ಬುಧವಾರ, ಜನವರಿ 13, 2010

ಗಣಕಿಂಡಿ - ೦೩೪ (ಜನವರಿ ೧೧, ೨೦೧೦)

ಅಂತರಜಾಲಾಡಿ

ಉಚಿತ ವೀಡಿಯೋ ಪಾಠಗಳು

ಅಂತರಜಾಲದ ಮೂಲಕ ಪಾಠ ಮಾಡುವುದು ಈಗೀಗ ಸರ್ವೇಸಾಮಾನ್ಯವಾಗುತ್ತಿದೆ. ದೂರಶಿಕ್ಷಣದಲ್ಲಂತೂ ಇದಿಲ್ಲದೆ ನಡೆಯುವುದೇ ಇಲ್ಲವೆನ್ನುವಂತಾಗಿದೆ. ಸಾಮಾನ್ಯವಾಗಿ ಇವೆಲ್ಲ ಹಣ ಕೊಟ್ಟು ನೋಡಬೇಕಾದಂತ ಶೈಕ್ಷಣಿಕ ವೀಡಿಯೋ ಪಾಠಗಳಾಗಿರುತ್ತವೆ. ದೂರಶಿಕ್ಷಣದಲ್ಲಾದರೋ ಈ ವೀಡಿಯೋಗಳಿಗೆ ಶುಲ್ಕವನ್ನು ವಾರ್ಷಿಕ ಶುಲ್ಕದಲ್ಲಿ ಸೇರಿಸಿರುತ್ತಾರೆ. ಅಂತರಜಾಲದಲ್ಲಿ ಉಚಿತ ವೀಡಿಯೋ ಪಾಠಗಳೂ ಇವೆ. ಖ್ಯಾತ ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರುಗಳಿಂದ ಉಚಿತ ವೀಡಿಯೋ ಪಾಠಗಳನ್ನು ನೋಡಬೇಕಿದ್ದರೆ ನೀವು ಭೇಟಿ ನೀಡಬೇಕಾದ ಜಾಲತಾಣ academicearth.org. ಖಗೋಳ ವಿಜ್ಞಾನದಿಂದ ಹಿಡಿದು ವೈದ್ಯಕೀಯದ ತನಕ ಹಲವು ವಿಷಯಗಳ ಬಗ್ಗೆ ಪಾಠಗಳ ವೀಡಿಯೋಗಳನ್ನು ಇಲ್ಲಿ ಉಚಿತವಾಗಿ ನೋಡಬಹುದು.

ಡೌನ್‌ಲೋಡ್
ಡ್ರೈವರ್ ಪತ್ತೆಹಚ್ಚಿ
ಕೆಲವೊಮ್ಮೆ ಗಣಕ ಸರಿಯಾಗಿ ಕೆಲಸ ಮಾಡದಿರುವುದಕ್ಕೆ ಅಥವಾ ನಿಧಾನವಾಗಿ ಕೆಲಸ ಮಾಡುವುದಕ್ಕೆ ಸರಿಯಾದ ಡ್ರೈವರ್ ದೊರಕದಿರುವುದೂ ಕಾರಣವಾಗಿರುತ್ತದೆ. ಉದಾಹರಣೆಗೆ ನಿಮ್ಮ ಗಣಕದಲ್ಲಿ ಯಾವುದೋ ಯಂತ್ರಾಂಶ ಸೇರಿಸಲ್ಪಟ್ಟಿದೆಯೆಂದಿಟ್ಟುಕೊಳ್ಳಿ. ಬಹುಮಾಧ್ಯಮದ (ಮಲ್ಟಿಮೀಡಿಯಾ) ಕಾರ್ಡ್, ಗ್ರಾಫಿಕ್ಸ್ ಕಾರ್ಡ್, ವಯರ್‌ಲೆಸ್ ಅಥವಾ ಬ್ಲೂಟೂತ್ ಸಂಪರ್ಕ ಸಾಧನ, ಇತ್ಯಾದಿ ಯಾವುದೋ ಇರಬಹುದು. ಅದನ್ನು ನಡೆಸಲು ಬೇಕಾದ ಡ್ರೈವರ್ ತಂತ್ರಾಂಶ ಗಣಕದಲ್ಲಿ ಇಲ್ಲದಿರಬಹುದು. ಗಣಕದ ಡಿವೈಸ್ ಮ್ಯಾನೇಜರ್ ಎಂಬ ಸವಲತ್ತನ್ನು ಬಳಸಿ ಹುಡುಕಿದರೆ ಈ ಯಂತ್ರಾಂಶದ ಮುಂದೆ ಅದು ಒಂದು ಹಳದಿ ಬಣ್ಣದ ಪ್ರಶ್ನಾರ್ಥಕ ಚಿಹ್ನೆ ಮೂಲಕ ಡ್ರೈವರ್ ಇಲ್ಲ ಎಂಬುದನ್ನು ಸೂಚಿಸುತ್ತದೆ. ಯಾವ ಯಂತ್ರಾಂಶ ಎಂದು ಗೊತ್ತಿದ್ದರೆ ಅದಕ್ಕೆ ಸರಿಯಾದ ಡ್ರೈವರ್ ಹುಡುಕಬಹುದು. ಕೆಲವೊಮ್ಮೆ unknown device ಎಂದು ಸೂಚಿಸಿದಾಗ ಫಜೀತಿಯಾಗುತ್ತದೆ. ಇಂತಹ ಸಂದರ್ಭದಲ್ಲಿ ಈ ಗೊತ್ತಿಲ್ಲದ ಸಾಧನ ಯಾವುದೆಂದು ಪತ್ತೆಹಚ್ಚಲು Unknown Device Identifier ಎನ್ನುವ ಉಚಿತ ತಂತ್ರಾಂಶವನ್ನು http://bit.ly/8v5GIJ ಜಾಲತಾಣದಿಂದ ಡೌನ್‌ಲೋಡ್ ಮಾಡಿಕೊಂಡು ಬಳಸಬಹುದು.

e - ಸುದ್ದಿ
ಆಟ ಆಡಿ ಖದೀಮ ಸಿಕ್ಕಿಬಿದ್ದ 
ಮಾದಕ ವಸ್ತುಗಳ ವ್ಯವಹಾರದಲ್ಲಿ ನಿರತನಾಗಿದ್ದ ಖದೀಮನೊಬ್ಬ ಗಣಕ ಆಟದಿಂದಾಗಿ ಸಿಕ್ಕಿಬಿದ್ದ ಸುದ್ದಿ ಬಂದಿದೆ. ಈತನನ್ನು ಹಿಡಿಯಲು ೨೦೦೭ನೆಯ ಇಸವಿಯಿಂದಲೇ ಪೋಲೀಸರು ಜಾಲ ಹರಡಿದ್ದರು. ಆತ ಇನ್ನೇನು ಸಿಕ್ಕಿಯೇಬಿಟ್ಟ ಅನ್ನುವಷ್ಟರಲ್ಲಿ ಆತ ಅಮೇರಿಕಾದಿಂದ ಕೆನಡ ದೇಶಕ್ಕೆ ತಪ್ಪಿಸಿಕೊಂಡುಬಿಟ್ಟಿದ್ದಾನೆ ಎಂಬ ಮಾಹಿತಿ ಸಿಕ್ಕಿತು. ಆತನ ಬಗ್ಗೆ ಅವರಿಗೆ ಇನ್ನೊಂದು ಮಾಹಿತಿಯೂ ಸಿಕ್ಕಿತು. ಅದೇನೆಂದರೆ ಆತ ವರ್ಲ್ಡ್ ಆಫ್ ವಾರ್‌ಕ್ರಾಫ್ಟ್ ಎಂಬ ಅಂತರಜಾಲ ಆಧಾರಿತ ಸುಪ್ರಸಿದ್ಧ ಆಟದ ವ್ಯಸನಿಯಾಗಿದ್ದ ಎಂಬುದು. ಇದರ ಆಧಾರದಿಂದ ಆತ ಯಾವ ಹೆಸರಿನಲ್ಲಿ ಯಾವಾಗಲೂ ಆಡುತ್ತಾನೆ ಎಂಬ ಸುಳಿವಿನ ಮೂಲಕ ಆ ಆಟ ನಡೆಸುವ ಕಂಪೆನಿಯ ಸಹಯೋಗದಿಂದ ಆತನನ್ನು ಕೊನೆಗೂ ಕೆನಡ ದೇಶದಲ್ಲಿ ಸೆರೆಹಿಡಿಯಲಾಯಿತು.

e- ಪದ

ಡ್ರೈವರ್ (driver) - ಯಂತ್ರಾಂಶ ಅಥವಾ ಸಾಧನಗಳನ್ನು ನಿಯಂತ್ರಿಸುವ ತಂತ್ರಾಂಶ. ಗಣಕದೊಳಗೆ ಅಳವಡಿಸಿರುವ ಅಥವಾ ಹೊರಗಡೆಯಿಂದ ಸಂಪರ್ಕಿಸಲ್ಪಟ್ಟಿರುವ ಯಾವುದೇ ಯಂತ್ರಾಂಶ ಅಥವಾ ಸಾಧನವು ಕೆಲಸ ಮಾಡಬೇಕಾದರೆ ಅದಕ್ಕೆ ಸರಿಯಾದ ಡ್ರೈವರ್ ತಂತ್ರಾಂಶ ಅತೀ ಅಗತ್ಯ. ಉದಾಹರಣೆಗೆ ಮುದ್ರಕ, ಕ್ಯಾಮರಾ, ಬಹುಮಾಧ್ಯಮ ಸಲಕರಣೆ, ಸ್ಕ್ಯಾನರ್, ಇತ್ಯಾದಿಗಳು. ಇವುಗಳನ್ನು ಕೊಂಡುಕೊಳ್ಳುವಾಗ ಅವುಗಳ ಜೊತೆ ಈ ಡ್ರೈವರ್ ತಂತ್ರಾಂಶವನ್ನು ಸಿ.ಡಿ.ಯಲ್ಲಿ ನೀಡಿರುತ್ತಾರೆ. ಅದನ್ನು ಇನ್‌ಸ್ಟಾಲ್ ಮಾಡಿದ ನಂತರ ಆ ಸಿ.ಡಿ.ಯನ್ನು ಜೋಪಾನವಾಗಿ ತೆಗೆದಿಟ್ಟುಕೊಳ್ಳಬೇಕು. ಇನ್ನೊಮ್ಮೆ ಯಾವಾಗಾದರೂ ಆ ಸಲಕರಣೆಯನ್ನು ಮತ್ತೊಮ್ಮೆ ಇನ್‌ಸ್ಟಾಲ್ ಮಾಡಬೇಕಾಗಿ ಬಂದಾಗ ಈ ಡ್ರೈವರ್ ತಂತ್ರಾಂಶ ಬೇಕಾಗುತ್ತದೆ. ಸಾಮಾನ್ಯವಾಗಿ ಸಲಕರಣೆ ತಯಾರಕರು ಹೊಸ ಕಾರ್ಯಾಚರಣೆಯ ವ್ಯವಸ್ಥೆ ಬಿಡುಗಡೆಯಾದಾಗ ಅಥವಾ ಯಾವುದಾದರೂ ದೋಷ ಪತ್ತೆಯಾದಾಗ ಡ್ರೈವರ್ ತಂತ್ರಾಂಶದ ಹೊಸ ಆವೃತ್ತಿಯನ್ನು ತಮ್ಮ ಜಾಲತಾಣದಲ್ಲಿ ನೀಡುತ್ತಾರೆ. ಆಗಾಗ ಡ್ರೈವರ್ ತಂತ್ರಾಂಶವನ್ನು ನವೀಕರಿಸಿಕೊಂಡರೆ ಒಳ್ಳೆಯದು.


e - ಸಲಹೆ

ವೈ. ಎಂ. ಲೋಕೇಶ್ ಅವರ ಪ್ರಶ್ನೆ: ನೀವು ಕನ್ನಡ ಪ್ರಭ ಪತ್ರಿಕೆಯಲ್ಲಿ ಗಣಕಿಂಡಿ ಅಂಕಣದ ಮೂಲಕ ನೀಡುವ ಮಾಹಿತಿಗಳು ನನಗೆ ತುಂಬ ಉಪಯುಕ್ತವಾಗಿವೆ. ಅದರಲ್ಲಿ ನೀವು ನೀಡುವ ಸಲಹೆಗಳು, ಜಾಲತಾಣಗಳ ವಿಳಾಸಗಳು ತುಂಬ ಉಪಯುಕ್ತವಾಗಿವೆ. ನನಗೆ ಎಲ್ಲ ಲೇಖನಗಳನ್ನು ಸಂಗ್ರಹಿಸಿಟ್ಟುಕೊಳ್ಳಬೇಕಾಗಿದೆ. ಹಿಂದಿನ ಸಂಚಿಕೆಯ ಲೇಖನಗಳು ಎಲ್ಲಿ ದೊರಕುತ್ತವೆ?
ಉ: ನೀವು ganakindi.blogspot.com ಜಾಲತಾಣದಲ್ಲಿ ಎಲ್ಲ ಲೇಖನಗಳನ್ನು ಓದಬಹುದು.

ಕಂಪ್ಯೂತರ್ಲೆ

ಹಿಂಬದಿಯಲ್ಲಿ ಟೈಪ್ ಮಾಡುವುದು ಹೇಗೆ?

ಕೆಲವು ಮುದ್ರಕಗಳು ಪುಟದ ಎರಡು ಬದಿಯಲ್ಲೂ ಮುದ್ರಿಸಬಲ್ಲವು. ಬೆಂಗಳೂರಿನ ಖ್ಯಾತ ಮಾಹಿತಿ ತಂತ್ರಜ್ಞಾನ ಕಂಪೆನಿ ತನ್ನ ಎಲ್ಲ ಉದ್ಯೋಗಿಗಳಿಗೆ ಸೂಚನೆ ನೀಡಿತ್ತು. ಅದೇನೆಂದರೆ ಕಾಗದ ಉಳಿಸಲು ಕಾಗದದ ಎರಡು ಬದಿಗಳಲ್ಲೂ ಮುದ್ರಿಸಬೇಕು ಎಂಬುದಾಗಿತ್ತು. ಒಬ್ಬ ಉದ್ಯೋಗಿ ತನ್ನ ಮೇಲಧಿಕಾರಿಗೆ ಬರೆದ ಇಮೈಲ್ ಈ ರೀತಿ ಇತ್ತು: “ನಾನು ನಿಮ್ಮ ಸೂಚನೆಯಂತೆ ಕಾಗದದದ ಹಿಂಬದಿಯಲ್ಲೂ ಮುದ್ರಿಸಲಿಕ್ಕಾಗಿ ಎರಡು ಬದಿಯಲ್ಲೂ ಟೈಪ್ ಮಾಡಲು ಪ್ರಯತ್ನಿಸಿದೆ. ನಾನು ಮೈಕ್ರೋಸಾಫ್ಟ್ ವರ್ಡ್ ತಂತ್ರಾಂಶವನ್ನು ಬಳಸುತ್ತಿದ್ದೇನೆ. ಅದರಲ್ಲಿ ಮೊದಲನೆಯೆ ಪುಟ ಮುಗಿದ ತಕ್ಷಣ ತಾನಾಗಿಯೇ ಎರಡನೆಯದನ್ನು ಪ್ರಾರಂಭಿಸಿತು. ಮೊದಲನೆಯ ಪುಟದ ಹಿಂಬದಿಯಲ್ಲಿ ಟೈಪ್ ಮಾಡುವುದು ಹೇಗೆ ಎಂಬುದನ್ನು ದಯವಿಟ್ಟು ತಿಳಿಸಬೇಕು”.

1 ಕಾಮೆಂಟ್‌: