ಸೋಮವಾರ, ಜುಲೈ 12, 2010

ಗಣಕಿಂಡಿ - ೦೬೦ (ಜುಲೈ ೧೨, ೨೦೧೦)

ಅಂತರಜಾಲಾಡಿ

ಗಾಳಿಮಾತು ಪತ್ತೆಹಚ್ಚಿ

ಇಮೈಲ್ ಬಂದುದರಿಂದ ಒಳ್ಳೆಯದರ ಜೊತೆಗೆ ಕೆಟ್ಟದೂ ಆಗುತ್ತಿದೆ. ಹಿಂದೆ ವಂಚನೆ, ವದಂತಿಗಳು, ಗಾಳಿಮಾತುಗಳು, ಇವೆಲ್ಲ ನಿಧಾನವಾಗಿ ಒಂದೆಡೆಯಿಂದ ಇನ್ನೊಂದೆಡೆಗೆ ಸಾಗುತ್ತಿದ್ದವು. ಈಗ ಇಮೈಲ್ ಬಂದುದರಿಂದ ಅವೆಲ್ಲ ಕ್ಷಣಮಾತ್ರದಲ್ಲಿ ಚಲಿಸುತ್ತಿವೆ. ಉದಾಹರಣೆಗೆ ಬರಾಕ್ ಒಬಾಮ ರಾಜೀನಾಮೆ ಕೊಟ್ಟಿದ್ದಾರೆ ಎಂದು ಹೇಳುವ ಇಮೈಲ್. ಇದು ಸುಳ್ಳು ಎಂದು ವಿಚಾರಿಸಿ ತಿಳಿದುಕೊಳ್ಳದೆ ಆ ಇಮೈಲನ್ನು ನೂರಾರು ಜನ ನಿಮ್ಮ ಸ್ನೇಹಿತರಿಗೆ ನೀವು ಕಳುಹಿಸಿಕೊಟ್ಟಿರೆಂದಿಟ್ಟುಕೊಳ್ಳೋಣ. ಅದನ್ನು ಓದಿದವರಲ್ಲೊಬ್ಬ ಅದರ ನಿಜ ಪತ್ತೆಹಚ್ಚಿ ಅದು ಸುಳ್ಳೆಂದು ತಿಳಿಸಿ ನಿಮ್ಮನ್ನು ಜಾಢಿಸುತ್ತಾನೆ. ಆಗ ನಿಮಗೆ ಮಾನಹೋಗುತ್ತದೆ. ಹಾಗಾದರೆ ನಿಮಗೆ ಬಂದ ಇಮೈಲ್ ವದಂತಿ ಸತ್ಯವೇ ಸುಳ್ಳೇ ಎಂದು ತಿಳಿಯುವುದು ಹೇಗೆ? ಇಂತಹ ವದಂತಿ ಗಾಳಿಮಾತುಗಳಿಗಾಗಿಯೇ ಒಂದು ಜಾಲತಾಣವಿದೆ - www.hoax-slayer.com. ಇಮೈಲನ್ನು ಇತರರಿಗೆ ಕಳುಹಿಸುವ ಮುನ್ನ ಈ ಜಾಲತಾಣಕ್ಕೆ ಭೇಟಿ ನೀಡಿ.

ಡೌನ್‌ಲೋಡ್


೩-ಆಯಾಮದ ಮಾದರಿ ರಚಿಸಿರಿ


ವಸ್ತುಗಳ ಅಥವಾ ಶಿಲ್ಪಕಲೆಯ ಮೂರು ಆಯಾಮದ ಮಾದರಿ ರಚಿಸಲು ಹಲವು ದುಬಾರಿ ತಂತ್ರಾಂಶಗಳಿವೆ. ಅವುಗಳಲ್ಲಿ ನೀಡಿರುವ ಸವಲತ್ತುಗಳೂ ಅಂತೆಯೇ ಇವೆ. ನಮಗೆ ಅವೆಲ್ಲ ಬೇಡ. ಸರಳವಾದ ಹಾಗೂ ಉಚಿತವಾದ ತಂತ್ರಾಂಶ ಬೇಕು ಎನ್ನುವವರಿಗಾಗಿ ಒಂದು ತಂತ್ರಾಂಶವಿದೆ. ಅದುವೇ  Sculptris. ಇದನ್ನು ಬಳಸಿ ಸರಳವಾದ ಮೂರು ಆಯಾಮದ ರಚನೆಗಳನ್ನು ಮಾಡಬಹುದು. ಅವು ಗಣಿತದ ಸಮೀಕರಣಗಳಿರಬಹುದು, ಶಿಲ್ಪಕಲೆಯಿರಬಹುದು ಅಥವಾ ನಿಮಗಿಷ್ಟವಾದ ಇನ್ನೇನಾದರೂ ಆಗಿರಬಹುದು. ಇದು ಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣ www.sculptris.com.


e - ಸುದ್ದಿ

ಮರಣದಂಡನೆಯ ಘೋಷಣೆಗೂ ಟ್ವಿಟ್ಟರ್

ಟ್ವಿಟ್ಟರ್ ಮೂಲಕ ರಾಜಕಾರಣಿಗಳು, ನಟ ನಟಿಯರು, ಇನ್ನಿತರ ಖ್ಯಾತನಾಮರು ಇತ್ತೀಚೆಗಿನ ಬೆಳವಣಿಗೆಗಳ ಬಗ್ಗೆ ಜನರಿಗೆ ಮಾಹಿತಿ ನೀಡುವುದು ತಿಳಿದಿರಬಹುದು. ಆದರೆ ಅಮೇರಿಕದ ಉತಾ ನಗರದ ಅಟಾರ್ನಿ ಜನರಲ್ ಅವರು ಕೊಲೆಗಡುಕನೊಬ್ಬನಿಗೆ ಮರಣದಂಡನೆ ವಿಧಿಸಿದ್ದೇವೆ ಎಂಬುದನ್ನು ಕೂಡ ಟ್ವೀಟ್ ಮಾಡುವ ಮೂಲಕ ಎಲ್ಲರಿಗೆ ತಿಳಿಸಿದ್ದಾರೆ. “ನಾನು ಈಗಷ್ಟೆ ಗಾರ್ಡನರ್‌ಗೆ ಮರಣದಂಡನೆ ವಿಧಿಸಿದ್ದೇನೆ. ತನ್ನ ಬಲಿಪಶುಗಳಿಗೆ ಆತ ನಿರಾಕರಿಸಿದ ದಯೆಯನ್ನು ದೇವರು ಆತನಿಗೆ ದಯಪಾಲಿಸಲಿ” ಎಂದು ಅವರು ಟ್ವೀಟ್ ಮಾಡಿದ್ದರು.

e- ಪದ


ಡಿಜಿಟಲ್ ವಿಂಡೋ ಶಾಪಿಂಗ್ (digital window shopping) -ಅಂತರಜಾಲದಲ್ಲಿರುವ ವ್ಯಾಪಾರಿ ಜಾಲತಾಣಗಳಿಗೆ ಸುಮ್ಮನೆ ಭೇಟಿ ನೀಡಿ ಮಾರಾಟಕ್ಕಿಟ್ಟಿರುವ ವಿವಿಧ ವಸ್ತುಗಳನ್ನು ವೀಕ್ಷಿಸಿ ಯಾವುದನ್ನೂ ಕೊಳ್ಳದಿರುವುದು. ಹೀಗೆ ಮಾಡುವವರು ಹಲವು ಕಾರಣಗಳಿಗೆ ಕೊಳ್ಳದಿರುತ್ತಾರೆ. ಅದರಲ್ಲಿ ತುಂಬ ಪ್ರಮುಖವಾಗಿರುವುದು ಅವರು ಸಾಮಾನಿನ ಬಗ್ಗೆ ವಿವರ ತಿಳಿಯಲಷ್ಟೆ ಜಾಲತಾಣಕ್ಕೆ ಭೇಟಿ ನೀಡಿರುತ್ತಾರೆ ಎಂಬುದು. ನಂತರ ಅವರು ಯಾವುದಾದರೂ ಅಂಗಡಿಗೆ ಭೇಟಿ ನೀಡಿ ಅದೇ ವಸ್ತುವನ್ನು ಕೊಳ್ಳುವ ಸಾಧ್ಯತೆಯೂ ಇದೆ.


e - ಸಲಹೆ

ಮೋಹನ ರಾಜರ ಪ್ರಶ್ನೆ: ಯಾವುದಾದರೊಂದು ವೀಡಿಯೋವನ್ನು ಒಂದು ವಿಧಾನದಿಂದ ಇನ್ನೊಂದು ವಿಧಾನಕ್ಕೆ ಪರಿವರ್ತಿಸುವ ಉಚಿತ ತಂತ್ರಾಂಶ ಇದೆಯೇ?
ಉ: ಇದೆ. ಈ ಬಗ್ಗೆ ಗಣಕಿಂಡಿ ಅಂಕಣದಲ್ಲಿ ಸೂಚಿಸಲಾಗಿತ್ತು. ಅದುವೇ ಮೀಡಿಯಾಕೋಡರ್. ಅದು ಸಿಗುವ ಜಾಲತಾಣ - www.mediacoderhq.com.  

ಕಂಪ್ಯೂತರ್ಲೆ

ಗಣಕವಾಡು

ಬೆಕ್ಕೇ ಬೆಕ್ಕೇ
ಮುದ್ದಿನ ಸೊಕ್ಕೆ
ಎಲ್ಲಿಗೆ ಹೋಗಿದ್ದೆ
ಎಲ್ಲಿಗೂ ಇಲ್ಲ
ಇಲ್ಲೇ ಇಲ್ಲೊ
ಮೌಸ್ ಹುಡುಕುತ್ತಿದ್ದೆ

3 ಕಾಮೆಂಟ್‌ಗಳು:

  1. Chennagide....matte 'ಕಂಪ್ಯೂತರ್ಲೆ' majaa tantu! :-)

    ಪ್ರತ್ಯುತ್ತರಅಳಿಸಿ
  2. ಗಣಕಿಂಡಿಯಲ್ಲಿ ಉಪಯುಕ್ತ ಜ್ಞಾನವನ್ನ ಹಂಚುತ್ತಿದ್ದೀರಿ- ಅದಕ್ಕಾಗಿ ಕೃತಜ್ಞತೆಗಳು. ವಿಂಡೋಸ್ 7 ಇರುವ ಕಂಪ್ಯೂಟರಿನಲ್ಲಿ ಟೈಪಿಂಗ್ ಕಲಿಯಲು ಯಾವುದಾದರೂ ಉಚಿತ ತಂತ್ರಾಂಶ ಲಭ್ಯವಿದೆಯೇ? ಲಭ್ಯವಿದ್ದರೆ ದಯವಿಟ್ಟು ತಿಳಿಸಿ.

    ಪ್ರತ್ಯುತ್ತರಅಳಿಸಿ
  3. http://www.snopes.com/ - ಈ ತಾಣದಲ್ಲಿ ಸುಳ್ಳುವಿಷಯಗಳನ್ನು ಹರಡುವ ಇ-ಮೇಲ್ ಗಳ ಬಗ್ಗೆ ತಿಳಿಯಬಹುದು.

    ಪ್ರತ್ಯುತ್ತರಅಳಿಸಿ