ಬುಧವಾರ, ಜೂನ್ 16, 2010

ಗಣಕಿಂಡಿ - ೦೫೬ (ಜೂನ್ ೧೪, ೨೦೧೦)

ಅಂತರಜಾಲಾಡಿ


ಕಾರ್ಟೂನ್ ಬಿಡಿಸಿ

ಕಾರ್ಟೂನ್ ಇಲ್ಲದ ಪತ್ರಿಕೆಗಳೇ ಇಲ್ಲ ಎನ್ನಬಹುದು. ನಿಮಗೂ ಕಾರ್ಟೂನ್ ರಚಿಸಲು ಆಸಕ್ತಿಯೇ? ಆದರೆ ರಚಿಸಲು ಬೇಕಾದ ಸವಲತ್ತುಗಳಿಲ್ಲವೇ? ಹಾಗಿದ್ದರೆ ನೀವು www.toondoo.com ಜಾಲತಾಣಕ್ಕೆ ಭೇಟಿ ನೀಡಬೇಕು. ಇದು ಮುಖ್ಯವಾಗಿ ಮಕ್ಕಳಿಗೋಸ್ಕರ ಇರುವುದು. ಈ ಜಾಲತಾಣದಲ್ಲಿ ಖಾತೆ ಸೃಷ್ಠಿಸಿ ನಂತರ ಕಾರ್ಟೂನ್ ಬಿಡಿಸಬಹುದು. ಅದಕ್ಕಾಗಿ ಅಗತ್ಯ ಸವಲತ್ತುಗಳು ಈ ಜಾಲತಾಣದಲ್ಲೇ ಇವೆ. ಬೇರೆ ಯಾವ ತಂತ್ರಾಂಶದ ಅಗತ್ಯ ಇಲ್ಲ. ನೀವು ತಯಾರಿಸಿದ ಕಾರ್ಟೂನ್‌ಗಳನ್ನು ಸ್ನೇಹಿತರ ಜೊತೆ ಹಂಚಿಕೊಳ್ಳಬಹುದು. ಅದನ್ನು ಮುಂದುವರಿಸಲು ಅವರಿಗೂ ಅವಕಾಶ ನೀಡಬಹುದು.


ಡೌನ್‌ಲೋಡ್

ಕಾರು ಓಟದ ಸ್ಪರ್ಧೆ

ಗಣಕದಲ್ಲಿ ಕಾರು ಓಡಿಸುವ ಸ್ಪರ್ಧೆಯ ಆಟಗಳು ತುಂಬ ಜನಪ್ರಿಯ. ಅದರೆ ಬಹುಪಾಲು ಅಂತಹ ಆಟಗಳು ದುಬಾರಿ. ಕಾರ್ ರೇಸಿನ ಒಂದು ಉಚಿತ ಆಟ ಬೇಕೇ? ಅದೂ ಲಭ್ಯ. ಅದರ ಹೆಸರು Extreme Velocity. ಇದು ಬೇಕಿದ್ದಲ್ಲಿ ನೀವು ಭೇಟಿ ನಿಡಬೇಕಾದ ಜಾಲತಾಣ www.streetchallenge3d.com. ಈ ಆಟ ಮೂರು ಆಯಾಮಗಳಲ್ಲಿದೆ. ಆದುದರಿಂದ ಆಡುವಾಗ ನಿಜವಾದ ಕಾರು ಓಡಿಸಿದ ಭಾವನೆ ಬರುತ್ತದೆ. ಈ ಆಟ ತಯಾರಿಸಿದವರು ಪ್ರತಿ ವಾರ ಹೊಸ ಹೊಸ ರಸ್ತೆ, ಕಾರುಗಳನ್ನು ನೀಡುತ್ತಾರೆ. ಅವುಗಳನ್ನು ಡೌನ್‌ಲೋಡ್ ಮಾಡಿಕೊಂಡು ಆಟಕ್ಕೆ ಸೇರಿಸಿಕೊಳ್ಳಬಹುದು. ಡೌನ್‌ಲೋಡ್ ಮಾಡಲು ಹೊರಡುವ ಮೊದಲು ಒಂದೆರಡು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಈ ರೀತಿಯ ಎಲ್ಲ ಆಟಗಳಂತೆ ಇದೂ ತುಂಬ ದೊಡ್ಡ ಫೈಲು (೨೨೨ ಮೆಗಾಬೈಟ್). ನಿಮ್ಮ ಗಣಕದಲ್ಲಿ ಮೈಕ್ರೋಸಾಫ್ಟ್ ಡಾಟ್‌ನೆಟ್, ಡೈರೆಕ್ಟ್ ಎಕ್ಸ್ -ಇವೆಲ್ಲ ಇರತಕ್ಕದ್ದು. ಇವೆಲ್ಲ ಉಚಿತವಾಗಿ ಲಭ್ಯವಿರುವ ತಂತ್ರಾಂಶಗಳು. ಆಧುನಿಕ ಗ್ರಾಫಿಕ್ಸ್ ಕಾರ್ಡ್ ಕೂಡ ಇರತಕ್ಕದ್ದು.

e - ಸುದ್ದಿ

ಗೂಗ್ಲ್ ಮೇಲೆ ದಾವೆ

ಅಮೆರಿಕದಲ್ಲಿ ಈಗೀಗ ಎಲ್ಲರೂ ಗೂಗ್ಲ್‌ನ್ನೇ ಅವಲಂಬಿಸತೊಡಗಿದ್ದಾರೆ. ಅಲ್ಲಿ ಯಾರೂ ರಸ್ತೆನಕ್ಷೆ ನೋಡುವುದೇ ಇಲ್ಲ. ಅತ್ಯಾಧುನಿಕ ಫೋನಿನಲ್ಲಿ ಗೂಗ್ಲ್ ಮ್ಯಾಪ್ ನೋಡಿಕೊಂಡು ವಾಹನ ಚಲಾಯಿಸುತ್ತಾರೆ. ಗೂಗ್ಲ್ ಮ್ಯಾಪ್ ನಡೆಯಲು ಕೂಡ ದಾರಿ ತೋರಿಸುತ್ತದೆ. ಹೀಗೆ ಗೂಗ್ಲ್ ಮ್ಯಾಪ್ ನಂಬಿ ಒಬ್ಬಾಕೆ ರಸ್ತೆಯ ಪಕ್ಕದಲ್ಲಿ ನಡೆಯತೊಡಗಿದಳು. ಅದರೆ ಆಕೆ ಒಂದು ವಿಷಯ ಗಮನಿಸಿರಲಿಲ್ಲ. ಅದೇನೆಂದರೆ ಆಕೆ ನಡೆಯುತ್ತಿದ್ದ ರಸ್ತೆ ಕೇವಲ ವಾಹನಗಳಿಗಾಗಿತ್ತು. ಅದರ ಪಕ್ಕದಲ್ಲಿ ಪಾದಚಾರಿ ಮಾರ್ಗ ಇರಲಿಲ್ಲ. ವೇಗವಾಗಿ ಬಂದ ಕಾರೊಂದು ಆಕೆಗೆ ಢಿಕ್ಕಿ ಹೊಡೆಯಿತು. ಈಗ ಆಕೆ ಗೂಗ್ಲ್ ವಿರುದ್ಧ ದಾವೆ ಹೂಡಿದ್ದಾಳೆ.

e- ಪದ

ಫಾಂಟ್ (font) - ಪಠ್ಯ ಮಾಹಿತಿಯನ್ನು ಪರದೆಯ ಮೇಲೆ ತೋರಿಸಲು ಮತ್ತು ಮುದ್ರಿಸಲು ಬಳಸುವ ಅಕ್ಷರಭಾಗಗಳ ಸಂಗ್ರಹ. ಹಿಂದಿನ ಕಾಲದಲ್ಲಿ ಮುದ್ರಣ ಕ್ಷೇತ್ರದಲ್ಲಿ ಅಚ್ಚಿನ ಮೊಳೆಗಳ ಗುಂಪಿಗೆ ಈ ಹೆಸರಿತ್ತು. ಫಾಂಟ್‌ನ್ನು ಬದಲಿಸಿ ಬೇರೆ ಬೇರೆ ಶೈಲಿಯಲ್ಲಿ ಪುಸ್ತಕ, ಆಹ್ವಾನ ಪತ್ರಿಕೆ, ಇತ್ಯಾದಿಗಳನ್ನು ತಯಾರಿಸುತ್ತಾರೆ. ಕೆಲವು ಫಾಂಟ್‌ಗಳು:- Times New Roman, Arial, BRH Kannada, Tunga.


e - ಸಲಹೆ

ವೀರು ಅವರ ಪ್ರಶ್ನೆ: ನನಗೆ ಒಂದೇ ಗಣಕದಲ್ಲಿ ವಿಂಡೋಸ್ ಎಕ್ಸ್‌ಪಿ ಮತ್ತು ವಿಂಡೋಸ್ ೭ ಹಾಕಿಕೊಳ್ಳಬೇಕಾಗಿದೆ. ಇದು ಸಾಧ್ಯವೇ?
ಉ: ಸಾಧ್ಯ. ಎರಡನ್ನೂ ಹಾರ್ಡ್‌ಡಿಸ್ಕ್‌ನ ಬೇರೆ ಬೇರೆ ವಿಭಾಗಗಳಲ್ಲಿ (ಪಾರ್ಟೀಶನ್) ಹಾಕಿಕೊಳ್ಳಬೇಕು. ಮೊದಲು ವಿಂಡೋಸ್ ಎಕ್ಸ್‌ಪಿಯನ್ನು ಇನ್‌ಸ್ಟಾಲ್ ಮಾಡಿಕೊಂಡು ನಂತರ ವಿಂಡೋಸ್ ೭ ಅನ್ನು ಇನ್‌ಸ್ಟಾಲ್ ಮಾಡಿಕೊಳ್ಳಬೇಕು. ನಿಮ್ಮ ಗಣಕದಲ್ಲಿ ವಿಂಡೋಸ್ ೭ ಅನ್ನು ಹಾಕಿಕೊಳ್ಳಬಹುದೇ, ಅದಕ್ಕೆ ಸರಿಹೊಂದಬಹುದಾದ ಎಲ್ಲ ಯಂತ್ರಾಂಶಗಳು ಇವೆಯೇ ಎಂದೆಲ್ಲ ಪರಿಶೀಲಿಸಲು ಮೈಕ್ರೋಸಾಫ್ಟ್‌ನವರು ಒಂದು ತಂತ್ರಾಂಶ ನೀಡಿದ್ದಾರೆ. ಅದನ್ನು http://bit.ly/cZQTcl ಜಾಲತಾಣದಿಂದ ಡೌನ್‌ಲೋಡ್ ಮಾಡಿಕೊಂಡು ಮೊದಲು ನಿಮ್ಮ ಗಣಕವನ್ನು ಪರಿಶೀಲಿಸಿಕೊಳ್ಳಿ.
   
ಕಂಪ್ಯೂತರ್ಲೆ

ಒಮ್ಮೆ ದೇವಲೋಕದಲ್ಲಿ ಎಲ್ಲ ದೇವತೆಗಳ ನಡುವೆ ಗಣಕ ಬಳಸುವ ಬಗ್ಗೆ ಒಂದು ಸ್ಪರ್ಧೆ ಏರ್ಪಾಡಾಯಿತು. ಅದರಲ್ಲಿ ಗಣಪತಿ ವಿಜೇತನಾದ. ಯಾಕೆ ಗೊತ್ತೆ? ಅವನಿಗೆ ಮಾತ್ರ ಮೌಸ್ (ಇಲಿ) ಬಳಸಲು ಗೊತ್ತಿತ್ತು!

1 ಕಾಮೆಂಟ್‌: