ಸೋಮವಾರ, ಜೂನ್ 28, 2010

ಗಣಕಿಂಡಿ - ೦೫೮ (ಜೂನ್ ೨೮, ೨೦೧೦)

ಅಂತರಜಾಲಾಡಿ

ಸೈಬರ್ ಕಾನೂನು

ಅಂತರಜಾಲ ಮತ್ತು ಗಣಕ ಬಳಸಿ ಮಾಡುವ ಅಪರಾಧಗಳಿಗೆ ಸೈಬರ್ ಕ್ರೈಮ್ ಎಂಬ ಹೆಸರಿದೆ. ಈ ರೀತಿಯ ಅಪರಾಧಗಳ ಬಗ್ಗೆ ಇರುವ ಕಾನೂನು ಸೈಬರ್ ಲಾ (ಕಾನೂನು). ಭಾರತ ಸರಕಾರದ ಮಾಹಿತಿ ತಂತ್ರಜ್ಞಾನ ಕಾಯಿದೆಯಲ್ಲಿ ಸೈಬರ್ ಅಪರಾಧಗಳ ಬಗ್ಗೆ ವಿಭಾಗವಿದೆ. ಈ ಬಗ್ಗೆ ಎಲ್ಲರಿಗೂ ತಿಳಿವಳಿಕೆ ಇರುವುದು ಒಳ್ಳೆಯದು. ಹಲವು ವಿಶ್ವವಿದ್ಯಾಲಯಗಳು ಸೈಬರ್ ಅಪರಾಧ ಮತ್ತು ಸೈಬರ್ ಕಾನೂನು ಬಗ್ಗೆ ಪದವಿ ನೀಡುತ್ತಿವೆ. ಈ ಎಲ್ಲ ವಿಷಯಗಳ ಬಗ್ಗೆ ಮಾಹಿತಿ ನಿಡುವ ಜಾಲತಾಣ naavi.org. ಇದರಲ್ಲಿ ಮಾಹಿತಿಗಳು ಕನ್ನಡದಲ್ಲೂ ಇವೆ. ಸೈಬರ್ ಕಾಲೇಜು ಬಗ್ಗೆ ಕೂಡ ಮಾಹಿತಿ ಇಲ್ಲಿದೆ. ಇದನ್ನು ನಡೆಸುತ್ತಿರುವವರು ಕನ್ನಡಿಗರೇ ಆದ ನಾ. ವಿಜಯಶಂಕರ ಅವರು.


ಡೌನ್‌ಲೋಡ್

ಬ್ಯಾಕ್‌ಅಪ್ ಮಾಡಿ

ಗಣಕದ ಹಾರ್ಡ್‌ಡಿಸ್ಕ್‌ನಲ್ಲಿರುವ ಮಾಹಿತಿ ಬಹು ಮುಖ್ಯ. ಗಣಕ ಹಾಳಾದರೆ ಹೊಸತು ತರಬಹುದು. ವರ್ಷಗಳಿಂದ ಮಾಡಿದ ಕೆಲಸ ಕಳೆದು ಹೋದರೆ ಸಿಗಲಾರದು. ಹಾರ್ಡ್‌ಡಿಸ್ಕ್ ಕೆಡುವುದು ಸಹಜ. ವೈರಸ್ ಧಾಳಿಯಿಂದಲೂ ಮಾಹಿತಿ ಕೆಡಬಹುದು. ಆದುದರಿಂದ ಆಗಾಗ ಮಾಹಿತಿಯನ್ನು ಗಣಕದ ಹಾರ್ಡ್‌ಡಿಸ್ಕ್‌ನಿಂದ ಬಾಹ್ಯ ಹಾರ್ಡ್‌ಡಿಸ್ಕ್‌ಗೆ ಪ್ರತಿ ಮಾಡಿಕೊಳ್ಳುವುದು ಅತೀ ಅಗತ್ಯ. ಇದಕ್ಕೆ ಬ್ಯಾಕ್‌ಅಪ್ ಮಾಡುವುದು ಎನ್ನುತ್ತಾರೆ. ಇದರಲ್ಲೂ ಹಲವು ವಿಧ. ಕಳೆದ ವಾರ ಬ್ಯಾಕ್‌ಅಪ್ ಮಾಡಿಕೊಂಡಿದ್ದೀರೆಂದುಕೊಳ್ಳೋಣ. ಈ ವಾರ ನೀವು ಎಲ್ಲ ಫೈಲುಗಳನ್ನು ಪುನಃ ಪ್ರತಿ ಮಾಡುವ ಅಗತ್ಯವಿಲ್ಲ. ಯಾವ ಫೈಲುಗಳು ಬದಲಾಗಿವೆ ಎಂದು ಪರಿಶೀಲಿಸಿ ಅಂತಹ ಫೈಲುಗಳನ್ನು ಮಾತ್ರವೇ ಪ್ರತಿಮಾಡಿಕೊಂಡರೆ ಬೇಗ ಕೆಲಸ ಆಗುತ್ತದೆ. ಈ ರೀತಿ ಮಾಡಲು ನಿಮಗೆ ಅನುವು ಮಾಡಿಕೊಡುವ ತಂತ್ರಾಂಶ PureSync. ಇದು ಬೇಕಿದ್ದರೆ ನೀವು ಭೇಟಿ ನೀಡಬೇಕಾದ ಜಾಲತಾಣ http://bit.ly/czq5K6.

e - ಸುದ್ದಿ

ಅಂತರಜಾಲವೇ ನಂಬಿಕಸ್ತ

ಅಮೇರಿಕಾದಲ್ಲಿ ಇತ್ತೀಚೆಗೆ ಒಂದು ಸಮೀಕ್ಷೆ ನಡೆಸಲಾಯಿತು. ಪರಂಪರಾಗತ ಮಾಧ್ಯಮ ಅಂದರೆ ಮುದ್ರಿತ ಸುದ್ದಿಪತ್ರಿಕೆ ಹಾಗೂ ಟೆಲಿವಿಷನ್‌ಗಳು ಮತ್ತು ಅಂತರಜಾಲ ಇವುಗಳಲ್ಲಿ ಯಾವುದನ್ನು ನೀವು ಹೆಚ್ಚು ನಂಬುತ್ತೀರಿ ಎಂಬು ಜನರನ್ನು ಪ್ರಶ್ನಿಸಲಾಯಿತು. ಬಹುಪಾಲು ಜನರು ತಾವು ಅಂತರಜಾಲ ತಾಣಗಳನ್ನು ಹೆಚ್ಚು ನಂಬುತ್ತೇವೆ ಎಂದು ಉತ್ತರಿಸಿದ್ದಾರೆ. ಶೇಕಡ ೧೫ರಷ್ಟು ಜನರು ತಾವು  ಅಂತರಜಾಲತಾಣಗಳನ್ನು ನಂಬುತ್ತೇವೆ ಎಂದಿದ್ದಾರೆ. ಆದರೆ ಕೇವಲ ಶೇಕಡ ೮ರಷ್ಟು ಜನರು ಮಾತ್ರ ನಾವು ಪರಂಪರಾಗತ ಸುದ್ದಿ ಮಾಧ್ಯಮಗಳನ್ನು ನಂಬುತ್ತೇವೆ ಎಂದಿದ್ದಾರೆ. ಟಿಆರ್‌ಪಿ ಮೇಲೆ ಮಾತ್ರವೇ ಗಮನವಿತ್ತಿರುವ ಸುದ್ದಿ ಮಾಧ್ಯಮಗಳು ಗಮನಿಸುತ್ತಿದ್ದೀರಾ?

e- ಪದ

ವೆಬ್‌ಕಾಸ್ಟ್ (webcast) -ಅಂತರಜಾಲ ಮೂಲಕ ಧ್ವನಿ ಮತ್ತು ದೃಶ್ಯಗಳ ನೇರ ಪ್ರಸಾರ. ಸರಳ ಮಾತಿನಲ್ಲಿ ಹೇಳುವುದಾದರೆ ಅಂತರಜಾಲ ದೂರದರ್ಶನ ಪ್ರಸಾರ. ಆದರೆ ಅಷ್ಟೇ ಅಲ್ಲ. ಅಂತರಜಾಲ ಮೂಲಕ ಭಾಷಣ, ತಂತ್ರಜ್ಞಾನದ ಬಗ್ಗೆ ಸ್ಲೈಡ್ ಶೋ ಮೂಲಕ ಭಾಷಣ, ವೀಡಿಯೋ, ಚಲನಚಿತ್ರ ಇತ್ಯಾದಿ ಎಲ್ಲ ಪ್ರಸಾರ ಇದರಲ್ಲಿ ಅಡಕವಾಗಿರಬಹುದು.

e - ಸಲಹೆ

ಗಣೇಶ ಶಾನಭಾಗರ ಪ್ರಶ್ನೆ: ನಿಮ್ಮ ಅಂಕಣ ಉಪಯುಕ್ತವಾಗಿದೆ. ಈ ಲೇಖನಗಳು ಪುಸ್ತಕ ರೂಪದಲ್ಲಿ ಸಿಗಬಹುದೇ? ನನ್ನ ಮಗ ೬ನೆಯ ತರಗತಿಯಲ್ಲಿ ಓದುತ್ತಿದ್ದಾನೆ. ಅವನಿಗೆ ಗಣಿತ ಕಷ್ಟವಾಗುತ್ತಿದೆ. ಗಣಿತ ಕಲಿಸುವ ಜಾಲತಾಣಗಳು ಇವೆಯೇ? ಅದೇ ರಿತಿ ಮಕ್ಕಳಿಗೆ ವಿಜ್ಞಾನದಲ್ಲಿ ಆಸಕ್ತಿ ಮೂಡಿಸಿ ಅವುಗಳನ್ನು ವಿವರಿಸಿ ಹೇಳುವ ಜಾಲತಾಣಗಳಿದ್ದರೆ ತಿಳಿಸಿ.
ಉ: ಗಣಕಿಂಡಿ ಅಂಕಣದ ಎಲ್ಲ ಲೇಖನಗಳನ್ನು ganakindi.blogspot.com ಜಾಲತಾಣದಲ್ಲಿ ಓದಬಹುದು. ಗಣಿತ ಕಲಿಯಲು ಸಹಾಯವಾಗುವ ಕೆಲವು ಜಾಲತಾಣಗಳನ್ನು ಈಗಾಗಲೆ ಸೂಚಿಸಿದ್ದೆ. ಇನ್ನೂ ಕೆಲವು - visualmathlearning.com, coolmath-games.com, mathsisfun.com. ವಿಜ್ಞಾನದ ಬಗ್ಗೆ ಇರುವ ಹಲವು ಜಾಲತಾಣಗಳನ್ನು ಈಗಾಗಲೆ ಗಣಕಿಂಡಿ ಅಂಕಣದಲ್ಲಿ ಸೂಚಿಸಿದ್ದೇನೆ.
   
ಕಂಪ್ಯೂತರ್ಲೆ


ಕೋಲ್ಯನಿಗೆ ವಿಮಾನದಲ್ಲಿ ಹೋಗಬೇಕಿತ್ತು. ಜೊತೆಯಲ್ಲಿ ಲ್ಯಾಪ್‌ಟಾಪ್ ಇತ್ತು. ಚೀಲ ತೂಕಮಾಡಿ ನೋಡಿ ವಿಮಾನಯಾನ ಕಂಪೆನಿಯ ಅಧಿಕಾರಿಗಳು ಆತನಿಗೆ ಚೀಲದ ತೂಕ ಜಾಸ್ತಿ ಇದೆ ಎಂದು ಹೇಳಿದರು. ಕೋಲ್ಯ ಪಕ್ಕಕ್ಕೆ ಸರಿದು ಲ್ಯಾಪ್‌ಟಾಪ್ ತೆರೆದು ಅದರ ಹಾರ್ಡ್‌ಡಿಸ್ಕ್‌ನಲ್ಲಿದ್ದ ಎಲ್ಲ ಮಾಹಿತಿಗಳನ್ನು ಅಳಿಸಿ ಹಾಕಿದ -ತೂಕ ಕಡಿಮೆಯಾಗಲು.

1 ಕಾಮೆಂಟ್‌:

 1. ಸರ್,
  ನನಗೆ virtual hairstyle ತೋರಿಸುವಂತಹ ಅಂತರ್ಜಾಲದ
  ವಿಳಾಸ ಬೇಕಾಗಿದೆ.ಅದರಲ್ಲಿ ನಮ್ಮ ಫೋಟೋ upload ಮಾಡಿ
  ವಿವಿಧ ರೀತಿಯ ಕೇಶವಿನ್ಯಾಸ ತೋರಿಸುವಂತಿರಬೇಕು ಮತ್ತು ಅದು ಉಚಿತವಾಗಿರಬೇಕು.
  ಅದು free Downloadable software ಆಗಿದ್ದರೆ ಇನ್ನೂ ಉತ್ತಮ.
  ವಿಳಾಸ ತೋರಿಸಿದಲ್ಲಿ ಅನುಕೂಲವಾದೀತು.Thanks in advance!
  -Raghavendra Joshi

  ಪ್ರತ್ಯುತ್ತರಅಳಿಸಿ