ಬುಧವಾರ, ಜುಲೈ 7, 2010

ಗಣಕಿಂಡಿ - ೦೫೯ (ಜುಲೈ ೦೫, ೨೦೧೦)

ಅಂತರಜಾಲಾಡಿ

ಹಳೆ ಪುಸ್ತಕ ಮಾರಿ

ನಿಮ್ಮಲ್ಲಿರುವ ನಿಮಗೀಗ ಬೇಡವಾಗಿರುವ ಹಳೆಯ ಪುಸ್ತಕ ಮಾರಬೇಕಿದ್ದರೆ ಏನು ಮಾಡಬೇಕು? ಬೆಂಗಳೂರಿನ ಅವೆನ್ಯೂ ರಸ್ತೆಗೆ ಹೋಗಬೇಕು ಎನ್ನುತ್ತೀರಾ? ಅದಕ್ಕಾಗಿ ಟ್ರಾಫಿಕ್ ಜಾಮ್‌ಗಳ ನಗರಿ ಬೆಂಗಳೂರಿಗೆ ಹೋಗುವವರಾರು ಎನ್ನುತ್ತೀರಾ? ಬೇಡ. ಮನೆಯಿಂದಲೇ ಅದನ್ನು ಅಂತರಜಾಲದ ಮೂಲಕ ಮಾರುವಂತಿದ್ದರೆ ಎಷ್ಟು ಚೆನ್ನ ಅಲ್ಲವೇ? ಹೌದು. ಅಂತಹ ಒಂದು ಜಾಲತಾಣವೂ ಇದೆ. ಅದುವೇ  indianusedbooks.com. ಈ ಜಾಲತಾಣವು ಹಳೆಯ ಪುಸ್ತಕಗಳನ್ನು ಮಾರುವವರನ್ನೂ ಕೊಳ್ಳುವವರನ್ನೂ ಒಂದುಗೂಡಿಸುತ್ತದೆ.

ಡೌನ್‌ಲೋಡ್

ಆವರ್ತಕೋಷ್ಟಕ

ಆವರ್ತಕೋಷ್ಟಕ (periodic table) ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಬಹುಮುಖ್ಯ. ಮೂಲವಸ್ತುಗಳ ವಿವಿಧ ಗುಣವೈಶಿಷ್ಟ್ಯಗಳನ್ನು ಒಂದು ಕ್ರಮದಲ್ಲಿ ಇದರಲ್ಲಿ ಜೋಡಿಸಲಾಗಿದೆ. ಇದಕ್ಕಾಗಿ pElement ಎಂಬ ತಂತ್ರಾಂಶವಿದೆ. ಇದನ್ನು ಬಳಸಿ ಮೂಲವಸ್ತುಗಳ ರಾಸಾಯನಿಕ ಮತ್ತು ಭೌತಿಕ ಗುಣಗಳನ್ನು ತಿಳಿಯಬಹುದು. ಇದು ಬೇಕಿದ್ದಲ್ಲಿ ನೀವು ಭೇಟಿ ನಿಡಬೇಕಾದ ಜಾಲತಾಣ http://bit.ly/9isKkO

e - ಸುದ್ದಿ

ದಂತಕಥೆ

ಅಮೇರಿಕದ ಡೇವಿಡ್ ಎಂಬ ಮೂರನೆಯ ತರಗತಿಯ ಹುಡುಗ ಹಲ್ಲಿನ ಶಸ್ತ್ರಚಿಕಿತ್ಸೆಗೆ ದಂತವೈದ್ಯರಲ್ಲಿಗೆ ಹೋಗಿದ್ದ. ಅಲ್ಲಿಂದ ಹೊರ ಬಂದಾಗ ಅತ ಇನ್ನೂ ಅರಿವಳಿಕೆಯ ಮಂಪರಿನಲ್ಲಿದ್ದ. ನಾನು ಎಲ್ಲಿದ್ದೇನೆ? ಇಲ್ಲಿ ನಡೆಯುತ್ತಿರುವುದೇನು ಇತ್ಯಾದಿ ಬಡಬಡಿಸಿದ. ಅವನ ಅಪ್ಪ ಅದನ್ನೆಲ್ಲ ವೀಡಿಯೋ ಕ್ಯಾಮರಾದಲ್ಲಿ ಸೆರೆಹಿಡಿಯುತ್ತಿದ್ದ. ಆತ ಅದನ್ನು ಯುಟ್ಯೂಬ್‌ಗೆ ಸೇರಿಸಿದ. ಮೂರು ದಿನಗಳಲ್ಲಿ ೩೦ ಲಕ್ಷ ಜನರು ಅದನ್ನು ವೀಕ್ಷಿಸಿ ದಿನಬೆಳಗಾಗುವುದರೊಳಗೆ ಡೇವಿಡ್ ಒಬ್ಬ ತಾರೆಯಾಗಿಬಿಟ್ಟ. ಆತನ ಅಪ್ಪ ಈ ವೀಡಿಯೋ ಒಂದರಿಂದಲೇ ೧,೫೦,೦೦೦ ಡಾಲರ್ ಸಂಪಾದಿಸಿದ ಎಂದರೆ ನಂಬುತ್ತೀರಾ? ನಿಜವಾದ ದಂತಕಥೆಯೆಂದರೆ ಇದುವೇ!

e- ಪದ

ವಿ-ಕಲಿಕೆ (e-learning) -ವಿದ್ಯುನ್ಮಾನ ಆಧಾರಿತ ಕಲಿಕೆ. ಇದರಲ್ಲಿ ಪ್ರಮುಖವಾಗಿ ಗಣಕ, ಅಂತರಜಾಲ, ಅಂತರಜಾಲ ಸಂಪರ್ಕವಿರುವ ಗ್ಯಾಜೆಟ್ (ಸ್ಮಾರ್ಟ್‌ಫೋನ್) ಎಲ್ಲ ಒಳಗೊಂಡಿರುತ್ತದೆ. ಸಾಮಾನ್ಯವಾಗಿ ಗಣಕಾಧಾರಿತ ಶಿಕ್ಷಣವನ್ನೇ ವಿ-ಕಲಿಕೆ ಎಂದು ಬಹುಮಂದಿ ಕರೆಯುತ್ತಾರೆ. ಗಣಕಗಳಲ್ಲಿ ಸಿ.ಡಿ. ಹಾಕಿ ಬಹುಮಾಧ್ಯಮ ಮೂಲಕ ಕಲಿಯುವುದು ಇದರಲ್ಲಿ ಒಂದು ಪ್ರಮುಖ ವಿಧಾನ. ದೂರಶಿಕ್ಷಣದ ವಿದ್ಯಾರ್ಥಿಗಳು ಅಂತರಜಾಲದ ಮೂಲಕ ಪಠ್ಯ ಪಡೆಯುವುದು, ಪರೀಕ್ಷೆ ತೆಗೆದುಕೊಳ್ಳುವುದು, ವಾಸ್ತವಸದೃಶ ತರಗತಿಯಲ್ಲಿ ಪಾಲುಗೊಳ್ಳುವುದು ಎಲ್ಲ ಇದರಲ್ಲಿ ಅಡಕಗೊಂಡಿವೆ.

e - ಸಲಹೆ

ರಾಘವೇಂದ್ರ ಜೋಶಿಯವರ ಪ್ರಶ್ನೆ: ನನಗೆ ವಾಸ್ತವಸದೃಶ ಕೇಶವಿನ್ಯಾಸ ತೋರಿಸುವಂತಹ ಅಂತರಜಾಲದ ವಿಳಾಸ ಬೇಕಾಗಿದೆ. ಅದರಲ್ಲಿ ನಮ್ಮ ಫೋಟೋ ಅಪ್‌ಲೋಡ್ ಮಾಡಿ ವಿವಿಧ ರೀತಿಯ ಕೇಶವಿನ್ಯಾಸ ತೋರಿಸುವಂತಿರಬೇಕು ಮತ್ತು ಅದು ಉಚಿತವಾಗಿರಬೇಕು.
ಉ: www.hairstyles.knowage.info
  
ಕಂಪ್ಯೂತರ್ಲೆ

ಫೇಸ್‌ಬುಕ್ ಕವನ

ಫೇಸ್‌ಬುಕ್ ಒಂದು ಶತಮೂರ್ಖ
ಸೂಚಿಸುತ್ತಿದೆ ಗೆಳತಿಯಾಗಬಹುದೆಂದು ನನ್ನ ಮಾಜಿ ಪ್ರೇಯಸಿಯ
ಗೀಚಬಹುದೆಲ್ಲರು ನನ್ನ ಗೋಡೆಯ ಮೇಲೆ
ಮಿಥ್ಯಾ ತೋಟವ ಮಾಡುತಿಹರೆಲ್ಲರು
ತಾಳಲಾರೆ ಸೆಖೆಯ ಎಂದರೊಬ್ಬ ಕ್ಲಿಕ್ಕಿಸಬೇಕು ನಾ ನನಗಿಷ್ಟ ಎಂದು

2 ಕಾಮೆಂಟ್‌ಗಳು:

  1. ತುಂಬಾ ಚೆನ್ನಾಗಿದೆ ಪವನಜ ಅವರೇ. ಹೊಸ ಮಾಹಿತಿಗಳೊಂದಿಗೆ ಫೇಸ್ ಬುಕ್ ಕವನ ಸೂಕ್ತವಾಗಿತ್ತು! "ತಾಳಲಾರೆ ಸೆಖೆಯ ಎಂದರೊಬ್ಬ ಕ್ಲಿಕ್ಕಿಸಬೇಕು ನಾ ನನಗಿಷ್ಟ ಎಂದು" -ಬಲು ಮೋಜು! :-)

    ಪ್ರತ್ಯುತ್ತರಅಳಿಸಿ
  2. ಫೇಸ್ ಬುಕ್ ಕವನ ವಾಸ್ತವತೆಯನ್ನೇ ಸೂಚಿಸುವ ಚಂದದ ಅಣಕು ಕವನ!

    ಪ್ರತ್ಯುತ್ತರಅಳಿಸಿ