ಸೋಮವಾರ, ಜುಲೈ 26, 2010

ಗಣಕಿಂಡಿ - ೦೬೨ (ಜುಲೈ ೨೬, ೨೦೧೦)

ಅಂತರಜಾಲಾಡಿ

ಕಾನೂನು ದುರುಪಯೋಗ ನಿಲ್ಲಿಸಿ

ವರದಕ್ಷಿಣೆ ವಿರೋಧಿ ಕಾನೂನು ನಮ್ಮ ದೇಶದಲ್ಲಿ ಅಸ್ತಿತ್ವದಲ್ಲಿದೆ. ಈ ಕಾನೂನು ಎಷ್ಟು ತೀಕ್ಷ್ಣವಾಗಿದೆಯೆಂದರೆ ಇದರ ಉಪಯೋಗದ ಜೊತೆ ದುರುಪಯೋಗವೂ ತುಂಬ ಆಗುತ್ತಿದೆ. ಈ ಕಾನೂನು ಪ್ರಕಾರ ಯಾವುದೇ ಹೆಂಗಸು ತನ್ನ ಗಂಡ, ಮಾವ, ಅತ್ತೆ ಯಾ ಗಂಡನ ಹತ್ತಿರದ ಸಂಬಂಧಿಗಳ ವಿರುದ್ಧ ವರದಕ್ಷಿಣೆ ವಿರೋಧಿ ಕಾನೂನು ಪ್ರಕಾರ ದೂರು ಸಲ್ಲಿಸಿದರೆ ಅವರನ್ನು ಜಾಮೀನು ರಹಿತವಾಗಿ ಬಂಧಿಸಲಾಗುವುದು. ಅವರು ನಿರಪರಾಧಿ ಎಂದು ತೀರ್ಮಾನವಾಗುವಾಗ ಕನಿಷ್ಠ ೫ ವರ್ಷಗಳಾಗಿರುತ್ತವೆ. ಈ ಕಾನೂನಿಗೆ ಕೆಲವು ಮಾರ್ಪಾಡುಗಳನ್ನು ತರಬೇಕು ಎಂದು ಹಲವು ಮಂದಿ ಒತ್ತಾಯಿಸುತ್ತಿದ್ದಾರೆ. ಈ ಕಾನೂನಿನ ದುರುಪಯೋಗಕ್ಕೆ ಸಿಲುಕಿ ನೊಂದವರಿಗಾಗಿ ಹಾಗೂ ಇತರರಿಗೆ ಮಾಹಿತಿಗಾಗಿ ಒಂದು ಜಾಲತಾಣವಿದೆ. ಅದರ ವಿಳಾಸ www.498a.org. ಮನೆಗಳಲ್ಲಿ ನಡೆಯುವ ಹಿಂಸೆಯ ವಿರುದ್ಧ ಇತ್ತೀಚೆಗೆ ಅಸ್ತಿತ್ವಕ್ಕೆ ಬಂದಿರುವ ಹೊಸ ಕಾನೂನಿನ ಬಗ್ಗೆಯೂ ಇದೇ ಜಾಲತಾಣದಲ್ಲಿ ಒಂದು ವಿಭಾಗವಿದೆ. 

ಡೌನ್‌ಲೋಡ್

ಡಿ.ವಿ.ಡಿ. ಕತ್ತರಿಸಿ

ನಿಮ್ಮಲ್ಲಿ ಚಲನಚಿತ್ರದ ಡಿ.ವಿ.ಡಿ. ಇದೆ. ಅದನ್ನು ನಿಮ್ಮ ಗಣಕದ ಹಾರ್ಡ್‌ಡಿಸ್ಕ್‌ಗೆ ಪ್ರತಿಮಾಡಿಕೊಳ್ಳಬೇಕೇ? ಒಂದು ವಿಧಾನವೆಂದರೆ ಅದರಲ್ಲಿರುವ ಫೈಲುಗಳನ್ನು ಸುಮ್ಮನೆ ಗಣಕಕ್ಕೆ ಪ್ರತಿ ಮಾಡಿಕೊಳ್ಳುವುದು. ಆದರೆ ಅದು ಸರಿಯಾದ ವಿಧಾನವಲ್ಲ. ಸಿ.ಡಿ. ಅಥವಾ ಡಿ.ವಿ.ಡಿ.ಯಲ್ಲಿರುವ ಹಾಡು ಅಥವಾ ಚಲಚಿತ್ರವನ್ನು ಗಣಕದಲ್ಲಿ ಚಾಲೂ ಮಾಡಬಲ್ಲ ವಿಧಾನಕ್ಕೆ ಪರಿವರ್ತಿಸುವುದಕ್ಕೆ ರಿಪ್ಪಿಂಗ್ ಎನ್ನುತ್ತಾರೆ. ಇದು ನಿಜವಾದ ಅರ್ಥದಲ್ಲಿ ಸಿ.ಡಿ. ಅಥವಾ ಡಿ.ವಿ.ಡಿ.ಯನ್ನು ಕತ್ತರಿಸುವುದಲ್ಲ. ಅದರಲ್ಲಿರುವ ಬಹುಮಾಧ್ಯಮ ಮಾಹಿತಿಯನ್ನು ಕತ್ತರಿಸಿ ಪರಿವರ್ತಿಸಿ ಗಣಕಕ್ಕೆ ಇಳಿಸುವುದು. ಈ ರೀತಿ ಮಾಡುವುದಕ್ಕೆ ಅನುವುಮಾಡಿಕೊಡುವ ಉಚಿತ ಹಾಗೂ ಮುಕ್ತ ತಂತ್ರಾಂಶ HandBrake. ಇದು ದೊರೆಯುವ ಜಾಲತಾಣ handbrake.fr.

e - ಸುದ್ದಿ

ಟ್ವಿಟ್ಟರಿನಲ್ಲಿ ಆತ್ಮಹತ್ಯೆ

ಟ್ವಿಟ್ಟರ್‌ನ ಅತಿರೇಕಗಳಿಗೆ ಇನ್ನೊಂದು ಸೇರ್ಪಡೆ. ದಕ್ಷಿಣ ಕೊರಿಯಾದ ೨೭ ವರ್ಷ ಪ್ರಾಯದ ಲೀ ಕ್ಯೀ ಹ್ವಾ ಎಂಬಾತ ಆತ್ಮಹತ್ಯೆ ಮಾಡಿಕೊಂಡ. ಆದರೆ ಆತ ಅದನ್ನು ಘೋಷಿಸಿದ್ದು ಟ್ವಿಟ್ಟರ್ ಮೂಲಕ. “ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ” ಎಂದಾತ ಟ್ವಿಟ್ಟರಿನಲ್ಲಿ ಸಂದೇಶ ಸೇರಿಸಿದ್ದ. ಅದನ್ನು ಓದಿದ ಆತನ ಸ್ನೇಹಿತರು ಆತನಿಗೆ ಹುಡುಕಾಡಿದರು. ಕೊನೆಗೂ ಅತ ಸಿಕ್ಕಿದ, ಅಲ್ಲ, ಆತನ ಶವ ಸಿಕ್ಕಿತು.

e- ಪದ

ರಿಪ್ಪರ್ (ripper) - ಸಿ.ಡಿ. ಅಥವಾ ಡಿ.ವಿ.ಡಿ.ಯಿಂದ ಬಹುಮಾಧ್ಯಮ ಮಾಹಿತಿಯನ್ನು ಅಂದರೆ ಹಾಡು ಅಥವಾ ಚಲನಚಿತ್ರವನ್ನು ಪ್ರತ್ಯೇಕಿಸಿ ಗಣಕಕ್ಕೆ ಪ್ರತಿಮಾಡುವ ತಂತ್ರಾಂಶ. ಈ ರೀತಿ ಪರಿವರ್ತಿಸುವುದನ್ನು ರಿಪ್ಪಿಂಗ್ ಎನ್ನುತ್ತಾರೆ.

e - ಸಲಹೆ

ಬೆಳ್ತಂಗಡಿಯ ರಾಜೇಂದ್ರ ಕೃಷ್ಣರ ಪ್ರಶ್ನೆ: ನನಗೆ ಎಂಪಿ೩ ಕತ್ತರಿಸುವ ಉಚಿತ ತಂತ್ರಾಂಶ ಬೇಕು. ಎಲ್ಲಿ ಸಿಗುತ್ತದೆ?  
ಉ: http://bit.ly/clqOi8

ಕಂಪ್ಯೂತರ್ಲೆ

ಕೋಲ್ಯ ಯಾವಾಗಲೂ ಗಣಕಕ್ಕೆ ಅಂಟಿಕೊಂಡೇ ಇರುತ್ತಿದ್ದ. ಇದರಿಂದ ಬೇಸತ್ತ ಕೋಲ್ಯನ ಹೆಂಡತಿ ಸುವಾಸನೆಗಳನ್ನು ಮಾರುವ ಅಂಗಡಿಗೆ ಹೋಗಿ ಕೇಳಿದಳು “ನಿಮ್ಮಲ್ಲಿ ಕಂಪ್ಯೂಟರಿನಂತೆ ವಾಸನೆ ಸೂಸುವ ಪರ್ಫ್ಯೂಮ್ ಇದೆಯೇ?”

2 ಕಾಮೆಂಟ್‌ಗಳು: