ಸೋಮವಾರ, ಜೂನ್ 7, 2010

ಗಣಕಿಂಡಿ - ೦೫೪ (ಜೂನ್ ೦೭, ೨೦೧೦)

ಅಂತರಜಾಲಾಡಿ

ಕಂಠಲಂಗೋಟಿ ಬಿಗಿಯುವುದು ಹೇಗೆ?

ಈ ಕಂಠಲಂಗೋಟಿ ಅಂದರೆ ಟೈ ಕಟ್ಟುವುದು ಇದೆಯಲ್ಲ ಅದು ತುಂಬ ಕಿರಿಕಿರಿಯ ಕೆಲಸ. ಮೊದಲನೆಯ ಸರ್ತಿಗೇ ಅದು ಸರಿಯಾಗಿ ಬರುವುದು ತುಂಬ ಕಷ್ಟ. ದಿನಾ ಟೈ ಕಟ್ಟುವವರಿಗೆ ಅದೇನೂ ಕಷ್ಟದ ಕೆಲಸವಲ್ಲ. ಆದರೆ ಸಮಸ್ಯೆ ಬರುವುದು ಯಾವಾಗಾದರೊಮ್ಮೆ ಟೈ ಬಿಗಿಯುವವರಿಗೆ. ಟೈ ಕಟ್ಟುವುದನ್ನು ಕಲಿಯಬೇಕೇ? ಹಾಗಿದ್ದರೆ ನೀವು ಭೇಟಿ ನೀಡಬೇಕಾದ ಜಾಲತಾಣ www.tie-a-tie.net. ಬೇರೆ ಬೇರೆ ವಿಧಗಳಲ್ಲಿ ಟೈ ಕಟ್ಟುವುದನ್ನು ಈ ಜಾಲತಾಣ ನೋಡಿ ಕಲಿಯಬಹುದು. ನಿಮ್ಮ ಎತ್ತರ ಮತ್ತು ಕುತ್ತಿಗೆಯ ಸುತ್ತಳತೆ ಕೊಟ್ಟರೆ ನಿಮಗೆ ಎಷ್ಟು ಉದ್ದದ ಟೈ ಬೇಕು ಎಂಬುದನ್ನು ಅದು ಲೆಕ್ಕಹಾಕಿ ಹೇಳುತ್ತದೆ!


ಡೌನ್‌ಲೋಡ್

ಬೇಸಿಕ್ ಪ್ರೋಗ್ರಾಮ್ಮಿಂಗ್ ಕಲಿಯಿರಿ

ಒಂದು ಕಾಲದಲ್ಲಿ ಎಲ್ಲ ಪ್ರೌಢ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಬೇಸಿಕ್ (BASIC) ಪ್ರೋಗ್ರಾಮ್ಮಿಂಗ್ (ಗಣಕ ಕ್ರಮವಿಧಿ ರಚನೆಯ) ಭಾಷೆಯನ್ನು ಕಲಿಸಲಾಗುತ್ತಿತ್ತು. ಆಗ ವಿಂಡೋಸ್ ಇಷ್ಟು ಜನಪ್ರಿಯವಾಗಿರಲಿಲ್ಲ. ವಿಂಡೋಸ್ ಮತ್ತು ಅದರ ಜೊತೆ ಹೊಸ ಸುಧಾರಿತ ಪ್ರೋಗ್ರಾಮ್ಮಿಂಗ್ ಭಾಷೆಗಳ ಕಾಲ ಬಂದಂತೆ ಹಳೆಯ ಬೇಸಿಕ್ ಮೂಲೆಗುಂಪಾಗತೊಡಗಿತು. ಹಳೆಯ ಡಾಸ್ (DOS) ಆಧಾರಿತ ಬೇಸಿಕ್ ಈಗಿನ ಹೊಸ ವಿಂಡೋಸ್‌ನಲ್ಲಿ ಕೆಲಸ ಮಾಡುವುದೂ ಇಲ್ಲ. ಈ ಸಮಸ್ಯೆಗೆ ಪರಿಹಾರವಾಗಿ BASIC256 ಎಂಬ ತಂತ್ರಾಂಶ ಲಭ್ಯವಿದೆ. ಇದು ಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣ - http://bit.ly/dwFQLz. ಶಾಲೆಗಳಲ್ಲಿ ಗಣಕ ಕಲಿಸುವ ಅಧ್ಯಾಪಕರುಗಳಿಗೆ ಇದು ಖಂಡಿತ ಉಪಯುಕ್ತ ತಂತ್ರಾಂಶ.


e - ಸುದ್ದಿ

ಮಿಥ್ಯಾ ಕೊಲೆಗಾರನಿಗೆ ನಿಜ ದಾಳಿ

ಅಂತರಜಾಲದ ಮೂಲಕ ಯಾವುದೋ ದೇಶದಲ್ಲಿರುವ ಯಾರದೋ ಜೊತೆ ಆಟ ಆಡುವ ಸೌಲಭ್ಯವನ್ನು ಹಲವು ಜಾಲತಾಣಗಳು ನೀಡುತ್ತಿವೆ. ಇಂತಹ ಆಟವೊಂದರಲ್ಲಿ ಫ್ರಾನ್ಸ್ ದೇಶದ ೨೦ರ ಹರೆಯದ ಯುವಕನೊಬ್ಬ ಯಾರದೋ ಜೊತೆ “ಕಾಳಗ” ಮಾಡುತ್ತಿದ್ದ. ಅದರಲ್ಲಿ ಇವನ ಮಿಥ್ಯಾಸೈನಿಕನನ್ನು ಆತನ ಎದುರಾಳಿಯ ಮಿಥ್ಯಾಸೈನಿಕ ಕೊಂದು ಹಾಕಿದ. ಅದರಲ್ಲೇನು ಮಹಾ ವಿಶೇಷ ಅನ್ನುತ್ತೀರಾ? ಮುಂದೆ ಕೇಳಿ. ತನ್ನ ಮಿಥ್ಯಾಸೈನಿಕನನ್ನು ಕೊಂದವನನ್ನು ಆರು ತಿಂಗಳುಗಳ ಕಾಲ ಹುಡುಕಾಡಿ ಆತ ಕೊನೆಗೂ ಪತ್ತೆಹಚ್ಚಿದ. ನಿಜವಾದ ಚೂರಿ ಕೈಯಲ್ಲಿ ಹಿಡಿದುಕೊಂಡು ಆತನ ಮೇಲೆ ದಾಳಿ ಮಾಡಿದ. ಮಿಥ್ಯಾಕಾಳಗದಲ್ಲಿ ಆತ ಹೇಗೆ ಸೋತಿದ್ದನೋ ಹಾಗೆಯೇ ನಿಜ ಕಾಳಗದಲ್ಲೂ ಸೋತು ಪೋಲೀಸರ ಅತಿಥಿಯಾದ. ಆತನಿಗೆ ಎರಡು ವರ್ಷ ಕಾರಾಗೃಹವಾಸದ ಶಿಕ್ಷೆ ವಿಧಿಸಲಾಗಿದೆ.

e- ಪದ

ಐವಿಆರ್ (IVR - Interactive Voice Response) - ಪ್ರತಿಸ್ಪಂದನಾತ್ಮಕ ಮಾರುಲಿ. ಕಂಪೆನಿಗಳಿಗೆ, ಫೋನ್ ಸಂಪರ್ಕ ಸೇವೆ ನೀಡುವವರಿಗೆ, ಬ್ಯಾಂಕ್‌ಗಳಿಗೆ -ಹೀಗೆ ಹಲವಾರು ಕಡೆ ದೂರವಾಣಿ ಮೂಲಕ ಅವರ ಗ್ರಾಹಕ ಸೇವೆಯವರನ್ನು ಸಂಪರ್ಕಿಸಿದಾಗ ಸ್ವಯಂಚಾಲಿತವಾಗಿ ಗಣಕದ ಮೂಲಕ ನಿಮಗೆ ಉತ್ತರ ಕೇಳಿ ಬರುತ್ತದೆ -“ಕನ್ನಡ ಭಾಷೆಗೆ ಸಂಖ್ಯೆ ಒಂದನ್ನು ಒತ್ತಿ, ... ನಿಮ್ಮ ದೂರವಾಣಿ ಸಂಖ್ಯೆಯನ್ನು ಒತ್ತಿ, ಬಿಲ್ ಮಾಹಿತಿಗೆ ಸಂಖ್ಯೆ ಐದನ್ನು ಒತ್ತಿ, ..” -ಇತ್ಯಾದಿ. ನೀವು ಒತ್ತಿದ ಸಂಖ್ಯೆಗೆ ಅನುಗುಣವಾಗಿ ನಿಮಗೆ ಬೇಕಾದ ಸೌಲಭ್ಯ ಗಣಕದ ಮೂಲಕ ಸಿಗುತ್ತದೆ. ನಿವು ನಿಮ್ಮ ದೂರವಾಣಿ ಯಂತ್ರದಲ್ಲಿ ಯಾವ ಸಂಖ್ಯೆಯನ್ನು ಒತ್ತಿದ್ದೀರಿ ಎಂಬುದನ್ನು ಗಣಕವೇ ಅರ್ಥೈಸಿಕೊಂಡು ಅದನ್ನು ವಿಶ್ಲೇಷಿಸಿ, ಗಣಕದಿಂದ ಮಾಹಿತಿಯನ್ನು ತೆಗೆದು ನಿಮಗೆ ನೀಡುತ್ತದೆ. ಇವೆಲ್ಲ ಸ್ವಯಂಚಾಲಿತವಾಗಿ ನಡೆಯುತ್ತದೆ.

e - ಸಲಹೆ

ಸೂರಜ್ ಪಾಟೀಲರ ಪ್ರಶ್ನೆ: ನನಗೆ ಕರಾಓಕೆ ಸಿ.ಡಿ.ಗಳು ಬೇಕು. ಯಾವ ಜಾಲತಾಣದಲ್ಲಿ ಸಿಗುತ್ತವೆ?
ಉ: totalkannada.com ಜಾಲತಾಣದಲ್ಲಿ ಸಿಗುತ್ತವೆ. ಕರಾಓಕೆ ವಿಭಾಗಕ್ಕೆ ನೇರವಾಗಿ ಹೋಗಬೇಕಾಗಿದ್ದರೆ ನೀವು http://bit.ly/cfdUGM ಗೆ ಭೇಟಿ ನೀಡಿ.
   
ಕಂಪ್ಯೂತರ್ಲೆ

ಪ್ರ: ಗೂಗ್ಲ್ ಮತ್ತು ಇಬೇ ಕಂಪೆನಿಗಳು ಒಂದಾದರೆ ಆ ಕಂಪೆನಿಯ ಹೆಸರು ಏನಿರುತ್ತದೆ?
ಉ: ಗೂಬೆ.

1 ಕಾಮೆಂಟ್‌: