿಸಿಟ್ಟರೆ ಅದು ಎಲ್ಲ ತಂತ್ರಾಂಶಗಳಿಗೆ ಮತ್ತು ಸಂಪರ್ಕವಾಹಿನಿಗಳಿಗೆ ಅರ್ಥವಾಗಬೇಕು. ಅದಕ್ಕೆಂದೇ ಜಾಗತಿಕ ಶಿಷ್ಟತೆಯ ಬಳಕೆಯಾಗುತ್ತಿದೆ. ಆಸ್ಕಿ ಶಿಷ್ಟತೆಯಲ್ಲಿ ಜಗತ್ತಿನ ಎಲ್ಲ ಭಾಷೆಗಳಿಗೆ ಸ್ಥಳಾವಕಾಶ ಮಾಡಲು ಸಾಧ್ಯವಿಲ್ಲ. ಆದುದರಿಂದ ಇತ್ತೀಚೆಗೆ ಜಗತ್ತಿನಾದ್ಯಂತ ಯುನಿಕೋಡ್‌ನ ಬಳಕೆ ಆಗುತ್ತಿದೆ.


e - ಸಲಹೆ

ಜಿ. ಎಚ್. ಶ್ರೀಧರ ಅವರ ಪ್ರಶ್ನೆ: ನಾನು ಸುಮಾರು ಒಂದು ವರ್ಷದ ಹಿಂದೆ ಒಂದು ಸಿ.ಡಿ.ಯಲ್ಲಿ ಕೆಲವು ಫೈಲುಗಳನ್ನು ಬರೆದು ಇಟ್ಟಿದ್ದೆ. ಈಗ ಅದನ್ನು ಓದಲಾಗುತ್ತಿಲ್ಲ. ಅದರ ಗಾತ್ರ ೩೦೦ ಎಂ.ಬಿ. ಎಂದು ತೋರಿಸುತ್ತಿದೆ. ಆದರೆ ಯಾವ ಫೈಲೂ ಕಾಣಿಸುತ್ತಿಲ್ಲ. ನನ್ನ ಫೈಲುಗಳು ಎಲ್ಲಿ ಹೋದವು? ಅವುಗಳನ್ನು ವಾಪಾಸು ಪಡೆಯುವುದು ಹೇಗೆ?
ಉ: ಕೆಲವು ಕಡಿಮೆ ಗುಣಮಟ್ಟದ ಸಿ.ಡಿ.ಗಳಲ್ಲಿ ಮಾಹಿತಿಯನ್ನು ಸಂಗ್ರಹಿಸಿಟ್ಟಾಗ ಕೆಲವೊಮ್ಮೆ ಈ ರೀತಿ ಆಗುತ್ತದೆ. ಇಂತಹ ಸಿ.ಡಿ., ಡಿ.ವಿ.ಡಿ.ಗಳಿಂದ ಮಾಹಿತಿಯನ್ನು ವಾಪಾಸು ಪಡೆಯಲು CD Recovery Toolbox ಎಂಬ ಉಚಿತ ತಂತ್ರಾಂಶ ಲಭ್ಯವಿದೆ. ನೀವು ಇದನ್ನು http://bit.ly/4JUUGn ಜಾಲತಾಣದಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಕಂಪ್ಯೂತರ್ಲೆ

ಗೂಗ್ಲ್‌ನವರು ಏನು ಮಾಡಿದರೂ ಸುದ್ದಿಯಾಗುತ್ತದೆ. ಇತ್ತೀಚೆಗೆ ಗೂಗ್ಲ್ ವೇವ್ ಎಂಬ ಸವಲತ್ತನ್ನು ಅಂತರಜಾಲದಲ್ಲಿ ಬಳಕೆದಾರರಿಗೆ ನೀಡಿದ್ದಾರೆ. ಇದು ಉಚಿತವಾಗಿದ್ದರೂ ಯಾರಾದರೂ ಆಹ್ವಾನಿಸಿದವರಿಗೆ ಮಾತ್ರ ಬಳಕೆಗೆ ಲಭ್ಯ. ಈ ಆಹ್ವಾನಕ್ಕಾಗಿ ಜಾಲನಾಗರಿಕರಲ್ಲಿ ತುಂಬ ಗುದ್ದಾಟಗಳೂ ನಡೆದಿವೆ. ಹೀಗೆ ಆಹ್ವಾನ ಪಡೆದ ನಂತರ ಅದನ್ನು ಬಳಸಲು ಹೆಚ್ಚಿನವರಿಗೆ ಅರ್ಥವಾಗಲಿಲ್ಲ. ಹೀಗೆ ಗೂಗ್ಲ್ ವೇವ್ ಅರ್ಥವಾಗಲಿಲ್ಲ ಎಂಬ ಬೇಸರದಲ್ಲಿ ತಂತ್ರಜ್ಞನೊಬ್ಬ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ವಡೋದರದಿಂದ ಬಂದಿದೆ. ಇದರ ಬಗ್ಗೆ ಹೆಚ್ಚಿನ ವಿವರ ಬೇಕಿದ್ದಲ್ಲಿ http://bit.ly/8T83L2 ಜಾಲತಾಣಕ್ಕೆ ಭೇಟಿ ನೀಡಬಹುದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ