ಸೋಮವಾರ, ನವೆಂಬರ್ 1, 2010

ಗಣಕಿಂಡಿ - ೦೭೬ (ನವಂಬರ್ ೦೧, ೨೦೧೦)

ಅಂತರಜಾಲಾಡಿ

ಕಂಪ್ಯೂನಲ್ಲಿಕನ್ನಡ

ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ ಬೆಳೆಯಬೇಕಾಗಿದೆ. ಗಣಕದಲ್ಲಿ ಕನ್ನಡ ಬಳಕೆಯ ಬಗ್ಗೆ ಜನರಲ್ಲಿ ಹಲವಾರು ಸಂಶಯಗಳಿರುತ್ತವೆ. ಹಾಗೆಯೇ ಗಣಕ ಮತ್ತು ಅಂತರಜಾಲ ಬಳಕೆ ಬಗ್ಗೆ ಕನ್ನಡದಲ್ಲಿ ಮಾಹಿತಿ ಜನರಿಗೆ ಬೇಕಾಗಿದೆ. ಮಾಹಿತಿ ತಂತ್ರಜ್ಞಾನವೆಂದರೆ ಕೇವಲ ಗಣಕ ಮತ್ತು ಅಂತರಜಾಲವಲ್ಲ. ಮೊಬೈಲ್ ಫೋನು ಕೂಡ ಈ ಪಟ್ಟಿಗೆ ಸೇರುತ್ತದೆ. ೨೧ನೆಯ ಶತಮಾನದಲ್ಲಿ ಕನ್ನಡ ಉಳಿದು ಬೆಳೆಯಬೇಕಾದರೆ ಮಾಹಿತಿ ತಂತ್ರಜ್ಞಾನದ ಎಲ್ಲ ಅಂಗಗಳಲ್ಲಿ ಕನ್ನಡದ ಅಳವಡಿಕೆ ಮತ್ತು ಬಳಕೆ ವ್ಯಾಪಕವಾಗಿ ಆಗಬೇಕು. ಈ ಆಶಯಗಳಿಗೆ ಪೂರಕವಾಗಿರುವ ಒಂದು ಜಾಲತಾಣ compuinkannada.co.cc. ಈ ಜಾಲತಾಣದಲ್ಲಿ ಕನ್ನಡ ಭಾಷೆಯಲ್ಲಿ ಮಾಹಿತಿ ತಂತ್ರಜ್ಞಾನದ ವಿವಿಧ ಅಂಗಗಳ ಬಗ್ಗೆ ಲೇಖನ, ಟ್ಯುಟೋರಿಯಲ್, ಉಚಿತ ತಂತ್ರಾಂಶ ಎಲ್ಲ ಇವೆ.

ಡೌನ್‌ಲೋಡ್

ಆಂಡ್ರೋಯಿಡ್‌ಗೆ ತಂತ್ರಾಂಶ

ಇತ್ತೀಚೆಗೆ ತುಂಬ ಜನಪ್ರಿಯವಾಗುತ್ತಿರುವ ಮೊಬೈಲ್ ಫೋನ್ ಕಾರ್ಯಾಚರಣೆಯ ವ್ಯವಸ್ಥೆ ಆಂಡ್ರೋಯಿಡ್. ಇದು ಗೂಗಲ್‌ನವರು ಬಿಡುಗಡೆ ಮಾಡಿದ ಕಾರ್ಯಾಚರಣೆಯ ವ್ಯವಸ್ಥೆ. ಇವುಗಳನ್ನು ಸಾಮಾನ್ಯವಾಗಿ ಸ್ಮಾರ್ಟ್‌ಫೋನ್ ಎಂದು ಕರೆಯಲಾಗುವ ಮೊಬೈಲ್ ಫೋನ್‌ಗಳಲ್ಲಿ ಬಳಸುತ್ತಾರೆ. ಈ ಕಾರ್ಯಾಚರಣೆಯ ವ್ಯವಸ್ಥೆಯಲ್ಲಿ ಕೆಲಸ ಮಾಡುವ ತಂತ್ರಾಂಶಗಳು ಲಕ್ಷದಷ್ಟಿವೆ. ಇವುಗಳಲ್ಲಿ ಎಂದಿನಂತೆ ಉಚಿತ ಮತ್ತು ವಾಣಿಜ್ಯಕ ಎಂಬ ವಿಭಾಗಗಳಿವೆ. ಈ ಆಂಡ್ರೋಯಿಡ್ ಫೋನ್ ತಂತ್ರಾಂಶಗಳು ಬೇಕಿದ್ದರೆ ನೀವು ಭೇಟಿ ನೀಡಬೇಕಾದ ಜಾಲತಾಣ www.android.com. ಈ ಜಾಲತಾಣವನ್ನು ಗಣಕದ ಮೂಲಕ ಅಥವಾ ನಿಮ್ಮ ಆಂಡ್ರೋಯಿಡ್ ಫೋನ್ ಮೂಲಕವೂ ಪ್ರವೇಶಿಸಬಹುದು.

e - ಸುದ್ದಿ

ಉತ್ತಮ ಕಳ್ಳ

ಸ್ವೀಡನ್ ದೇಶದ ಪ್ರೊಫೆಸರ್ ಒಬ್ಬರು ತಮ್ಮ ಗಣಕವಿದ್ದ ಚೀಲವನ್ನು ತಮ್ಮ ಕಟ್ಟಡದ ಮೆಟ್ಟಿಲ ಬಳಿ ಇಟ್ಟು ಬಟ್ಟೆ ತೊಳೆಯುವ ಯಂತ್ರದ ಬಳಿಗೆ ಹೋಗಿದ್ದರು. ವಾಪಾಸು ಬಂದಾಗ ಅವರ ಚೀಲ ಕಳವಾಗಿತ್ತು. ಅವರು ಕೂಡಲೆ ಪೋಲೀಸರಿಗೆ ತಿಳಿಸಿದರು. ಒಂದು ಘಂಟೆಯ ನಂತರ ನೋಡಿದಾಗ ಅವರು ಚೀಲ ಇಟ್ಟ ಜಾಲಗದಲ್ಲಿ ಅವರ ಚೀಲ ಪ್ರತ್ಯಕ್ಷವಾಗಿತ್ತು. ಅದರಲ್ಲಿದ್ದ ಕ್ರೆಡಿಟ್ ಕಾರ್ಡ್, ಫೋನ್, ಡೈರಿ, ಇತ್ಯಾದಿ ವಸ್ತುಗಳು ಸುರಕ್ಷಿತವಾಗಿದ್ದವು. ಆದರೆ ಅವರ ಲ್ಯಾಪ್‌ಟಾಪ್ ಮಾತ್ರ ಇರಲಿಲ್ಲ. ಸುಮಾರು ಒಂದು ವಾರದ ನಂತರ ಅವರಿಗೆ ಒಂದು ಪ್ಯಾಕೆಟ್ ಕೋರಿಯರ್ ಮೂಲಕ ಬಂತು. ಅದರಲ್ಲಿ ಒಂದು ಯುಎಸ್‌ಬಿ ಡ್ರೈವ್ ಇತ್ತು. ಅದನ್ನು ಪರಿಶೀಲಿಸಿದಾಗ ಅವರಿಗೆ ಆಶ್ಚರ್ಯ ಕಾದಿತ್ತು. ಅವರ ಲ್ಯಾಪ್‌ಟಾಪ್‌ನಲ್ಲಿ ಇದ್ದ ಅವರಿಗೆ ಅಗತ್ಯವಾಗಿದ್ದ ಎಲ್ಲ ಮಾಹಿತಿಗಳು ಆ ಯುಎಸ್‌ಬಿ ಡ್ರೈವ್‌ನಲ್ಲಿದ್ದವು. ಕಳ್ಳರಲ್ಲೂ ಒಳ್ಳೆಯವರಿರುತ್ತಾರೆ ಅಲ್ಲವೇ?

e- ಪದ

ಆಂಡ್ರೋಯಿಡ್ (Android) - ಮೊಬೈಲ್ ಫೋನ್‌ಗಳಲ್ಲಿ ಬಳಕೆಯಾಗುವ ಒಂದು ವಿಧದ ಕಾಯಾಚರಣೆಯ ವ್ಯವಸ್ಥೆ. ಇದು ಮೂಲತಃ ಮುಕ್ತ ತಂತ್ರಾಂಶವಾದ ಲಿನಕ್ಸ್‌ನಿಂದ ವಿಕಾಸವಾದುದು. ೨೦೦೫ರಲ್ಲಿ ಇದೇ ಹೆಸರಿನ ಕಂಪೆನಿ ಇದನ್ನು ಪ್ರಥಮವಾಗಿ ತಯಾರು ಮಾಡಿತು. ನಂತರ ಗೂಗಲ್ ಈ ಕಂಪೆನಿಯನ್ನು ಕೊಂಡುಕೊಂಡು ಮುಕ್ತವಾಗಿ ಬಿಡುಗಡೆ ಮಾಡಿದೆ. ಈಗ ಪ್ರಪಂಚದ ಸುಮಾರು ಶೇಕಡ ೨೦ ಸ್ಮಾರ್ಟ್‌ಫೋನ್‌ಗಳು ಈ ಕಾರ್ಯಾಚರಣೆಯ ವ್ಯವಸ್ಥೆಯನ್ನು ಬಳಸುತ್ತವೆ. ಈ ನಮೂನೆಯ ಫೋನುಗಳಲ್ಲಿ ಅಂತರಜಾಲ ಸಂಪರ್ಕ, ಇಮೈಲ್, ಜಿಪಿಎಸ್, ಇತ್ಯಾದಿ ಎಲ್ಲ ಸೌಲಭ್ಯಗಳಿರುತ್ತವೆ.

e - ಸಲಹೆ

ಆಂಡ್ರೋಯಿಡ್ ಫೋನಿನಲ್ಲಿ ಕನ್ನಡ

ಆಂಡ್ರೋಯಿಡ್ ಫೋನಿನಲ್ಲಿ ಕನ್ನಡ ಯುನಿಕೋಡ್ ಜಾಲತಾಣ ವೀಕ್ಷಣೆ ಮಾಡಬೇಕೇ? ಅದಕ್ಕಾಗಿ ನೀವು ಪ್ರಥಮವಾಗಿ ಒಪೆರಾ ಮಿನಿ ಎಂಬ ಜಾಲತಾಣ ವೀಕ್ಷಣೆಯ ತಂತ್ರಾಂಶವನ್ನು ಆಂಡ್ರೋಯಿಡ್ ಜಾಲತಾಣದಿಂದ ಫೋನಿಗೆ ಡೌನ್‌ಲೋಡ್ ಮಾಡಿಕೊಳ್ಳಬೇಕು. ನಂತರ ಜಾಲತಾಣದ ವಿಳಾಸ ನಮೂದಿಸುವ ಜಾಗದಲ್ಲಿ about:config ಎಂದು ಟೈಪಿಸಬೇಕು. ಅಲ್ಲಿ ಮೂಡಿಬರುವ ಆಯ್ಕೆಗಳಲ್ಲಿ Use bitmap fonts for complex scripts ಎಂದು ಆಯ್ಕೆ ಮಾಡಿಕೊಳ್ಳಬೇಕು. ನಂತರ ಕನ್ನಡ ಯುನಿಕೋಡ್‌ನಲ್ಲಿರುವ ಜಾಲತಾಣಗಳ ವೀಕ್ಷಣೆ ಮಾಡಬಹುದು.

ಕಂಪ್ಯೂತರ್ಲೆ

ಐಟಿ ಮಂದಿ ಹಾಡು

ಮುದ್ದು ಕಂದನಾಗಿ ಹುಟ್ಟಿ ಕೀಬೋರ್ಡ್ ಮೌಸ್ ಕುಟ್ಟಿಕೊಂಡು
ಹಂಗೂ ಹಿಂಗೂ ಪ್ರೋಗ್ರಾಮ್ ಮಾಡಿ ಲೈಫು ಇಷ್ಟೇನೆ

6 ಕಾಮೆಂಟ್‌ಗಳು:

  1. ಕಷ್ಟ ಪಟ್ಟು onsite ಹೋಗಿ, ಹಂಗೂ ಹಿಂಗೂ ಕಾಸು ಮಾಡಿ, ವಾಪಾಸ್ ಬಂದು ಗಮ್ಮತ್ ಮಾಡು ಲೈಫು ಇಷ್ಟೇನೆ

    ಪ್ರತ್ಯುತ್ತರಅಳಿಸಿ
  2. "ಆಂಡ್ರೋಯಿಡ್ ಫೋನಿನಲ್ಲಿ ಕನ್ನಡ" ಮಾಹಿತಿ ಉಪಯುಕ್ತವಾಗಿದೆ.

    *ಉತ್ತಮ ಕಳ್ಳ !!!? :-) :-)

    ಪ್ರತ್ಯುತ್ತರಅಳಿಸಿ
  3. www.compuinkannada.co.cc ಬಗ್ಗೆ ಯಾವ ಪತ್ರಿಕೆಯಲ್ಲಿ ಮಾಹಿತಿ ಬಂದಿತ್ತೆಂದು ದಯವಿಟ್ಟು ತಿಳಿಸಿ.

    ಪ್ರತ್ಯುತ್ತರಅಳಿಸಿ
  4. @ಕಂಪ್ಯು ಇನ ಕನ್ನಡ ಲೇಖನಗಳು -

    ನನಗೆ ತಿಳಿದಂತೆ ಯಾವ ಪತ್ರಿಕೆಯಲ್ಲೂ ಬಂದಿಲ್ಲ

    -ಪವನಜ

    ಪ್ರತ್ಯುತ್ತರಅಳಿಸಿ
  5. ಆಂಡ್ರೋಯಿಡ್ ಫೋನಿನಲ್ಲಿ ಕನ್ನಡ
    ಬಹಳ ಉಪಯುಕ್ತ ಮಾಹಿತಿ

    ಪ್ರತ್ಯುತ್ತರಅಳಿಸಿ