ಮಂಗಳವಾರ, ಜನವರಿ 26, 2010

ಗಣಕಿಂಡಿ - ೦೩೬ (ಜನವರಿ ೨೫, ೨೦೧೦)

ಅಂತರಜಾಲಾಡಿ

ಮಳೆಕೊಯ್ಲು ತಾಣ

ಕುಡಿಯುವ ನೀರು ಭೂಮಿಯಲ್ಲಿ ಕಡಿಮೆಯಾಗುತ್ತಲೇ ಇದೆ. ಇದಕ್ಕೆ ಜನಸಂಖ್ಯೆ ಮತ್ತು ನೀರಿನ ಬೇಡಿಕೆಯ ಹೆಚ್ಚಳ ಈ ಎರಡು ಪ್ರಮುಖ ಕಾರಣಗಳು. ಬೆಂಗಳೂರಿಗೆ ನೀರನ್ನು ೯೫ ಕಿ.ಮೀ. ದೂರದಿಂದ ಅದೂ ೫೦೦ ಮೀ. ಆಳದಿಂದ ಎತ್ತಿ ತರಲಾಗುತ್ತಿದೆ. ಭೂಮಿಗೆ ಬೀಳುವ ಮಳೆಯ ನೀರನ್ನೇ ಹಿಡಿದಿಟ್ಟುಕೊಂಡರೆ ಸಮಸ್ಯೆ ಒಂದು ಮಟ್ಟಿಗೆ ಪರಿಹಾರವಾಗುತ್ತದೆ. ಬೆಂಗಳೂರಿನಲ್ಲಿ ಇನ್ನು ಮುಂದೆ ಕಟ್ಟುವ ಎಲ್ಲ ಮನೆಗಳಲ್ಲಿ ಮಳೆಕೊಯ್ಲನ್ನು ಸರಕಾರವು ಖಡ್ಡಾಯವಾಗಿಸಿದೆ. ಮಳೆ ನೀರನ್ನು ಹಿಡಿದಿಟ್ಟುಕೊಳ್ಳುವ ವಿಧಾನಗಳು, ನೀರನ್ನು ಶುದ್ಧೀಕರಿಸುವುದು ಹೇಗೆ, ವಿವಿಧ ವಿಧಾನಗಳು -ಇವುಗಳನ್ನೆಲ್ಲ ವಿವರಿಸುವ ಜಾಲತಾಣಗಳು - rainwaterharvesting.org ಮತ್ತು  rainwaterclub.org.

ಡೌನ್‌ಲೋಡ್
ಪರದೆಯನ್ನು ಹಿಡಿದಿಡಿ
ಗಣಕದ ಪರದೆಯಲ್ಲಿ ಕಾಣಿಸುವುದನ್ನೆಲ್ಲ ಅಥವಾ ನಡೆಯತ್ತಿರುವ ಕ್ರಿಯಗಳನ್ನೆಲ್ಲ ಹಿಡಿದಿಟ್ಟು ಒಂದು ಚಲನಚಿತ್ರದ ಮಾದರಿಯಲ್ಲಿ ಸಂಗ್ರಹಿಸಿಟ್ಟುಕೊಳ್ಳುವಂತಿದ್ದರೆ ಎಷ್ಟು ಒಳ್ಳೆಯದಿತ್ತು ಎಂದು ನಿಮಗೆ ಎಂದಾದರೂ ಅನ್ನಿಸಿದೆಯೇ? ಈ ರೀತಿ ಕೆಲಸ ಮಾಡಬಲ್ಲ ತಂತ್ರಾಂಶ ವಿಂಕ್. ಇದನ್ನು ಬಳಸಿ ಪರದೆಯಲ್ಲಿ ನಡೆಯುತ್ತಿರುವ ಕ್ರಿಯೆಗಳಲ್ಲದೆ, ಮೌಸ್‌ನ ಓಡಾಟ, ಕುಟ್ಟಿದ ಕೀಲಿಗಳು, ಜೊತೆಗೆ ನೀವು ಮೈಕ್ ಮುಂದೆ ಮಾತನಾಡಿದ್ದು ಎಲ್ಲವನ್ನು ಚಲನಚಿತ್ರದಂತೆ ಸಂಗ್ರಹಿಸಿಟ್ಟುಕೊಳ್ಳಬಹುದು. ಇದು ಪಾಠಮಾಡುವವರಿಗೆ ತುಂಬ ಉಪಯುಕ್ತ. ಯಾವುದಾದರೊಂದು ತಂತ್ರಾಂಶ ಹೇಗೆ ಕೆಲಸ ಮಾಡುತ್ತದೆ ಎಂಬುದಾಗಿ ವಿವರಿಸುತ್ತಿದ್ದಂತೆ ಈ ತಂತ್ರಾಂಶ ಈ ಎಲ್ಲ ವಿವರಣೆಗಳನ್ನು ಸಂಗ್ರಹಿಸಿ ಕೊನೆಗೆ ಒಂದು ಟ್ಯುಟೋರಿಯಲ್ ವೀಡಿಯೋವನ್ನೆ ಮಾಡಿಕೊಡುತ್ತದೆ. ಈ ಉಚಿತ ತಂತ್ರಾಂಶ ಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣ http://bit.ly/5iCdgY

e - ಸುದ್ದಿ
ಜೋಕ್ ಮಾಡಿದ್ದಕ್ಕೆ ಸೆರೆಮನೆಗೆ
ವಿಮಾನಕ್ಕೆ ಸಮಯಕ್ಕೆ ಸರಿಯಾಗಿ ತಲುಪಲು ಕಷ್ಟವಾದಾಗ ವಿಮಾನದಲ್ಲಿ ಬಾಂಬ್ ಇದೆ ಎಂದು ಹುಸಿ ಫೋನ್ ಮಾಡಿ ಸೆರೆಮನೆಗೆ ಹೋದವರ ಬಗ್ಗೆ ನೀವು ಕೇಳಿರಬಹುದು. ಈಗ ಅದರ ಟ್ವಿಟ್ಟರ್ ಅಧ್ಯಾಯ ಪ್ರಾರಂಭವಾಗಿದೆ. ಇಂಗ್ಲೆಂಡಿನಲ್ಲಿ ಅತಿಯಾದ ಮಂಜುಗಡ್ಡೆ ತುಂಬಿದುದರಿಂದಾಗಿ ವಿಮಾನ ನಿಲ್ದಾಣವನ್ನು ಮುಚ್ಚಿದುದರ ಬಗ್ಗೆ ರೋಸಿ ಹೋದ ಒಬ್ಬಾತ ಟ್ವಿಟ್ಟರ್‌ನಲ್ಲಿ ತನ್ನ ರೋಷವನ್ನು ಹೊರಹಾಕಿದ. ಆತ ಬರೆದಿದ್ದೇನೆಂದರೆ “ನಿಮಗೆ ಇನ್ನು ಒಂದು ವಾರ ಗಡುವು ನೀಡುತ್ತೇನೆ. ಅದರ ಒಳಗೆ ವಿಮಾನ ನಿಲ್ದಾಣವನ್ನು ಪುನಃ ಚಾಲನೆ ಮಾಡದಿದ್ದರೆ ಅದನ್ನು ಬಾಂಬ್ ಇಟ್ಟು ಸ್ಫೋಟಿಸುತ್ತೇನೆ”. ಈ ಜೋಕನ್ನು ಪೋಲೀಸರು ಗಂಭೀರವಾಗಿ ಪರಿಗಣಿಸಿ ಆತನನ್ನು ಭಯೋತ್ಪಾದಕ ವಿರೋಧಿ ಕಾನೂನಿನ ಪ್ರಕಾರ ಬಂಧಿಸಿದರು. ಜಾಮೀನಿನಲ್ಲಿ ಹೊರಬಂದ ಆತ ಇನ್ನೆಂದೂ ಜೋಕ್ ಮಾಡುವುದಿಲ್ಲ ಎಂಬುದಾಗಿ ಪ್ರತಿಜ್ಞೆ ಮಾಡಿದ್ದಾನೆ.    

e- ಪದ

ವಿ-ಕಸ (e-waste = electronic waste, ವಿದ್ಯುನ್ಮಾನ ಕಸ) - ಇಲೆಕ್ಟ್ರಾನಿಕ್ ಉಪಕರಣಗಳನ್ನು ಎಸೆದಾಗ ಉಂಟಾಗುವ ಕಸ. ಗಣಕ, ಮೊಬೈಲ್ ಫೋನ್, ಮುದ್ರಕ, ಟಿವಿ, ಇತ್ಯಾದಿ ಉಪಕರಣಗಳನ್ನು ಎಸೆಯುವುದರಿಂದ ಪರಿಸರದ ಮೇಲೆ ಅತಿ ದೊಡ್ಡ ಹಾನಿ ಆಗುತ್ತದೆ. ಈ ಎಲ್ಲ ಉಪಕರಣಗಳಲ್ಲಿ ಪಾದರಸ, ಸೀಸ, ಆರ್ಸೆನಿಕ್, ಇತ್ಯಾದಿ ವಿಷಕಾರಿ ವಸ್ತುಗಳಿರುತ್ತವೆ. ಈ ಉಪಕರಣಗಳನ್ನು ಎಲ್ಲೆಂದರಲ್ಲಿ ಎಸೆಯುವುದರಿಂದ ಈ ವಿಷಕಾರಿ ವಸ್ತುಗಳು, ಭೂಮಿ ಮತ್ತು ನೀರಿನ ಮೂಲಕ ಕೊನೆಗೆ ನಮ್ಮ ಹೊಟ್ಟೆಗೆ ಸೇರುತ್ತವೆ. ಆದುದರಿಂದ ಈ ವಿ-ಕಸ ಎನ್ನುವುದು ಅತಿದೊಡ್ಡ ಸಮಸ್ಯೆಯಾಗಿದೆ.


e - ಸಲಹೆ

ನಾಗರಾಜ ಅವರ ಪ್ರಶ್ನೆ: ನಾನು ಇತ್ತೀಚೆಗೆ ಮಾರುಕಟ್ಟೆಯಲ್ಲಿ ಜನಪ್ರಿಯವಾಗುತ್ತಿರುವ ನೆಟ್‌ಬುಕ್ ಕಂಪ್ಯೂಟರ್ ಕೊಂಡುಕೊಳ್ಳುವ ಆಲೋಚನೆಯಲ್ಲಿದ್ದೇನೆ. ನಾನು ಡಿಟಿಪಿ ಮಾಡುವವನು. ಈ ನೆಟ್‌ಬುಕ್ ಕಂಪ್ಯೂಟರ್‌ನಲ್ಲಿ ಹಳೆಯ ತಂತ್ರಾಂಶಗಳಾದ ಪೇಜ್‌ಮೇಕರ್, ಫೋಟೋಶಾಪ್, ಕೋರೆಲ್‌ಡ್ರಾ ಇತ್ಯಾದಿಗಳು ಕೆಲಸ ಮಾಡಬಲ್ಲವೇ?
ಉ: ನೆಟ್‌ಬುಕ್ ಕಂಪ್ಯೂಟರ್‌ನ ಮೆಮೊರಿ ಸಾಮಾನ್ಯವಾಗಿ ೧ಜಿಬಿ ಇರುತ್ತದೆ. ಇದು ನೀವು ತಿಳಿಸಿದ ತಂತ್ರಾಂಶಗಳಿಗೆ ಸಾಕು. ಆದರೆ ಒಂದು ಚಿಕ್ಕ ಸಮಸ್ಯೆ ಇದೆ. ಬಹುಪಾಲು ನೆಟ್‌ಬುಕ್ ಕಂಪ್ಯೂಟರ್‌ಗಳು ವಿಂಡೋಸ್ ೭ ಹೋಮ್ ಆವೃತ್ತಿಯನ್ನು ಒಳಗೊಂಡಿರುತ್ತವೆ. ಇದರಲ್ಲಿ ನೀವು ತಿಳಿಸಿದ ಯಾವ ತಂತ್ರಾಂಶವೂ ಇನ್‌ಸ್ಟಾಲ್ ಆಗುವುದಿಲ್ಲ. ವಿಂಡೋಸ್ ಎಕ್ಸ್‌ಪಿಯನ್ನು ಒಳಗೊಂಡಿರುವ ನೆಟ್‌ಬುಕ್ ಕೊಂಡಕೊಂಡರೆ ನಿಮ್ಮ ಹಳೆಯ ತಂತ್ರಾಂಶಗಳನ್ನು ಬಳಸಿ ಡಿಟಿಪಿ ಕೆಲಸಗಳನ್ನು ಮಾಡಬಹುದು.

ಕಂಪ್ಯೂತರ್ಲೆ

ಆಧುನಿಕ ಗಾದೆಗಳು:

  • ಕೆಲಸವಿಲ್ಲದ ಪ್ರೋಗ್ರಾಮ್ಮರ್ ಮೌಸ್ ಸ್ವಚ್ಛ ಮಾಡಿದನಂತೆ.
  • ಊರಿಗೆ ಬಂದ ವೈರಸ್ ನಿಮ್ಮ ಕಂಪ್ಯೂಟರ್‌ಗೂ ಬಾರದಿರುತ್ತದೆಯೇ?
  • ಕೆಲಸವೆಲ್ಲ ಆದ ಮೇಲೆ ಮೌಸ್ ತಂದರೇನು ಫಲ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ