ಮಂಗಳವಾರ, ಫೆಬ್ರವರಿ 1, 2011

ಗಣಕಿಂಡಿ - ೦೮೯ (ಜನವರಿ ೩೧, ೨೦೧೧)

ಅಂತರಜಾಲಾಡಿ

ಕಿರಿಕಿರಿ ಕರೆ ತಪ್ಪಿಸಿ

“ಹಲೋ, ನಾನು xyz ಬ್ಯಾಂಕಿನಿಂದ ಮಾತನಾಡುತ್ತಿದ್ದೇನೆ. ನಿಮಗೆ ಕ್ರೆಡಿಟ್ ಕಾರ್ಡ್ ಬೇಕೇ?” ಎಂಬ ಮಾದರಿಯ ಕರೆಗಳು ನಿಮ್ಮ ಚರ ಅಥವಾ ಸ್ಥಿರ ದೂರವಾಣಿಗೆ ಬರುತ್ತಲೇ ಇವೆಯಾ? ಇಂತಹ ಕಿರಿಕಿರಿ ಕರೆಗಳಿಂದ ತಪ್ಪಿಸಿಕೊಳ್ಳಬೇಕಾದರೆ ನಿಮ್ಮ ದೂರವಾಣಿಯನ್ನು ರಾಷ್ಟ್ರೀಯ ಕರೆ ಮಾಡಬೇಡಿ ಎಂಬ ಪಟ್ಟಿಯಲ್ಲಿ ಸೇರಿಸಬೇಕು. ವಾಣಿಜ್ಯಕ ಕರೆ ಮಾಡುವವರು ಕರೆ ಮಾಡುವ ಮೊದಲು ತಾವು ಕರೆ ಮಾಡಲು ಹೊರಟ ದೂರವಾಣಿ ಸಂಖ್ಯೆ ಈ ಪಟ್ಟಿಯಲ್ಲಿ ಇದೆಯೇ ಎಂದು ಪರಿಶೀಲಿಸಿ ನೋಡತಕ್ಕದ್ದು. ಈ ಪಟ್ಟಿಯಲ್ಲಿ ಇರುವ ದೂರವಾಣಿಗೆ ಕರೆ ಮಾಡಿದರೆ ದಂಡ ತೆರಬೇಕಾಗುತ್ತದೆ. ಈ ಜಾಲತಾಣದ ವಿಳಾಸ - ndncregistry.gov.in. ಈ ಪಟ್ಟಿಯಲ್ಲಿ ನಿಮ್ಮ ದೂರವಾಣಿ ಸಂಖ್ಯೆ ದಾಖಲಾಗಿದೆಯೇ ಎಂದು ಪರಿಶೀಲಿಸಿ. ಇಲ್ಲವಾದಲ್ಲಿ ಕೂಡಲೆ ದಾಖಲಿಸಿ. ಕಿರಿಕಿರಿ ಕರೆಗಳಿಂದ ಮುಕ್ತವಾಗಿ.

ಡೌನ್‌ಲೋಡ್

ಮೈಕ್ರೋಸಾಫ್ಟ್ ಗಣಿತ


ಗಣಿತದ ಸಮೀಕರಣಗಳು ತಲೆತಿನ್ನುತ್ತಿದ್ದರೆ ಅವುಗಳನ್ನು ಗಣಕದಲ್ಲಿ ಬಿಡಿಸುವ ತಂತ್ರಾಂಶಗಳು ಕೆಲವಿವೆ. ಆದರೆ ಅವುಗಳಲ್ಲಿ ಹೆಚ್ಚಿನವು ವಾಣಿಜ್ಯಕ ಅಂದರೆ ಹಣ ಕೊಟ್ಟು ಕೊಂಡುಕೊಳ್ಳಬೇಕಾದವು. ಇತ್ತೀಚೆಗೆ ಮೈಕ್ರೋಸಾಫ್ಟ್ ಕಂಪೆನಿ ಇಂತಹ ಒಂದು ತಂತ್ರಾಂಶವನ್ನು ಉಚಿತವಾಗಿ ನೀಡಲು ಪ್ರಾರಂಭಿಸಿದೆ. ಇದರ ಹೆಸರು Microsoft Mathematics. ಇದರಲ್ಲಿ ಗಣಿತದ ಕ್ಲಿಷ್ಟ ಸಮಸ್ಯೆಗಳನ್ನು ಬಿಡಿಸಬಹುದು. ಸಮೀಕರಣಗಳನ್ನು ಬಿಡಿಸಬಹುದು ಹಾಗೂ ಅವುಗಳ ಗ್ರಾಫ್ ತಯಾರಿಸಬಹುದು. ಈ ಗ್ರಾಫ್‌ಗಳನ್ನು ಎರಡು ಆಯಾಮ ಮತ್ತು ಮೂರು ಆಯಾಮಗಳಲ್ಲಿ ಚಿತ್ರಿಸಬಹುದು. ಈ ತಂತ್ರಾಂಶ ಬೇಕಿದ್ದಲ್ಲಿ ನೀವು ಭೇಟಿ ನೋಡಬೇಕಾದ ಜಾಲತಾಣ  http://bit.ly/gAfS92.

e - ಸುದ್ದಿ

ಚಿತ್ರಗಳಿಗೂ ಜೀವಿತಾವಧಿ

ಔಷಧಿಗಳಿಗೆ ಬಳಸಬೇಕಾದ ತಾರೀಕಿನ ಮಿತಿ ಅಂದರೆ ಎಕ್ಸ್‌ಪೈರಿ ಡೇಟ್ ನಮೂದಿಸಿರುವುದು ಗೊತ್ತಿದೆ ತಾನೆ? ಅದೇ ರೀತಿ ಚಿತ್ರಗಳಿಗೂ ಇಂತಹ ದಿನಾಂಕದ ನಂತರ ಅದು ಗೋಚರವಾಗದಂತೆ ಮಾಡುವ ತಂತ್ರಜ್ಞಾನವನ್ನು ಜರ್ಮನಿಯ ವಿಜ್ಞಾನಿಗಳು ಅನ್ವೇಷಿಸಿದ್ದಾರೆ. ಇದರ ಉಪಯೋಗ ಏನು ಅಂತ ಆಲೋಚಿಸುತ್ತಿದ್ದೀರಾ? ನೀವು ಫೇಸ್‌ಬುಕ್‌ನಂತಹ ಜಾಲತಾಣದಲ್ಲಿ ಒಂದು ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಚಿತ್ರ ರೂಪದಲ್ಲಿ ಹಾಕಿದ್ದೀರಿ ಎಂದುಕೊಳ್ಳೋಣ. ಆ ಕಾರ್ಯಕ್ರಮ ಜರುಗಿದ ನಂತರ ಆ ಚಿತ್ರ ನಿಮ್ಮ ಜಾಲತಾಣದಲ್ಲಿ ಇರಬಾರದು ಅಥವಾ ಅದು ಅದೃಶ್ಯವಾಗಿರಬೇಕು. ವಿದೇಶಿಯರಿಗೆ ಈ ತಂತ್ರಜ್ಞಾನದ ಇನ್ನೊಂದು ದೊಡ್ಡ ಅಗತ್ಯವಿದೆ. ಅವರಲ್ಲಿ ಹೆಂಡತಿ/ಗಂಡ/ಗರ್ಲ್‌ಫ್ರೆಂಡ್/ಬಾಯ್‌ಫ್ರೆಂಡ್ ಆಗಾಗ ಬದಲಾಗುತ್ತಿರುತ್ತದೆ. ಫೇಸ್‌ಬುಕ್‌ನಂತಹ ಜಾಲತಾಣದಲ್ಲಿ ಹಳೆಯ ಚಿತ್ರವೇ ಇದ್ದರೆ ಆಭಾಸವಾಗುತ್ತದೆ. ಅದಕ್ಕೆ ಚಿತ್ರಗಳಿಗೆ ಇಂತಿಷ್ಟು ದಿನಗಳ ನಂತರ ಕಾಣಿಸದಂತೆ ಮಾಡುವ ತಂತ್ರಜ್ಞಾನದ ಅಗತ್ಯವಿದೆ.

e- ಪದ

ಜಾಲತಾಣಸೂಚಿ (ಯು.ಆರ್.ಎಲ್., URL = Uniform Resource Locator) - ಇದು ಅಂತರಜಾಲ ತಾಣವನ್ನು ಸೂಚಿಸುತ್ತದೆ. ಅಂತರಜಾಲ ತಾಣವನ್ನು ಗಣಕಗಳು ಮತ್ತು ತಾಣ ವೀಕ್ಷಕ ತಂತ್ರಾಂಶಗಳು (ಬ್ರೌಸರ್ ಸಾಫ್ಟ್‌ವೇರ್, ಉದಾ. ಇಂಟರ್‌ನೆಟ್ ಎಕ್ಸ್‌ಪ್ಲೋರರ್) ಈ ಜಾಲತಾಣಸೂಚಿಯ ಮೂಲಕ ಅಥವಾ ತಾಣದ ಅಂಕೀಯ ವಿಳಾಸದ (IP address. IP = Internet Protocol) ಮೂಲಕ ಪತ್ತೆ ಹಚ್ಚುತ್ತವೆ. ಜಾಲತಾಣಸೂಚಿಗೆ ಕೆಲವು ಉದಾಹರಣೆಗಳು - www.vishvakannada.com, www.kannadaprabha.com.

e - ಸಲಹೆ

ಆದರ್ಶ ಅವರ ಪ್ರಶ್ನೆ: ನನ್ನ ಗಣಕದಲ್ಲಿ ೪ ಗಿಗಾಬೈಟ್ ಮಾಹಿತಿಯನ್ನು ಡಿ.ವಿ.ಡಿ.ಯಲ್ಲಿ ಬರೆಯಲು ಸುಮಾರು ೩೨ ನಿಮಿಷ ತಗಲುತ್ತದೆ. ಇದು ನಿಧಾನವಾಗಲಿಲ್ಲವೇ? ಸಾಮಾನ್ಯವಾಗಿ ಎಷ್ಟು ಸಮಯ ಬೇಕಾಗುತ್ತದೆ?
ಉ: ಡಿ.ವಿ.ಡಿ. ರೈಟರ್‌ನಲ್ಲಿ ಅದರ ವೇಗವನ್ನು 8x, 12x, ಇತ್ಯಾದಿಯಾಗಿ ನಮೂದಿಸಿರುತ್ತಾರೆ. ಹೆಚ್ಚು ವೇಗದಲ್ಲಿ ಬರೆದರೆ ಕಡಿಮೆ ಸಮಯ ಸಾಕು. ಆದರೆ ನಿಧಾನವಾಗಿ ಬರೆಯುವುದು ಒಳ್ಳೆಯದು. ಡಿ.ವಿ.ಡಿ. ಬರೆಯುವಾಗ ಗಣಕದಲ್ಲಿ ಇತರೆ ಕೆಲಸ ಮಾಡಿದರೆ ಕೂಡ ವೇಗ ಕಡಿಮೆಯಾಗುತ್ತದೆ. ಹಾಗೆಯೇ ಗಣಕದಲ್ಲಿ ಹೆಚ್ಚು ಮೆಮೊರಿ ಇದ್ದರೆ ಒಳ್ಳೆಯದು.

ಕಂಪ್ಯೂತರ್ಲೆ


ಅಮೆರಿಕಾದ ಪಕ್ಕದಲ್ಲಿ ಇದೆ ಎಂದು ನಂಬಿರುವ ಬರ್ಮುಡ ತ್ರಿಕೋನ ತುಂಬ (ಕು)ಪ್ರಸಿದ್ಧ. ಅಟ್ಲಾಂಟಿಕ್ ಸಾಗರದಲ್ಲಿರುವ ಈ ಕಾಲ್ಪನಿಕ ತ್ರಿಕೋನ ಪ್ರದೇಶದಲ್ಲಿ ಹಲವಾರು ವಿಮಾನ ಮತ್ತು ಹಡಗುಗಳು ನಾಪತ್ತೆಯಾಗಿವೆ. ಇದಕ್ಕೆ ಕಾರಣ ಇದುತನಕ ಗೊತ್ತಾಗಿಲ್ಲ. ಈಗ ಗಣಕ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರ ಉಪಯುಕ್ತ ಸಮಯವನ್ನು ನಾಪತ್ತೆ ಮಾಡುವ ಬರ್ಮುಡ ತ್ರಿಕೋನ ಪತ್ತೆಯಾಗಿದೆ. ಅದರ ಮೂರು ಮೂಲೆಗಳಲ್ಲಿ ಕ್ರಮವಾಗಿ ಜಿಮೈಲ್, ಫೇಸ್‌ಬುಕ್ ಮತ್ತು ಟ್ವಿಟ್ಟರ್ ಇವೆ. ಈ ಮೂರು ಸೇರಿ ಎಲ್ಲರ ಉಪಯುಕ್ತ ಸಮಯವನ್ನು ನಾಪತ್ತೆ ಮಾಡುತ್ತವೆ.

1 ಕಾಮೆಂಟ್‌: