ಸೋಮವಾರ, ಜುಲೈ 19, 2010

ಗಣಕಿಂಡಿ - ೦೬೧ (ಜುಲೈ ೧೯, ೨೦೧೦)

ಅಂತರಜಾಲಾಡಿ

ಫಾಂಟ್ ಬೇಕೇ

ಗಣಕದಲ್ಲಿ ಮೂಡುವ ಅಕ್ಷರಭಾಗಗಳಿಗೆ ಫಾಂಟ್ ಎನ್ನುತ್ತಾರೆ. ನೀವು ಬಳಸುವ ಕೆಲವು ಪ್ರಮುಖ ಫಾಂಟ್‌ಗಳು Arial, Times New Roman, Verdana, BRH Kannada ಇತ್ಯಾದಿ. ಫಾಂಟ್‌ಗಳಿಗೆ ಹಕ್ಕುಸ್ವಾಮ್ಯ ಇದೆ. ಅಂದರೆ ನೀವು ನಿಮ್ಮ ಸ್ನೇಹಿತನ ಗಣಕದಲ್ಲಿ ನೋಡಿದ ಸುಂದರವಾದ ಫಾಂಟ್‌ನ್ನು ಪ್ರತಿಮಾಡಿಕೊಂಡು ನಿಮ್ಮ ಗಣಕದಲ್ಲಿ ಬಳಸುವಂತಿಲ್ಲ. ನಿಮಗೆ ಕೆಲವು ಉಚಿತ ಹಾಗೂ ಮುಕ್ತ ಫಾಂಟ್‌ಗಳು ಬೇಕೇ? ಹಾಗಿದ್ದಲ್ಲಿ ನೀವು openfontlibrary.org ಜಾಲತಾಣಕ್ಕೆ ಭೇಟಿ ನೀಡಬೇಕು. ನೀವು ಫಾಂಟ್ ತಯಾರಕರಾಗಿದ್ದಲ್ಲಿ ನಿಮ್ಮ ಫಾಂಟ್‌ನ್ನು ಉಚಿತವಾಗಿ ನೀಡುವ ಇರಾದೆ ಇದ್ದರೆ ಅದನ್ನು ಇಲ್ಲಿ ಸೇರಿಸಬಹುದು. ಇಲ್ಲಿ ದೊರೆಯುವ ಫಾಂಟ್‌ನ್ನು ಬದಲಿಸಿ ಅದನ್ನು ಅಲ್ಲಿಗೇ (ಬೇರೆ ಹೆಸರಿನಲ್ಲಿ) ಸೇರಿಸಲೂ ಬಹುದು. ಅಂದರೆ ಈಗಷ್ಟೆ ಸರಕಾರವು ಘೋಷಿಸಿರುವ ರುಪಾಯಿ ಚಿಹ್ನೆಯನ್ನು ಇಲ್ಲಿರುವ ಫಾಂಟ್‌ಗಳಿಗೆ ಸೇರಿಸಿ ಪುನಃ ಅಲ್ಲಿಗೆ ಸೇರಿಸಿ ಜನರಿಗೆ ಉಪಕಾರ ಮಾಡಬಹುದು.

ಡೌನ್‌ಲೋಡ್

ಫಾಂಟ್ ತಯಾರಿಸಿ

ಫಾಂಟ್ ತಯಾರಿಸಬೇಕೇ? ಹಾಗಿದ್ದಲ್ಲಿ ಅದಕ್ಕಾಗಿ ಇರುವ ದುಬಾರಿ ತಂತ್ರಾಂಶ ಕೊಳ್ಳಬೇಕಾಗುತ್ತದೆ ಎಂದು ಚಿಂತಿಸಬೇಕಾಗಿಲ್ಲ. ಫಾಂಟ್ ತಯಾರಿಸಲು ಒಂದು ಮುಕ್ತ ಹಾಗೂ ಉಚಿತ ತಂತ್ರಾಂಶ ಇದೆ. ಇದು ದೊರಕುವ ಜಾಲತಾಣ fontforge.sourceforge.net. ಇದು ಲೈನಕ್ಸ್ ಕಾರ್ಯಾಚರಣೆಯ ವ್ಯವಸ್ಥೆಯಲ್ಲಿ ಕೆಲಸ ಮಾಡಲು ತಯಾರಿಸಿದುದಾಗಿದೆ. ವಿಂಡೋಸ್‌ನಲ್ಲಿ ಇದನ್ನು ಬಳಸಬೇಕಾದರೆ CygWin (www.cygwin.com) ಎಂಬ ತಂತ್ರಾಂಶವನ್ನು ಬಳಸಬೇಕು. ಈ ಜಾಲತಾಣದಲ್ಲಿ ಎಲ್ಲ ಆವೃತ್ತಿಗಳು ಲಭ್ಯವಿವೆ. ನೆನಪಿಡಿ. ಫಾಂಟ್ ತಯಾರಿಸುವುದು ಕೇವಲ ಪರಿಣತರಿಂದ ಸಾಧ್ಯ. ಇದನ್ನು ಕಲಿಯಲು ಪರಿಶ್ರಮಪಡಬೇಕು.


e - ಸುದ್ದಿ

ಬಾಲಕಿಯ ರಕ್ಷಣೆಗೆ ಫೇಸ್‌ಬುಕ್

ತನ್ನ ತಾಯಿಯ ಮಾಜಿ ಪ್ರಿಯಕರ ತನ್ನ ಮೇಲೆ ಲೈಂಗಿಕ ಧಾಳಿ ಮಾಡಲು ಬಂದಾಗ ಆತನಿಂದ ತಪ್ಪಿಸಿಕೊಂಡು ಆತನನ್ನು ಸೆರೆಗೆ ಕಳುಹಿಸಿಲು ಅಮೇರಿಕಾದ ೧೨ ವರ್ಷದ ಬಾಲಕಿ ಬಳಸಿದ್ದು ಫೇಸ್‌ಬುಕ್ ಅನ್ನು. ತನ್ನ ತಾಯಿ ಮನೆಯಲ್ಲಿ ಇಲ್ಲದಿದ್ದಾಗ ಆತ ಆಕೆಯ ಮೇಲೆ ಧಾಳಿ ಮಾಡಿದ. ಆತನನ್ನು ಹೇಗೋ ಕೋಣೆಯಿಂದ ಆಕೆ ಹೊರದೂಡಿದಳು. ಆಕೆಯ ಫೋನನ್ನೂ ಆತ ಕಿತ್ತುಕೊಂಡಿದ್ದ. ಆದರೆ ಆಕೆಯ ಬಳಿ ಐಪ್ಯಾಡ್ ಇತ್ತು. ಅದನ್ನು ಬಳಸಿ ಆಕೆ ತನ್ನ ಪರಿಸ್ಥಿತಿ ವಿವರಿಸಿ ಯಾರಾದರೂ ಕೂಡಲೆ ತನ್ನ ತಾಯಿಯನ್ನು ಸಂಪರ್ಕಿಸಿ ತನ್ನನ್ನು ರಕ್ಷಿಸಬೇಕಾಗಿ ಫೇಸ್‌ಬುಕ್‌ನಲ್ಲಿ ಕೋರಿಕೆ ಸಲ್ಲಿಸಿದಳು. ಅದನ್ನು ಓದಿದ ಆಕೆಯ ಗೆಳತಿ ಆಕೆಯ ತಾಯಿಯನ್ನು ಸಂಪರ್ಕಿಸಿದಳು. ತಾಯಿ ಕೂಡಲೆ ಕಾರ್ಯಪ್ರವೃತ್ತಳಾಗಿ ಪೋಲೀಸರೊಂದಿಗೆ ಮನೆಗೆ ಬಂದು ಆತನ ಬಂಧನಕ್ಕೆ ಕಾರಣೀಭೂತಳಾದಳು.

e- ಪದ

ಕಾರ್ಪಸ್ (corpus) - ಒಂದು ನಿರ್ದಿಷ್ಟ ನಿಯಮವನ್ನು ಅನುಸರಿಸಿ ಸಂಗ್ರಹಿಸಿದ ಪದ, ವಾಕ್ಯ ಅಥವಾ ಲೇಖನಗಳ ಸಂಗ್ರಹ. ಸಾಮಾನ್ಯವಾಗಿ ಭಾಷಾಸಂಸ್ಕರಣೆಯಲ್ಲಿ ಇವುಗಳ ಬಳಕೆಯಾಗುತ್ತದೆ. ಇವುಗಳಲ್ಲಿ ಪದಗಳನ್ನು ನಾಮಪದ, ಕ್ರಿಯಾಪದ, ಅನ್ವಯ, ಗುಣವಾಚಕ, ಇತ್ಯಾದಿಯಾಗಿ ಲಗತ್ತಿಸಿರುತ್ತಾರೆ. ಇಂತಹ ಲಕ್ಷಗಟ್ಟಳೆ ಪದಗಳ ಕಾರ್ಪಸ್ ಬಳಸಿ ಲೇಖನಗಳನ್ನು ಗಣಕ ಬಳಸಿ ವಿಶ್ಲೇಷಿಸಲಾಗುತ್ತದೆ. ಗಣಕ ಬಳಸಿ ತರ್ಜುಮೆ ಮಾಡಲೂ ಇಂತಹ ಕಾರ್ಪಸ್ ಅಗತ್ಯವಿದೆ.


e - ಸಲಹೆ

ಪ್ರದೀಪಕುಮಾರರ ಪ್ರಶ್ನೆ: ಯುಟ್ಯೂಬ್‌ನಿಂದ ವಿಡಿಯೋಗಳನ್ನು ಡೌನ್‌ಲೋಡ್ ಮಾಡುವುದು ಹೇಗೆ?
ಉ: youtubedownload.altervista.org ಜಾಲತಾಣದಲ್ಲಿ ದೊರೆಯುವ ತಂತ್ರಾಂಶ ಬಳಸಿ.  

ಕಂಪ್ಯೂತರ್ಲೆ

ಗಣಕವಾಡು

ನಾಯಿಮರಿ ನಾಯಿಮರಿ ಮೌಸ್ ಬೇಕೇ?
ಮೌಸ್ ಬೇಕು ಕೀಬೋರ್ಡ್ ಬೇಕು ಎಲ್ಲ ಬೇಕು
ನಾಯಿಮರಿ ಮೌಸ್ ನಿನಗೆ ಏಕೆ ಬೇಕು
ಮೌಸ್ ಹಿಡಿದು ಗಣಕದಲ್ಲಿ ಆಡಬೇಕು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ