ಮಂಗಳವಾರ, ಜೂನ್ 22, 2010

ಗಣಕಿಂಡಿ - ೦೫೭ (ಜೂನ್ ೨೧, ೨೦೧೦)

ಅಂತರಜಾಲಾಡಿ

ಪುಟಾಣಿಗಳಿಗೆ ವಿಜ್ಞಾನ

ಮಕ್ಕಳಿಗೆ ವಿಜ್ಞಾನದಲ್ಲಿ ಆಸಕ್ತಿ ಮೂಡಿಸಲು ಹಲವು ಜಾಲತಾಣಗಳಿವೆ. ಅಂತಹ ಒಂದು ಜಾಲತಾಣ www.sciencekids.co.nz. ಈ ಜಾಲತಾಣದಲ್ಲಿ ವಿಜ್ಞಾನದ ಬೇರೆ ವಿಭಾಗಗಳ ಬಗ್ಗೆ ವಿಷಯಗಳಿವೆ. ವಿಜ್ಞಾನ, ಖಗೋಳಶಾಸ್ತ್ರ, ತಂತ್ರಜ್ಞಾನ, ಹೀಗೆ ಹಲವಾರು ವಿಷಯಗಳ ಮಾಹಿತಿ ಇಲ್ಲಿ ಲಭ್ಯ. ಕೆಲವು ವಿಶಿಷ್ಟ ಮಾಹಿತಿಗಳೂ ಇವೆ. ವಿಜ್ಞಾನ ಪಾಠಗಳು, ವೀಡಿಯೋಗಳು ಕೂಡ ಇವೆ. ವಿಜ್ಞಾನದಲ್ಲಿ ಮಕ್ಕಳು ಯಾವುದಾದರೂ ಪರಿಯೋಜನೆ ನಡೆಸಬೇಕೇ? ಅದಕ್ಕೂ ಸಹಾಯ ಇಲ್ಲಿ ಲಭ್ಯ. ಮಕ್ಕಳಿಗೆ ಆಟ ಎಂದರೆ ಇಷ್ಟ ತಾನೆ? ಇಲ್ಲಿ ಮಕ್ಕಳು ಆಟ ಆಡಿ ವಿಜ್ಞಾನವನ್ನು ಕಲಿಯಬಹುದು. ಅಂತಹ ಆಟಗಳು ಇಲ್ಲಿವೆ.

ಡೌನ್‌ಲೋಡ್

ಡಾಸ್ ಪೆಟ್ಟಿಗೆ

ಈಗ ಎಲ್ಲರೂ ಅತ್ಯಾಧುನಿಕ ಗಣಕಗಳನ್ನು ಬಳಸುತ್ತಿದ್ದಾರೆ. ಅದರಲ್ಲಿರುವ ಕಾರ್ಯಾಚರಣೆಯ ವ್ಯವಸ್ಥೆ (ಆಪರೇಟಿಂಗ್ ಸಿಸ್ಟಮ್) ಸಾಮಾನ್ಯವಾಗಿ ವಿಂಡೋಸ್ ಎಕ್ಸ್‌ಪಿ, ವಿಸ್ಟ ಅಥವಾ ೭ ಇರುತ್ತದೆ. ಇವುಗಳಲ್ಲಿ ಹಳೆಯ ಡಾಸ್ ಕಾರ್ಯಾಚರಣೆಯ ವ್ಯವಸ್ಥೆಯಲ್ಲಿಕೆಲಸ ಮಾಡುತ್ತಿದ್ದಂತಹ ತಂತ್ರಾಂಶಗಳು, ಆಟಗಳು ಕೆಲಸ ಮಾಡುವುದಿಲ್ಲ. ಉದಾಹರಣೆಗೆ ದಶಕಗಳ ಹಿಂದೆ ನೀವು ಮಾಡುತ್ತಿದ್ದ ಬೇಸಿಕ್ ಪ್ರೋಗ್ರಾಮ್ ಅಥವಾ ನೀವು ಆಡುತ್ತಿದ್ದ ಪ್ಯಾಕ್‌ಮಾನ್, ಪ್ರಿನ್ಸ್ ಆಫ್ ಪರ್ಶಿಯಾ ೧ ಆಟಗಳು. ಇವುಗಳನ್ನೆಲ್ಲ ಇನ್ನೂ ನೀವು ಬಳಸಬೇಕಿದ್ದರೆ DOSBox ಎಂಬ ತಂತ್ರಾಂಶವನ್ನು ಬಳಸಬಹುದು. ಇದು www.dosbox.com ಜಾಲತಾಣದಲ್ಲಿ ಲಭ್ಯ.

e - ಸುದ್ದಿ

ಆಮೆ ಚಿತ್ರೀಕರಿಸಿದ ವೀಡಿಯೋ

ಫ್ಲಾರಿಡಾದ ಸಮುದ್ರ ಕಿನಾರೆಯಲ್ಲಿ ಒಬ್ಬ ಸುರಕ್ಷ ಅಧಿಕಾರಿಗೆ ಒಂದು ಕ್ಯಾಮರಾ ಸಿಕ್ಕಿತು. ಅದು ನೀರಿನಡಿಯಲ್ಲೂ ಕೆಲಸ ಮಾಡುವಂತಹುದಾಗಿತ್ತು. ಅದನ್ನು ನೋಡಿದೊಡನೆ ಆತನಿಗೆ ಅದು ತಿಂಗಳುಗಳಿಂದ ಸಮುದ್ರದಲ್ಲಿತ್ತು ಎಂದು ಖಾತ್ರಿಯಾಯಿತು. ಆದರೆ ಕ್ಯಾಮರಾದಲ್ಲಿದ್ದ ಚಿತ್ರ ಹಾಗೂ ವೀಡಿಯೋಗಳಿಂದ ಅದರ ಒಡೆಯ ಯಾರು ಎಂದು ಆತನಿಗೆ ಪತ್ತೆಹಚ್ಚಲಾಗಲಿಲ್ಲ. ಕೊನೆಗೆ ಆತ ಅದರಲ್ಲಿದ್ದ ಚಿತ್ರ ಹಾಗೂ ವೀಡಿಯೋಗಳನ್ನು ಅಂತರಜಾಲಕ್ಕೆ ಸೇರಿಸಿ ಅದರ ಬಗ್ಗೆ ವಿವರ ಸೇರಿಸಿ ಓದುಗರಿಂದ ಸಹಾಯ ಕೇಳಿದ. ಅದರಲ್ಲಿಯ ಚಿತ್ರಗಳನ್ನು ವೀಕ್ಷಿಸಿದ ಜನರು ಅದು ೧೧೦೦ ಮೈಲು ದೂರದ ಡಚ್ ದ್ವೀಪ ಅರುಬಾಕ್ಕೆ ಸೇರಿದ್ದು ಎಂದು ತಿಳಿಸಿದರು. ಆತ ಆ ದ್ವೀಪದ ಜಾಲತಾಣದಲ್ಲಿ ಅದರ ಬಗ್ಗೆ ಬರೆದ. ಕೊನೆಗೂ ಅದರ ಒಡೆಯ ಪತ್ತೆ ಆದ. ಈ ಕಥೆಯಲ್ಲಿ ಇನ್ನೂ ಒಂದು ಸ್ವಾರಸ್ಯವಿದೆ. ಆ ಕ್ಯಾಮರಾವನ್ನು ಒಂದು ಆಮೆ ಎಳೆದೊಯ್ಯುವಾಗ ಒಂದು ವೀಡಿಯೋ ಚಿತ್ರೀಕರಣವಾಗಿತ್ತು. ಬಹುಶಃ ಇದು ಆಮೆ ಚಿತ್ರೀಕರಿಸಿದ ಏಕೈಕ ವೀಡಿಯೋ ಎಂಬ ಖ್ಯಾತಿಗೆ ಪಾತ್ರವಾಗಬಹುದು.

e- ಪದ

ಕ್ಲಿಪ್‌ಬೋರ್ಡ್ (clipboard) - ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಅಥವಾ ಒಂದು ತಂತ್ರಾಂಶದಿಂದ ಇನ್ನೊಂದು ತಂತ್ರಾಂಶಕ್ಕೆ ನಕಲು ಮಾಡಬೇಕಾದುದನ್ನು ತಾತ್ಕಾಲಿಕವಾಗಿ ಮೆಮೊರಿಯಲ್ಲಿ ಇಟ್ಟುಕೊಳ್ಳುವ ಸ್ಥಳ. ಸಾಮಾನ್ಯವಾಗಿ ಬಹುಮಟ್ಟಿನ ತಂತ್ರಾಂಶಗಳಲ್ಲಿ ನಕಲು ಮಾಡಬೇಕಾದುದನ್ನು ಆಯ್ಕೆ ಮಾಡಿ ನಂತರ Ctrl ಮತ್ತು C ಕೀಲಿಗಳನ್ನು ಒಟ್ಟಿಗೆ ಒತ್ತಿದರೆ ಅದು ಕ್ಲಿಪ್‌ಬೋರ್ಡ್‌ಗೆ ಹೋಗಿ ಸೇರಿಕೊಳ್ಳುತ್ತದೆ.

e - ಸಲಹೆ

ಒಂದಕ್ಕಿಂತ ಹೆಚ್ಚು ಪಿಡಿಎಫ್ ಕಡತಗಳನ್ನು ಒಂದರ ಕೊನೆಯಲ್ಲಿ ಇನ್ನೊಂದನ್ನು ಸೇರಿಸಿ ಒಂದೇ ಪಿಡಿಎಫ್ ಕಡತ ಮಾಡಬೇಕೇ? ಹಾಗಿದ್ದರೆ ಗಣಕಿಂಡಿ ಅಂಕಣದಲ್ಲಿ ಈ ಹಿಂದೆಯೇ ಸೂಚಿಸಿದ್ದ PDFCreator ತಂತ್ರಾಂಶವನ್ನು ಬಳಸಿ. ಇದು ದೊರೆಯುವ ಜಾಲತಾಣ http://bit.ly/i1OXM
   
ಕಂಪ್ಯೂತರ್ಲೆ

ರಾಮಾಯಣದ ಕಾಲದಲ್ಲೇ ವಿಮಾನಯಾನ ನಮ್ಮವರಿಗೆ ಗೊತ್ತಿತ್ತು ಎಂಬ ವಾದ ನಿಮಗೆ ತಿಳಿದೇ ಇದೆ ತಾನೆ? ಇತ್ತೀಚೆಗೆ ಗಣಕ ಕ್ಷೇತ್ರದಲ್ಲಿ ಹೆಚ್ಚು ಸುದ್ದಿಯಲ್ಲಿರುವ ಒಂದು ವಿಧಾನ ಎಂದರೆ cloud computing (ನೋಡಿ: ಗಣಕಿಂಡಿ ಮಾರ್ಚ್ ೨೨, ೨೦೧೦). ಇದನ್ನು ಶಬ್ದಾನುವಾದ ಮಾಡಿದರೆ ಮೇಘ ಗಣಿಸು ಎಂದಾಗುತ್ತದೆ. ರಾವಣನ ಒಬ್ಬ ಮಗನ ಹೆಸರು ಮೇಘನಾದ. ಇದು ಮೇಘ ಗಣಿಸುವಿಕೆಗೆ ಶಬ್ದ ಸೇರಿಸಿದರೆ ಆಗುವಂತದ್ದು. ಅಂದರೆ cloud computing ಗೆ multimedia (ಬಹುಮಾಧ್ಯಮ) ಸೇರಿಸಿದಂತೆ. ಆದುದರಿಂದ ರಾಮಾಯಣದ ಕಾಲದಲ್ಲೆ ನಮ್ಮಲ್ಲಿ ಮೇಘ ಗಣಿಸುವಿಕೆಯೂ ಇತ್ತು ಎನ್ನಬಹುದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ